ಪ್ರಗತಿವಾಹಿನಿ ಸುದ್ದಿ, ಅಥಣಿ: ಹವಾಮಾನ ವೈಪರೀತ್ಯದಿಂದ ೨೦೨೦_೨೧ ನೇಯ ಹಂಗಾಮಿನ ದ್ರಾಕ್ಷಿ ಬೆಳೆ ಬಾರಿ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಬೆಳೆಹಾನಿ ವರದಿ ಸಲ್ಲಿಸಲಾಗಿದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾಹಿತಿ ನೀಡಿದರು.
ಅವರು ತಾಲೂಕಿನ ಖೋತನಟ್ಟಿ ಗ್ರಾಮದಲ್ಲಿ ಮಾತನಾಡಿ ಕಳೆದ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಗೆ ನೆರೆಹಾನಿ ವೈಮಾನಿಕ ಸಮೀಕ್ಷೆಗೆ ಆಗಮಿಸಿದ ಮುಖ್ಯಮಂತ್ರಿ ಅವರು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿರುವ ಸಂದರ್ಭದಲ್ಲಿ ಅಥಣಿ ತಾಲೂಕಿನ ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಒಂದು ಕಡೆ ಕೃಷ್ಣಾ ನದಿಯಿಂದ ಅತಿವೃಷ್ಟಿ ಸಂಭವಿಸಿದರೆ ಮಹಾರಾಷ್ಟ್ರ ರಾಜ್ಯ ಹಾಗೂ ವಿಜಯಪುರ ಜಿಲ್ಲೆಗೆ ಗಡಿ ಹೊಂದಿರುವ ಅಥಣಿ ತಾಲೂಕಿನ ಈ ಭಾಗಗಳಲ್ಲಿ ಅನಾವೃಷ್ಟಿ ಆಗುತ್ತದೆ. ಇದರಿಂದ ಅಥಣಿ ತಾಲೂಕಿನಲ್ಲಿ ೪ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯನ್ನು ಈ ಭಾಗದ ರೈತರು ಅವಲಂಬಿಸಿದ್ದಾರೆ. ಈ ಬಾರಿ ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆಗಾರರಿಗೆ ನಷ್ಟ ಸಂಭವಿಸಿದೆ, ನಾನು ಹಾಗೂ ಬೆಳಗಾವಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಂಘದ ನಿರ್ದೇಶಕ ಸಿದ್ದಪ್ಪ ಮುದಕನ್ನವರ ಜೊತೆಯಾಗಿ ಬಿ ಎಸ್ ಯಡಿಯೂರಪ್ಪನವರ ನವರಿಗೆ ದ್ರಾಕ್ಷಿ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಬೋರ್ಡ್ ರಚನೆ ಮಾಡಬೇಕೆಂದು ಮನವಿ ಜೊತೆಗೆ ವರದಿ ಸಲ್ಲಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿಯವರು ಸಕಾರಾತ್ಮಕ ಸ್ಪಂದನೆ ಮಾಡಿದ್ದಾರೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ೬೭೦೦ ಹೆಕ್ಟೇರ್ ದ್ರಾಕ್ಷಿ ಬೆಳೆದಿದ್ದು, ಅದರಲ್ಲಿ ಅಥಣಿ ತಾಲೂಕಿನಲ್ಲಿಯೇ ೪ ಸಾವಿರ ಹೆಕ್ಟೇರ್ ದ್ರಾಕ್ಷಿ ಬೆಳೆಯನ್ನು ರೈತರು ಅವಲಂಬಿಸಿದ್ದಾರೆ. ಎರಡು ತಿಂಗಳಿಂದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು ಆದಷ್ಟು ಬೇಗ ದ್ರಾಕ್ಷಿ ಬೆಳೆಗಾರರಿಗೆ ಪರಿಹಾರ ವಿತರಣೆ ಮಾಡಲಿ ಎಂಬುದು ಈ ಭಾಗದ ರೈತರ ಬೇಡಿಕೆಯಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ