ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಲೆಗಳಿಗೆ ಮತ್ತಷ್ಟು ಅನುದಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಂಗಳೂರಿನಲ್ಲಿ ರಾಜಕೀಯ ಚದುರಂಗದಾಟ ಜೋರಾಗಿ ನಡೆಯುತ್ತಿದೆ. ಶಾಸಕರು ಅಭಿವೃದ್ಧಿ ಮರೆತು ಅಧಿಕಾರಕ್ಕಾಗಿ ನಾಟಕವಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಬಹುತೇಕ ಶಾಸಕರು ಕ್ಷೇತ್ರ ಮರೆತು ಕೇವಲ ರಾಜಕೀಯದಲ್ಲೇ ಮಗ್ನರಾಗಿದ್ದಾರೆ.
ಆದರೆ ಬೆಳಗಾವಿಯ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬೇರೆ. ರಾಜ್ಯ ರಾಜಕೀಯದಲ್ಲಿ ಏನೇ ನಡೆಯಲಿ. ಈ ಕ್ಷೇತ್ರದ ಅಭಿವೃದ್ಧಿ ಮಾತ್ರ ನಿಂತಿಲ್ಲ. ಒಂದಾದಮೇಲೆೊಂದರಂತೆ ವಿವಿಧ ಇಲಾಖೆಗಳಿಂದ ಅನುದಾನ ಗ್ರಾಮೀಣ ಕ್ಷೇತ್ರಕ್ಕೆ ಹರಿದುಬರುತ್ತಲೇ ಇದೆ.
ಇದಕ್ಕೆ ಕಾರಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್. ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾಗುವುದಕ್ಕೂ ಮೊದಲಿನಿಂದಲೇ, ಅಂದರೆ ಕಳೆದ 5 ವರ್ಷದಿಂದಲೂ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿದ್ದಾರೆ. ಶಾಸಕರಾದ ಮೇಲಂತೂ ನಿರಂತರವಾಗಿ ಅನುದಾನ ತರುತ್ತಲೇ ಇದ್ದಾರೆ.
ಅದಕ್ಕೆ ಈಗ ಮತ್ತಷ್ಟು ಸೇರ್ಪಡೆಯಾಗಿದೆ. ಕ್ಷೇತ್ರದ 22 ಶಾಲೆಗಳಿಗೆ 416.40 ಲಕ್ಷ ರೂ. ಮಂಜೂರಾಗಿದೆ. ಈ ಬಾರಿ ಅವರು ಅನುದಾನ ತಂದಿರುವುದು ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ.
22 ಗ್ರಾಮಗಳ ಶಾಲೆಗಳಿಗಳ ಕಟ್ಟಡ ನಿರ್ಮಾಣ, ಕಟ್ಟಡ ದುರಸ್ಥಿ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಬಯಲು ರಂಗಮಂದಿರ, ಕ್ರೀಡಾ ಕೊಠಡಿ, ಕುಡಿಯುವ ನೀರಿನ ಸೌಲಭ್ಯಗಳಿಗೆ ಒಟ್ಟೂ 4.16 ಕೋಟಿ ರೂ.ಗಳ ಅಂದಾಜು ಸಿದ್ದಪಡಿಸಿ ಲಕ್ಷ್ಮಿ ಹೆಬ್ಬಾಳಕರ್ ವಿವಿಧ ಸಚಿವರ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದರು.
ಇದಕ್ಕೆ ಸಚಿವರ ಶಿಫಾರಸ್ಸಿನಂತೆ ಪ್ರಾಧಿಕಾರ ಕಾಮಗಾರಿಗಳಿಗೆ ಅನುಮದನೆ ನೀಡಿದೆ. ಮೊದಲ ಕಂತಿನ 164 ಲಕ್ಷ ರೂ.ಗಳನ್ನು ನಿನ್ನೆ (ಜು.22) ಬಿಡುಗಡೆ ಮಾಡಿದೆ. ಸಧ್ಯದಲ್ಲೇ ಕಾಮಗಾರಿಗಳ ಟಂಡರ್ ಮತ್ತಿತರ ಪ್ರಕ್ರಿಯೆ ನಡೆಯಲಿದೆ.
ಪ್ರಸ್ತಾವನೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿವರ ಹೀಗಿದೆ (ಲಕ್ಷ ರೂ.ಗಳಲ್ಲಿ):
ಬೆಳಗುಂದಿ 16.65, ಬೆನಕನಳ್ಳಿ 1.80, ಹಾನಗರ್ಗೆ 17.30, ಹಿಂಡಲಗಾ 31, ವಿಜಯ ನಗರ 16.40, ಬೆಕ್ಕಿನಕೇರಿ 13.45, ಕುದ್ರಿಮನೆ 14.85, ತುರಮುರಿ 13.20, ಉಚಗಾವಿ 41.75, ಅಂಬೇವಾಡಿ 13.15, ಗೋಜಗೆ 22.30, ಮಣ್ಣೂರು 41.60, ಸುಳಗೆ (ಯು) 21.05, ನಾವಗೆ 36.60, ಸಂತಿಬಸ್ತವಾಡ 26, ವಾಘವಾಡೆ 6.70, ಶಿವನಗರ 6.70, ರಾಜಹಂಸಗಡ 6.70, ದೇಸೂರು 17.30, ನಂದಿಹಳ್ಳಿ 17.30, ಮಾರ್ಕಂಡೇಯನಗರ (ಪ್ರೌಢ ಶಾಲೆ) 17.30, ಮಾರ್ಕಂಡೇಯನಗರ (ಪ್ರಾಥಮಿಕ ಶಾಲೆ) 17.30 ಲಕ್ಷ ರೂ.
ಬಿಡುವಿಲ್ಲದ ವಿಧಾನಸಭಾ ಅಧಿವೇಶನದ ನಡುವೆಯೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅಭಿವೃದ್ಧಿ ಕಳಕಳಿಗೆ ಕ್ಷೇತ್ರದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ