
ಪ್ರಗತಿವಾಹಿನಿ ಸುದ್ದಿ: “ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ನಾಲ್ಕು ಗೋಪುರಗಳನ್ನು ಮೀರಿ ಬೆಳೆಯುತ್ತಿರುವ ಬೆಂಗಳೂರಿನ ಸಮರ್ಪಕ ನಿರ್ವಹಣೆಗೆ ಗ್ರೇಟರ್ ಬೆಂಗಳೂರು ಬಿಲ್ ಮಂಡನೆ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.
ಬಿಡ್ಬ್ಲೂಎಸ್ ಎಸ್ ಬಿ ನೌಕರರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು “ಕಳೆದ ಒಂದು ವರ್ಷದಿಂದ ನಮ್ಮ ಸಾರ್ವಜನಿಕರಿಂದ 70 ಸಾವಿರ ಸಲಹೆಗಳನ್ನು ಪಡೆಯಲಾಗಿದೆ. ಇವುಗಳನ್ನು ಕ್ರೋಡಿಕರಿಸಿ ಬೆಂಗಳೂರು ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗ್ರೇಟರ್ ಬೆಂಗಳೂರು ಬಿಲ್ ಸಿದ್ದಪಡಿಸಲಾಗಿದೆ. ಕೆಂಪೇಗೌಡರು ಬೆಂಗಳೂರು ಕಟ್ಟಿದರು, ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದರು. ಎಸ್.ಎಂ.ಕೃಷ್ಣ ಅವರು ಬೆಂಗಳೂರಿನ ಹೆಸರನ್ನು ಅಂತರರಾಷ್ಟೀಯ ಮಟ್ಟಕ್ಕೆ ಬೆಳೆಸಿದರು. ಇಂತಹ ಬೆಂಗಳೂರನ್ನು ನಾವು ಉಳಿಸಬೇಕಾಗಿದೆ” ಎಂದು ಹೇಳಿದರು.
“ಸಚಿವನಾದ ತಕ್ಷಣ ಬೆಂಗಳೂರಿಗೆ 6 ಟಿಎಂಸಿ ಕಾವೇರಿ ನೀರನ್ನು ಹೆಚ್ಚುವರಿಯಾಗಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಗರದ ಜನರಿಗೆ ನೀರು, ಭದ್ರತೆ, ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ವಾಹನಗಳ ಸಂಖ್ಯೆ, ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ರಸ್ತೆ ಇದ್ದಷ್ಟೇ ಇದೆ. ಈ ಸವಾಲುಗಳನ್ನು ಇಟ್ಟುಕೊಂಡೇ ಬೆಂಗಳೂರು ಅಭಿವೃದ್ಧಿ ಮಾಡಬೇಕಾಗಿದೆ.” ಎಂದರು.
ನೀರಿನ ದರ ಏರಿಕೆಗೆ ಚಿಂತನೆ
“ಕಳೆದ 12 ವರ್ಷಗಳಿಂದ ನೀರಿನ ದರವನ್ನು ಹೆಚ್ಚಳ ಮಾಡಿಲ್ಲ. ಇದರಿಂದ ಜಲಮಂಡಳಿಯ ಆರ್ಥಿಕ ಸ್ಥಿತಿ ಕಷ್ಟದಲ್ಲಿದೆ. ದರ ಹೆಚ್ಚಳ ಮಾಡಿದರೆ ವಿರೋಧ ವ್ಯಕ್ತವಾಗುತ್ತದೆ. ಆದರೂ ಮಂಡಳಿಯ ಉಳಿವಿಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
“ರೈತ ಸಗಣಿ ಬಾಚಿ, ಹಸು ಕಟ್ಟಿಕೊಂಡು ಕಷ್ಟಪಡುತ್ತಾನೆ. ಆತ ಕೊಡುವ ಹಾಲಿಗೆ 2 ರೂಪಾಯಿ ಬೆಲೆ ಹೆಚ್ಚಳ ಮಾಡಿದರೆ ಬಡಿದಾಡುತ್ತಾರೆ. ಒಂದು ಲೀಟರ್ ನೀರಿನ ಬಾಟಲಿ ದರ 25 ರೂಪಾಯಿ ಇದೆ. ರೈತನ ಬಗ್ಗೆ ಕಾಳಜಿಯಿಲ್ಲ. ಆದರೆ ಬಾಟಲಿ ನೀರಿಗೆ ಎಷ್ಟು ದುಡ್ಡು ಬೇಕಾದರೂ ಕೊಡುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಕೆರೆಗಳನ್ನ ಉಳಿಸಲು ಹೊಸ ಯೋಜನೆ
ಬೆಂಗಳೂರು ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಇಲಾಖೆಯ ವ್ಯಾಪ್ತಿಗೆ ತೆಗೆದುಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ಉಳಿಸಿಕೊಳ್ಳಲಾಗುವುದು. ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸುವ ಮೂಲಕ ಕೆರೆಗಳನ್ನು ಉಳಿಸುವ ಕೆಲಸ ಮಾಡಲಾಗುವುದು. ಇದರಿಂದ ಒತ್ತುವರಿಯನ್ನು ತಡೆಯಬಹುದು” ಎಂದರು.
“ನೂತನ ಬಿಲ್ ಅಲ್ಲಿ ಬಿಡಿಎ ಮತ್ತು ಬಿಡ್ಲ್ಬೂ ಎಸ್ ಎಸ್ ಬಿಯನ್ನು ವಿಲೀನ ಮಾಡಬೇಕು ಎನ್ನುವ ಸಲಹೆ ಬಂದಿತ್ತು. ನಾನು ಒಪ್ಪಿಗೆ ನೀಡಲಿಲ್ಲ. ನಿಮ್ಮನ್ನು ರಾಜಕಾರಣಕ್ಕೆ ಎಳೆಯುವುದು ಬೇಡ ಇಲಾಖೆಯ ಸ್ವಾಯತ್ತತೆ ಉಳಿಯಲಿ ಎಂದು ತೀರ್ಮಾನ ಮಾಡಿದೆ. ವಿಲೀನವಾದಷ್ಟು ಕಷ್ಟವಾಗಿತ್ತದೆ” ಎಂದರು.
ಸಿಬ್ಬಂದಿಗಳ ನೇಮಕಾತಿಗೆ ಕ್ರಮ
“ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲದೇ ಇರುವ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಜಲಮಂಡಳಿಯಲ್ಲಿ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಅಧಿವೇಶನ ಮುಗಿದ ನಂತರ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
“ಬೆಂಗಳೂರಿನಲ್ಲಿ 7 ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿ ಹೋಗಿದ್ದವು. ನೀರಿನ ಸಮಸ್ಯೆಯನ್ನು ಬೆಂಗಳೂರು ಜಲಮಂಡಳಿ ಸಿಬ್ಬಂದಿಗಳು ಹಾಗೂ ನೌಕರರು ನಗರದಲ್ಲಿ ಎದುರಾಗಿದ್ದ ಬರಗಾಲವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದ್ದೀರಿ. ನಿಮ್ಮ ಸೇವೆ ಶ್ಲಾಘನೀಯ” ಎಂದು ಹೇಳಿದರು.
ಬೆಂಗಳೂರು ಬಿಜಿನೆಸ್ ಕಾರಿಡಾರ್
“2006 ರಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಮಾಡುವಾಗ ಸರಿಯಾದ ಯೋಜನೆ ಮಾಡದ ಕಾರಣ ನಗರದ ಒಳಗೆ ಬಂದುಬಿಟ್ಟಿದೆ. ಈಗ ಹೊಸದಾಗಿ 150 ಅಡಿ ಅಗಲದ ರಸ್ತೆ ನಿರ್ಮಾಣ ಮಾಡಲಾಗುವುದು. ಸುಮಾರು 25 ಸಾವಿರ ಕೋಟಿ ಖರ್ಚಾಗಲಿದೆ. ಇದಕ್ಕೆ ಪ್ರತ್ಯೇಕ ಕಂಪೆನಿ ಸ್ಥಾಪಿಸಿ ನಿರ್ಮಾಣ ಮಾಡಲಾಗುವುದು. ಇದನ್ನು ʼಬೆಂಗಳೂರು ಬಿಜಿನೆಸ್ ಕಾರಿಡಾರ್ʼ ಎಂದು ಕರೆಯಲಾಗುವುದು” ಎಂದರು.
“ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಸರ್ವಧರ್ಮಕ್ಕೂ ಸಲ್ಲುವ ವ್ಯಕ್ತಿ ಇವರು. ಬೆಂಗಳೂರಿನ ಘನತೆ, ಇತಿಹಾಸವನ್ನು ಉಳಿಸೋಣ” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ