Latest

ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಬೇಗ ಸುಧಾರಿಸಲಿ

ಪ್ರಗತಿವಾಹಿನಿ ಸುದ್ದಿ, ಚೆನ್ನೈ – ಶ್ರೇಷ್ಠ ಗಾಯಕರ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ (ಎಸ್.ಪಿ.ಬಾಲಸುಬ್ರಹ್ಮಣ್ಯಂ) ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ.
 ಚೆನ್ನೈನ ಎಮ್ ಜಿ ಎಂ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ದಲ್ಲಿ  ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಪುತ್ರ ಚರಣ್ ಪ್ರಕಾರ ಎಸ್ಪಿ ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡುಬಂದಿದೆ. ಅವರು ಚಲನೆಯನ್ನು ಆರಂಭಿಸಿದ್ದಾರೆ.
ಇದೇ ತಿಂಗಳ ಐದನೇ ತಾರೀಖಿನಂದು ಕೋವಿಡ್ ಪಾಸಿಟೀವ್ ಬಂದಿರುವುದರಿಂದ  ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆಂದು, ತಮಗೆ ಕೇವಲ ಶೀತ ಮತ್ತು ಜ್ವರವಿರುವುದರಿಂದ ಆದಷ್ಟು ಶೀಘ್ರವಾಗಿ ಗುಣಮುಖರಾಗಿ ಬರುತ್ತೇನೆಂದು ಫೇಸ್ ಬುಕ್ ನಲ್ಲಿ ಅವರೇ ಹೇಳಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆದರೆ‌ 2 ದಿನದಿಂದ ಅವರ ಸ್ಥಿತಿ ತೀರಾ ಬಿಗಡಾಯಿಸಿ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು.  ಇದೀಗ ಅವರನ್ನು ವಿಶೇಷ ಐಸಿಯುಗೆ ಸ್ಥಳಾಂತರಿಸಿ ಜೀವ ರಕ್ಷಕ ಉಪಕರಣಗಳನ್ನು ಅಳವಡಿಸಲಾಗಿದೆ.
   74 ವರ್ಷದ  ( ಹುಟ್ಟಿದ್ದು 04.06.1946 )  ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಲು ಶುರು ಮಾಡಿ ಬರೋಬ್ಬರಿ ಐವತ್ತನಾಲ್ಕು ವರ್ಷ ಕಳೆದಿದೆ. ಬಹುಭಾಷಾ ಗಾಯಕ,  40,000 ಕ್ಕೂ ಹೆಚ್ಚು ಹಾಡುಗಳ ಒಡೆಯ. ಅತಿ ಹೆಚ್ಚು ಸಂಗೀತ ನಿರ್ದೇಶಕರೊಡನೆ ಕೆಲಸ ಮಾಡಿದ ದಾಖಲೆ ಅವರದ್ದು. ಪದ್ಮಶ್ರೀ- ಪದ್ಮ ವಿಭೂಷಣ, ಸೇರಿದಂತೆ ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆದ  ಗಾಯಕ. ಒಂದೇ ದಿನದಲ್ಲಿ ಇಪ್ಪತ್ತೊಂದು ಗೀತೆಗಳನ್ನು ಹಾಡಿ ರೆಕಾರ್ಡ್ ಮಾಡಿದ  ಗಾನ ಗಾರುಡಿಗ.
ಕರ್ನಾಟಕ ಶಾಸ್ತ್ರೀಯ, ಹಿಂದುಸ್ತಾನಿ, ಘಜ಼ಲ್, ಪಾಶ್ಚಾತ್ಯ, ಮೆಲೋಡಿ, ಅಬ್ಬರದ ಸ್ಥಾಯಿಯ ಹಾಡುಗಳು, ಬೇರೆ ಬೇರೇ ನಟರಿಗೆ ಅವರ ಧ್ವನಿಗನುಸಾರವಾಗಿ ಹಾಡುವ ಅಪರೂಪದ Voice Modulation, ಕೇವಲ ಗಾಯನವಲ್ಲದೇ ಅಭಿನಯ, ಸಂಗೀತ ನಿರ್ದೇಶನ, ವಾಯ್ಸ್ ಡಬ್ಬಿಂಗ್, ಚಿತ್ರ ನಿರ್ಮಾಣ, ನಿರ್ದೇಶನ, ಅನೇಕ ರಿಯಾಲಿಟಿ ಷೋ ಗಳಿಗೆ ತೀರ್ಪುಗಾರ, ಗಿನ್ನೆಸ್ ದಾಖಲೆ ನಿರ್ಮಿಸಿದ ಏಕೈಕ ಗಾಯಕ ಅವರು.
 ಗಾಯನವನ್ನೂ ಮೀರಿದ ದೊಡ್ಡತನವೆಂದರೆ ಅದು ಅವರಲ್ಲಿನ  ಸಂಸ್ಕಾರ, ಸರಳತೆ, ಸದ್ಗುಣ, ವಿಧೇಯತೆಗಳ ಮೇರು ವ್ಯಕ್ತಿತ್ವ.  ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಮೇಲಿನ ಅವರ ಅತೀವ ಪ್ರೇಮ ಹಾಗೂ ಕನ್ನಡಿಗರ ಬಗೆಗಿನ ಅವರ ಸಾಟಿಯಿಲ್ಲದ ಪ್ರೀತಿ.  ಹಿಮಾಲಯದೆತ್ತರದಷ್ಟು  ಮೇರು ಪ್ರತಿಭೆಯಾದರೂ ಅವರದು  ” ನನಗೇನೂ ಗೊತ್ತಿಲ್ಲ, ನಾನೇನೂ ಕಲಿತಿಲ್ಲ” ಎಂಬ ವಿನೀತ ಭಾವ.
ಜನಿಸಿದ್ದು ಅನ್ಯರಾಜ್ಯದಲ್ಲಾದರೂ ಕರುನಾಡು ಅವರಿಗೆ ಅನ್ನ ನೀಡಿದ ರಾಜ್ಯ ಎಂದು‌ ಭಕ್ತಿಯಿಂದ ಸ್ಮರಿಸುವ ಹೃದಯವಂತ. ವಯಸ್ಸು ಎಪ್ಪತ್ತೈದರತ್ತ ನಡೆದಿದ್ದರೂ ಅವರ ಕುಗ್ಗದ ಕಂಚಿನ ಕಂಠದ ಶಕ್ತಿ, ಮುಕ್ಕಾಗದ ಮಾಧುರ್ಯ, ಶ್ರುತಿ ತಪ್ಪದ ಶಾರೀರ, ಶಾರೀರದಂತೆಯೇ ಆಕರ್ಷಕ ಶರೀರ , ಇನ್ನೂ ಇಪ್ಪತ್ತರ  ಬತ್ತದ , ಬಾಡದ ಉತ್ಸಾಹ ಅವರದ್ದು.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಬೇಗ ಚೆತರಿಸಿಕೊಳ್ಳಲಿ ಎಂದು ಲಕ್ಷಾಂತರ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಮತ್ತೆ ಅವರು ಮೊದಲಿನಂತೆ ಹಾಡುವಂತಾಗಬೇಕು. ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಬೇಕು ಎಂದು ಪ್ರಾರ್ಥಿಸುತ್ತಿದ್ದಾರೆ.
ಪ್ರಗತಿವಾಹಿನಿ ಕೂಡ ಅವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಪ್ರಾರ್ಥಿಸುತ್ತದೆ.
ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಅವರ ಪತ್ನಿಗೂ ಕೊರೋನಾ ಪಾಸಿಟಿವ್ ಬಂದಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button