Kannada NewsKarnataka NewsLatestPolitics

*5 ಲಕ್ಷ ರೂ. ಬಹುಮಾನ ಘೋಷಿಸಿದ ಡಿ.ಕೆ.ಶಿವಕುಮಾರ್*

ಬುಧವಾರದಿಂದಲೇ ಆಯಾ ಪಾಲಿಕೆ ವ್ಯಾಪ್ತಿಯ ತೆರಿಗೆ ಸಂಗ್ರಹ

ಪ್ರಗತಿವಾಹಿನಿ ಸುದ್ದಿ: “ಬೆಂಗಳೂರಿನಲ್ಲಿ ನಾಗರಿಕ ಸ್ನೇಹಿ ಸೇವೆ, ಉತ್ತಮ ಆಡಳಿತ, ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಾರಿಗೆ ತಂದು ಐದು ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು.

“02-09-2025ರಂದು ಬೆಂಗಳೂರು ಮಹಾನಗರದ ಪಾಲಿಗೆ ವಿಶೇಷವಾದ ದಿನ. ಈ ದಿನದಿಂದ ಬೆಂಗಳೂರಿನಲ್ಲಿ ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಈ ಪಾಲಿಕೆಗಳನ್ನು ಬೆಂಗಳೂರಿನ ಹೆಸರಿನೊಂದಿಗೆ ರಚಿಸಲು ಕಾನೂನಿನಲ್ಲೇ ತಿಳಿಸಿದ್ದೇವೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 26-08-2025ರಂದು ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ಸಮಿತಿ ರಚನೆಯಾಗಿದೆ. ಇದರಲ್ಲಿ 75 ಸದಸ್ಯರನ್ನು ನೇಮಕ ಮಾಡಲಾಗಿದೆ” ಎಂದು ಹೇಳಿದರು.

Home add -Advt

ಅಧಿಕಾರಿಗಳ ನೇಮಕ ಮಾಡಲಾಗಿದೆ

“ಎಲ್ಲಾ ವಲಯಗಳಲ್ಲಿ ಆಯಾ ವ್ಯಾಪ್ತಿಯ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಪ್ರತಿ ಪಾಲಿಕೆಯಲ್ಲಿ ಆಡಳಿತಾಧಿಕಾರಿಗಳಾಗಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಆಯುಕ್ತರಿಗೆ ನೆರವಾಗಲು, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಕೆಎಎಸ್ ಅಧಿಕಾರಿಗಳು ಹಾಗೂ ಮುಖ್ಯ ಇಂಜಿನಿಯರ್ ಕಡ್ಡಾಯವಾಗಿ ಇರುತ್ತಾರೆ. ಈ ಹಿಂದೆ ಇದ್ದ 27 ವಿಭಾಗಗಳನ್ನು 50 ವಿಭಾಗಗಳಾಗಿ ಮಾಡಿದ್ದೇವೆ. 75 ಉಪ ವಿಭಾಗಗಳನ್ನು 150ಕ್ಕೆ ಏರಿಸಿದ್ದೇವೆ. ಪ್ರತಿ ಪಾಲಿಕೆಯಲ್ಲಿ ಗರಿಷ್ಠ 150 ವಾರ್ಡ್ ಗಳವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪಾಲಿಕೆಯಲ್ಲಿ ಸರಾಸರಿಯಲ್ಲಿ 100 ವಾರ್ಡ್ ಗಳಂತೆ ಬೆಂಗಳೂರಿನಲ್ಲಿ ಸುಮಾರು 500 ಹೊಸ ನಾಯಕರುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರು 50:50 ಇರುತ್ತಾರೆ” ಎಂದು ತಿಳಿಸಿದರು.

“ನಾಳೆಯಿಂದಲೇ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತೆರಿಗೆ ಹಣ ಆಯಾ ಪಾಲಿಕೆಗೆ ಸೇರಲಿದೆ. ಈ ತೆರಿಗೆ ಹಣ ಜಿಬಿಎಗಾಗಲಿ ಅಥವಾ ರಾಜ್ಯ ಸರ್ಕಾರಕ್ಕಾಗಲಿ ಬರುವುದಿಲ್ಲ. ನಾವು ಯಾವುದೇ ರೀತಿಯಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗುವುದಿಲ್ಲ. ಪಾಲಿಕೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಮುಂದೆ ಜಿಬಿಎ ಮೂಲಕ ದೊಡ್ಡ ದೊಡ್ಡ ಯೋಜನೆಗಳ ಜಾರಿ, ಉತ್ತಮ ಆಡಳಿತ, ಸೇವೆಗೆ ಮೀಸಲಾಗಿರಲಿದೆ. ಸರ್ಕಾರದಿಂದ ಬಂದ ಹಣ ಜಿಬಿಎ ಹಾಗೂ ಪಾಲಿಕೆಗಳಿಗೆ ಹೋಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಚುನಾವಣೆ ನಡೆಯಲಿದೆ. ಸಧ್ಯ ನಗರದ ಜನಸಂಖ್ಯೆ 1.44 ಕೋಟಿ ಎಂದು ಅಂದಾಜಿಸಲಾಗಿದೆ. 2011ರ ಜನಗಣತಿ ಪ್ರಕಾರ ವಾರ್ಡ್ ನಲ್ಲಿ 20 ಸಾವಿರ ಜನಸಂಖ್ಯೆ ಇತ್ತು. ಈಗ 35-40 ಸಾವಿರ ಸರಾಸರಿಯಲ್ಲಿ ವಾರ್ಡ್ ರಚನೆ ಮಾಡಲಾಗುವುದು” ಎಂದು ವಿವರಿಸಿದರು.

“ಮುಂದಿನ ದಿನಗಳಲ್ಲಿ ಪೂರ್ವ, ಪಶ್ಚಿಮ, ಉತ್ತರ ದಕ್ಷಿಣ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಲು ಅವಕಾಶ ಕಲ್ಪಿಸಿದ್ದೇವೆ. ಕಾನೂನಿಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಆಯಾ ಪಾಲಿಕೆಗಳು ಸರ್ಕಾರವನ್ನು ವಿಶ್ವಾಸಕ್ಕೆ ಪಡೆದು ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಗಳನ್ನು ಮಾಡಿಕೊಳ್ಳಲಿವೆ. ಈಗ ಹಾಲಿ ಇದ್ದ ಪಾಲಿಕೆ ವ್ಯಾಪ್ತಿಗೆ ಜಿಬಿಎ ರಚಿಸಿ, ಐದು ಪಾಲಿಕೆ ಮಾಡಿದ್ದೇವೆ. ಇದನ್ನು ಜಾರಿಗೆ ತರಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆನೇಕಲ್ ಕ್ಷೇತ್ರಕ್ಕೆ ಸೇರಿದ್ದ ಒಂದು ವಾರ್ಡ್ ಬಿಟ್ಟುಹೋಗಿತ್ತು. ಈಗ ಅದನ್ನು ಸರಿಪಡಿಸಿದ್ದೇವೆ” ಎಂದು ಹೇಳಿದರು.

ಜಿಬಿಎ ಕಾಲಾನುಕ್ರಮ:

“ಬೆಂಗಳೂರಿನ ಪಾಲಿಗೆ ಇದೊಂದು ಐತಿಹಾಸಿಕ ದಿನ. ಅಧಿಕಾರ ವಿಕೇಂದ್ರೀಕರಣಗೊಳಿಸುವ ರಾಜೀವ್ ಗಾಂಧಿ ಅವರ ಆಶಯದಂತೆ ಸಂವಿಧಾನದ 74ನೇ ತಿದ್ದುಪಡಿಯನ್ನು ಪಾಲಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲಾಗಿದೆ. 1993 ಜೂನ್ 1ರಂದು ಕರ್ನಾಟಕದಲ್ಲಿ 74ನೇ ತಿದ್ದುಪಡಿ ಜಾರಿಗೆ ಬಂದಿತು. 16-1-2007ರಂದು 198 ವಾರ್ಡ್ ಗಳೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿತ್ತು. 22-09-2024ರಂದು ಬಿ.ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಬೆಂಗಳೂರಿನಲ್ಲಿ ಉತ್ತಮ ಆಡಳಿತ ನೀಡುವ ಬಗ್ಗೆ ಅಧ್ಯಯನ ನಡೆಸಲಾಯಿತು. ಈ ಸಮಿತಿ ಸಾವಿರಾರು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಧ್ಯಯನ ಮಾಡಿ 9 ವರದಿಗಳನ್ನು ಸಲ್ಲಿಸಿತು. 2015ರಲ್ಲಿ ಬೆಂಗಳೂರಿನಲ್ಲಿ ಮೂರು ಪಾಲಿಕೆಗಳನ್ನು ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಪ್ರಸ್ತಾಪವನ್ನು ರಾಜ್ಯಪಾಲರಿಗೆ ಕಳುಹಿಸಿಲಾಗಿತ್ತಾದರೂ ನಂತರ ರಾಜ್ಯ ಸರ್ಕಾರ ಇದನ್ನು 26-7-2019 ಹಿಂಪಡೆಯಿತು” ಎಂದು ತಿಳಿಸಿದರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲು ತೀರ್ಮಾನಿಸಿ 2-9-2025 ರಂದು ಇದನ್ನು ಜಾರಿಗೆ ತಂದಿದೆ. 18-7-2023ರಂದು ಬಿ.ಎಸ್ ಪಾಟೀಲ್ ಅವರ ಸಮಿತಿ ರಚಿಸಿದೆವು. ಈ ಸಮಿತಿ 12-7-2024ರಂದು ವರದಿ ಸಲ್ಲಿಸಿ, ಕರಡು ಅಧಿಸೂಚನೆ ಹೊರಡಿಸಲಾಯಿತು. 25-7-2024ರಂದು ನಾವು ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದೆವು. ವಿರೋಧ ಪಕ್ಷಗಳ ಸದಸ್ಯರು ಸಲಹೆ ಮೇರೆಗೆ ಶಾಸಕರಾದ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ 15 ಸದಸ್ಯರ ಜಂಟಿ ಸದನ ಸಮಿತಿ ರಚಿಸಲಾಯಿತು. ಈ ಸಮಿತಿ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿತು. 10-3-2025ರಂದು ವಿಧಾನಸಭೆಯಲ್ಲಿ ತಿದ್ದುಪಡಿಯನ್ನು ತರಲಾಯಿತು. 12-3-2025ರಂದು ವಿಧಾನ ಪರಿಷತ್ ನಲ್ಲಿ ಚರ್ಚೆ ಮಾಡಿ ಅನುಮೋದನೆ ಪಡೆದು ರಾಜ್ಯಪಾಲರಿಗೆ ಕಳುಹಿಸಲಾಯಿತು. 23-4-2025ರಂದು ರಾಜ್ಯಪಾಲರ ಅಂಕಿತ ಪಡೆಯಲಾಯಿತು. 15-05-2025ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸುವ ಮೂಲಕ ಜಿಬಿಎ ಅಸ್ತಿತ್ವಕ್ಕೆ ತರಲಾಯಿತು. 19-07-2025ರಂದು 5 ಪಾಲಿಕೆಗಳನ್ನು ಮಾಡಲು ಘೋಷಣೆ ಮಾಡಿ ಸಾರ್ವಜನಿಕರ ಸಲಹೆ ಪಡೆಯಲು 30 ದಿನಗಳ ಕಾಲಾವಕಾಶ ನೀಡಲಾಯಿತು. ಈ ಮಧ್ಯೆ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷಗಳ ಅಭಿಪ್ರಾಯ ಪಡೆದು ಆಡಳಿತ ಸುಧಾರಣೆ, ಪರಿಣಾಮಕಾರಿ ಸೇವೆಗಾಗಿ ಈ ತೀರ್ಮಾನ ಮಾಡಲಾಯಿತು. ಈ ವೇಳೆ 55 ಆಕ್ಷೇಪಣೆಗಳು ಬಂದಿದ್ದವು. ಇದೆಲ್ಲವನ್ನು ಬಗೆಹರಿಸಿ ಐದು ಪಾಲಿಕೆಗಳ ಗಡಿಯ ನಕ್ಷೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆಯಲಾಯಿತು” ಎಂದು ವಿವರಿಸಿದರು.

ಪ್ರಶ್ನೋತ್ತರ:

ಆರ್ಥಿಕವಾಗಿ ದುರ್ಬಲವಿರುವ ಪಾಲಿಕೆಗಳಿಗೆ ಸರ್ಕಾರದ ನೆರವು:

ಈಗ ಜಾರಿಗೆ ಬಂದಿರುವ ಪಾಲಿಕೆಗಳ ಪೈಕಿ ಬೆಂಗಳೂರು ಪೂರ್ವ ಆರ್ಥಿಕವಾಗಿ ಬಲಿಷ್ಟವಾಗಿದ್ದು, ಪೂರ್ವ ಪಾಲಿಕೆ ಆರ್ಥಿಕವಾಗಿ ದುರ್ಬಲವಾಗಿದೆ. ಇದನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದಾಗ, “ನಾವು ಅಲ್ಲಿನ ಆದಾಯವನ್ನು ಇಲ್ಲಿಗೆ ತರಲು ಸಾಧ್ಯವಿಲ್ಲ. ಪೂರ್ವ ಪಾಲಿಕೆ ಆದಾಯ ಪೂರ್ವ ಪಾಲಿಕೆಗೆ ಸೀಮಿತವಾಗಲಿದೆ, ಪಶ್ಚಿಮ ಪಾಲಿಕೆ ಆದಾಯ ಕಡಿಮೆ ಇದ್ದಾಗ ಸರ್ಕಾರ ಅವರಿಗೆ ನೆರವು ನೀಡಬೇಕು. ನಾವು ಪೂರ್ವದ ಹಣವನ್ನು ಪಶ್ಚಿಮದ ಪಾಲಿಕೆಗೆ ನೀಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾಗಿರಲಿದೆ” ಎಂದು ಹೇಳಿದರು.

ನವೆಂಬರ್ 1ರಂದು ಹೊಸ ಪಾಲಿಕೆಗಳ ಕಚೇರಿ ಕಟ್ಟಡಗಳಿಗೆ ಭೂಮಿ ಪೂಜೆ

ಜಿಬಿಎ ಆದ್ಯತೆ ಆಡಳಿತಾತ್ಮಕವಾಗಿ ಹಳಿಗೆ ತರುವುದೋ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದೇ ಅಥವಾ ಪ್ರದೇಶಗಳ ವಿಸ್ತರಣೆಯೋ ಎಂದು ಕೇಳಿದಾಗ, “ಉತ್ತಮ ಆಡಳಿತ, ಸೇವೆ ನೀಡಬೇಕು, ಸಂವಿಧಾನ ರಕ್ಷಣೆ ನೀಡಬೇಕು. ಈ ಹಿಂದೆ ನಗರದ ಸಣ್ಣಪುಟ್ಟ ವಿಚಾರಕ್ಕೂ ಬೆಂಗಳೂರು ಆಯುಕ್ತರಿಗೆ ಕರೆ ಮಾಡಬೇಕಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಜಿಬಿಎ ಅಧಿಕಾರಿಗಳು ನಗರದ ದೊಡ್ಡ ಯೋಜನೆಗಳ ಜವಾಬ್ದಾರಿ ಮಾತ್ರ ನಿಭಾಯಿಸುತ್ತಾರೆ. ಟನಲ್ ರಸ್ತೆ ಸೇರಿದಂತೆ ಬೇರೆ ಬೇರೆ ಪಾಲಿಕೆಗಳ ಮೂಲಕ ಹಾದುಹೋಗುವ ದೊಡ್ಡ ದೊಡ್ಡ ಯೋಜನೆ ನೋಡಿಕೊಳ್ಳುತ್ತಾರೆ. ಉಳಿದಂತೆ ಇತರೆ ವಿಚಾರಗಳಿಗೆ ಆಯಾ ಪಾಲಿಕೆಗೆ ನಿಯೋಜನೆಯಾಗಿರುವ ಆಯುಕ್ತರು ಹೊಣೆಗಾರಿಕೆ ಹೊಂದಿರುತ್ತಾರೆ. ಅಧಿಕಾರವನ್ನು ವಿಕೇಂದ್ರೀಕರಣ ಮಾಡಲಾಗಿದೆ. ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಎಲ್ಲೆಲ್ಲಿ ಕಚೇರಿ ಇರಬೇಕು ಎಂದು ಸೂಚಿಸಿದ್ದೇವೆ. ವಲಯವಾರು ಕಚೇರಿಗಳಲ್ಲಿ ಈ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. ನವೆಂಬರ್ 1ರಂದು ಹೊಸ ಕಚೇರಿ ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಜಾಗ ಗುರುತಿಸಲಾಗಿದೆ. ಈ ಐದೂ ಪಾಲಿಕೆ ಕಚೇರಿಗಳು ಒಂದೇ ರೀತಿ ನಿರ್ಮಾಣವಾಗಬೇಕು. ಇದಕ್ಕಾಗಿ ಅತ್ಯುತ್ತಮ ವಾಸ್ತುಶಿಲ್ಪವನ್ನ ಸಿದ್ಧತೆ ಮಾಡಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದು. ಅತ್ಯುತ್ತಮ ವಿನ್ಯಾಸಕ್ಕೆ 5 ಲಕ್ಷ ಬಹುಮಾನ ನೀಡಲು ಸೂಚಿಸಿದ್ದೇನೆ. ಇನ್ನು ಜಿಬಿಎ ಲೋಗೋಗಳಿಗೂ ಸಲಹೆ ನೀಡಲು ಅವಕಾಶ ನೀಡಲಾಗಿದೆ” ಎಂದು ವಿವರಿಸಿದರು.

ಜಿಬಿಎ ಮೂಲಕ ಸಭೆ ಯಾವಾಗ ಮಾಡಲಾಗುವುದು ಎಂದು ಕೇಳಿದಾಗ, “ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಮಾಡಬೇಕು. ಪಾಲಿಕೆಗಳು ಎಂದಿನಂತೆ ಅವುಗಳ ಕಾರ್ಯಚಟುವಟಿಕೆ ಸಾಗುತ್ತಿರುತ್ತದೆ. ಎಲ್ಲಾ ಪಾಲಿಕೆಗಳ ಮೇಯರ್ ಅಧಿಕಾರ ಅವಧಿ ಎರಡೂವರೆ ವರ್ಷಕ್ಕೆ ಸೀಮಿತಗೊಳಿಸಲಾಗಿದೆ” ಎಂದು ತಿಳಿಸಿದರು.

ನವೆಂಬರ್ 1ಕ್ಕೆ ವಾರ್ಡ್ ಪುನರ್ ವಿಂಗಡಣೆ, 30ಕ್ಕೆ ಮೀಸಲಾತಿ ಅಧಿಸೂಚನೆ ಪ್ರಕಟ:

ಚುನಾವಣೆ ಯಾವಾಗ ನಡೆಯಲಿದೆ ಎಂದು ಕೇಳಿದಾಗ, “ನಾವು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ನಮಗೆ ಕಾಲಮಿತಿ ಇದೆ. ನ್ಯಾಯಾಲಯ ಕೂಡ ಅದನ್ನು ಒಪ್ಪಿದೆ. 1-11-2025 ವಾರ್ಡ್ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. 30-11-2025ರಂದು ವಾರ್ಡ್ ಗಳ ಮೀಸಲಾತಿ ಅಧಿಸೂಚನೆ ಹೊರಡಿಸಲಾಗುವುದು. ಇದಾದ ಬಳಿಕ ಚುನಾವಣೆ ನಡೆಸಲಿದೆ. ಅವರು ಒಂದು ವಾರ, ಹದಿನೈದು ದಿನಗಳಲ್ಲಿ ಮಾಡಬಹುದು. ಈಗಾಗಲೇ ಚುನಾವಣೆ ನಡೆಸಲು ಪೂರ್ವಸಿದ್ಧತೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅವರೂ ಕೂಡ ಅತಿ ಶೀಘ್ರದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗ ಚುನಾವಣೆ ಮಾಡಲಿದೆ” ಎಂದು ತಿಳಿಸಿದರು.

ಪಾಲಿಕೆಗಳ ಮೇಲೆ ಜಿಬಿಎ ಇರುವುದರಿಂದ 74ನೇ ತಿದ್ದುಪಡಿಗೆ ತೊಂದರೆಯಾಗುವುದಿಲ್ಲವೇ, ನಾಳೆ ಯಾರೂ ನ್ಯಾಯಾಲಯದ ಮೊರೆ ಹೋಗುವುದಿಲ್ಲವೇ ಎಂದು ಕೇಳಿದಾಗ, “ಎಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿ ಹಾಕಿ, ಅವೆಲ್ಲವೂ ತಿರಸ್ಕಾರವಾಗಿವೆ. ಸುಪ್ರೀಂ ಕೋರ್ಟ್ ನಮ್ಮ ಅಫಿಡವಿಟ್ ಒಪ್ಪಿದೆ. ವಾರ್ಡ್ ಪುನರ್ ವಿಂಗಡಣೆ ಬಳಿಕ ಬನ್ನಿ ಎಂದು ನವೆಂಬರ್ 3ರಂದು ವಿಚಾರಣೆಗೆ ಬರುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ” ಎಂದು ತಿಳಿಸಿದರು.

ಮೂಲಸೌಕರ್ಯಗಳಿಗೆ ಪರಿಹಾರ ಸಿಗುತ್ತದೆಯೇ ಎಂದು ಕೇಳಿದಾಗ, “ಬಿಡಬ್ಲ್ಯೂಎಸ್ಎಸ್ ಬಿ ನೀರು ಪೂರೈಸುತ್ತದೆ, ಕಸ ವಿಲೇವಾರಿ ಬಿಎಂಎಸ್ ಡಬ್ಲ್ಯೂ ಅವರು ನೋಡಿಕೊಳ್ಳುತ್ತಾರೆ. ಉಳಿದ ವಿಚಾರವನ್ನು ಪಾಲಿಕೆ ನೋಡಿಕೊಳ್ಳುತ್ತದೆ. ಜಿಬಿಎ ಇವುಗಳ ನಡುವೆ ಸಮನ್ವಯತೆ ಸಾಧಿಸುವಂತೆ ನೋಡಿಕೊಳ್ಳುತ್ತದೆ” ಎಂದು ತಿಳಿಸಿದರು.

ಆಡಳಿತ ಸುಧಾರಣೆ ಮಾಡಿದ್ದೀರಿ, ಜನರಿಗೆ ಎಷ್ಟು ದಿನಗಳ ಒಳಗೆ ಸಮಸ್ಯೆ ಬಗೆಹರಿಸುತ್ತೀರಿ ಎಂದು ಕೇಳಿದಾಗ, “ನೀವು ಇಷ್ಟು ಎತ್ತರಕ್ಕೆ ಬೆಳೆಯಲು 40 ವರ್ಷ ತೆಗೆದುಕೊಂಡಿದ್ದೀರಿ ಅಲ್ಲವೇ” ಎಂದು ಮರು ಪ್ರಶ್ನಿಸಿದರು.

ಖಾತಾ, ಆಸ್ತಿ ತೆರಿಗೆ ಎಲ್ಲವೂ ಬಿಬಿಎಂಪಿ ಮಾನದಂಡಗಳೇ ಮುಂದುವರಿಯಲಿದೆಯೇ ಎಂದು ಕೇಳಿದಾಗ “ಖಂಡಿತಾ ಅದೇ ಮುಂದುವರಿಯಲಿದ್ದು, ಹೊಸ ಪಾಲಿಕೆಗಳ ಮೂಲಕ ಮುಂದುವರಿಯಲಿದೆ. ಇಂದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಅಧಿಕಾರಿಗಳು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಾಳೆಯಿಂದ ಖಾತೆ ತೆರೆದು ತಮ್ಮ ಪಾಲಿಕೆಗಳ ನವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಿಸಲಿದ್ದಾರೆ. ಒಂದೆರಡು ದಿನಗಳು ಹೆಚ್ಚು ಕಮ್ಮಿಯಾಗಬಹುದು” ಎಂದು ತಿಳಿಸಿದರು.

ನೂತನ ಲೋಗೋ ಯಾವಾಗ ಅನಾವರಣಗೊಳ್ಳುತ್ತದೆ ಎಂದು ಕೇಳಿದಾಗ, “ನೀವುಗಳು ಸಲಹೆಗಳನ್ನು ನೀಡಿ ಆಮೇಲೆ ಅಂತಿಮ ತೀರ್ಮಾನ ಮಾಡುತ್ತೇವೆ. ನಾಳೆ ಈ ಬಗ್ಗೆ ಪ್ರಕಟಣೆ ಹೊರಡಿಸುತ್ತೇವೆ” ಎಂದರು.

ಬೆಂಗಳೂರು ದಕ್ಷಿಣ ಜಿಲ್ಲೆ ಯಾವಾಗ ಸೇರ್ಪಡೆಯಾಗಲಿದೆ ಎಂದು ಕೇಳಿದಾಗ, “ಅದು ಸಧ್ಯಕ್ಕೆ ಸೇರುವುದಿಲ್ಲ. ಯಲಹಂಕ, ತುಮಕೂರು ರಸ್ತೆಯ ಕೆಲವು ಪ್ರದೇಶಗಳು ಇನ್ನೂ ಪಂಚಾಯ್ತಿ ವ್ಯಾಪ್ತಿಯಲ್ಲಿವೆ. ಅವೆಲ್ಲವೂ ಈಗ ನಗರವಾಗಿವೆ” ಎಂದು ತಿಳಿಸಿದರು.

ವಿಮಾನ ನಿಲ್ದಾಣದವರೆಗೂ ಸೇರಿಸುತ್ತೀರಾ ಎಂದು ಕೇಳಿದಾಗ, “ಸಧ್ಯಕ್ಕೆ ಇರುವ ಪ್ರಸ್ತುತ ವ್ಯಾಪ್ತಿಯನ್ನು ಮಾತ್ರ ಮಾಡಿದ್ದೇವೆ. ಉಳಿದಂತೆ ನಿಮ್ಮಂತಹವರ ಸಲಹೆ ಪಡೆದ ಬಳಿಕ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

ಸಾಂಪ್ರದಾಯಿಕವಾಗಿ ಗಣ್ಯರು ರಾಜ್ಯಕ್ಕೆ ಬಂದಾಗ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಮೇಯರ್ ಹೋಗುತ್ತಿದ್ದರು. ಈಗ ಐವರು ಮೇಯರ್ ಇರುವುದರಿಂದ ಯಾರು ಹೋಗುತ್ತಾರೆ ಎಂದು ಕೇಳಿದಾಗ, “ಸಧ್ಯಕ್ಕೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹೋಗುತ್ತಾರೆ. ಹೆಚ್ಎಎಲ್ ಗೆ ಬಂದರೆ ಅವರು ಹೋಗುತ್ತಾರೆ. ನೀವು ಮಾಧ್ಯಮದವರು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ವರದಿಗಾರರನ್ನು ಕಳುಹಿಸುತ್ತೀರಲ್ಲ” ಎಂದು ತಿಳಿಸಿದರು.

ಜಿಬಿಎ ಜಾರಿಯಿಂದ ನಿಮಗೆ ರಾಜಕೀಯವಾಗಿ ಲಾಭ ಇದೆಯೇ ಹಾಗೂ ಮುಂದಿನ ಚುನಾವಣೆಯಲ್ಲಿ ಐದೂ ಪಾಲಿಕೆ ಕಾಂಗ್ರೆಸ್ ವಶವಾಗುತ್ತಾ ಎಂದು ಕೇಳಿದಾಗ, “ಇದು ನನ್ನ ಆತ್ಮತೃಪ್ತಿ. ನಾನು ಜನರ ಬಳಿಗೆ ಹೋಗಿ, ಅವರ ಸೇವೆ ಮಾಡುತ್ತಿದ್ದು, ಈ ಮೂಲಕ ಇತಿಹಾಸ ಪುಟಕ್ಕೆ ಸೇರುತ್ತಿದ್ದೇನೆ. ನಾನು ರಾಜಕಾರಣ ದೃಷ್ಟಿಯಿಂದ ಇದನ್ನು ಮಾಡಿಲ್ಲ. ಹೊಸ ನಾಯಕರನ್ನು ಬೆಳೆಸುವ ಅವಕಾಶವಿದೆ. ಇದೇ ರಾಜೀವ್ ಗಾಂಧಿ ಅವರ ಚಿಂತನೆ. ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ತಯಾರಾಗಬೇಕು ಎಂದು ಹೇಳಿದ್ದರು. ಬೆಂಗಳೂರಿನಲ್ಲೇ ಪಾಲಿಕೆ ಸದಸ್ಯರಿಂದ ಶಾಸಕರಾಗಿರುವವರು ಸುಮಾರು 10 ಜನರಿಲ್ಲವೇ” ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರಗಳನ್ನು ವಿಭಜಿಸಲಾಗಿದೆ ಎಂದು ಸದನದಲ್ಲಿ ವಿರೋಧ ಪಕ್ಷಗಳ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಕೇಳಿದಾಗ, “ಪಕ್ಷಾತೀತವಾಗಿ, ಮಾಧ್ಯಮಗಳು ಸೇರಿದಂತೆ ಎಲ್ಲರೂ ತಮ್ಮ ಮೆಚ್ಚುಗೆಯನ್ನು ಯಾವ ರೀತಿ ವ್ಯಕ್ತಪಡಿಸಿದ್ದಾರೆ ಎಂಬುದು ನನಗೆ ಮಾತ್ರ ಗೊತ್ತಿದೆ. ಹೊರಗಡೆ ಮಾತನಾಡಬೇಕು ಹೀಗಾಗಿ ಮಾತನಾಡುತ್ತಾರೆ. ಆದರೆ ಎಲ್ಲರೂ ಸಂತೋಷವಾಗಿದ್ದಾರೆ” ಎಂದು ತಿಳಿಸಿದರು.

ಪ್ರಾಧಿಕಾರದ ಸದಸ್ಯರಾಗಿ ಯತೀಂದ್ರ ಸಿದ್ದರಾಮಯ್ಯ ಹಾಗೂ ನಸೀರ್ ಅಹ್ಮದ್ ಅವರ ನೇಮಕ ಯಾವ ಮಾನದಂಡದ ಮೇಲೆ ಆಗಿದೆ ಎಂದು ಕೇಳಿದಾಗ, “ಬೆಂಗಳೂರು ನಗರದಲ್ಲಿ ಮತದಾರರಾಗಿರುವವರು, ಇಲ್ಲಿನ ಸಂಸ್ಥೆಗಳಿಂದ ಆರಿಸಿರುವವರು ಆಯ್ಕೆಯಾಗಿದ್ದಾರೆ. ಯತೀಂದ್ರ ಅವರ ಮತ ಬೆಂಗಳೂರಿನಲ್ಲಿ ಇರಬಹುದು, ನನಗೆ ಗೊತ್ತಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ವಾಸಿಸುವ, ರಾಜ್ಯಸಭೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವವರು ಇಲ್ಲಿ ಸದಸ್ಯರಾಗಿರುತ್ತಾರೆ” ಎಂದು ತಿಳಿಸಿದರು.

ನೀವು ಬಹಳ ಸಂತೋಷವಾಗಿದ್ದೀರಿ ಎಂದು ಕೇಳಿದಾಗ, “ಖಂಡಿತವಾಗಿ, ನನ್ನ ಸಾರ್ವಜನಿಕ ಜೀವನದಲ್ಲಿ ಇದು ಅತ್ಯಂತ ಪ್ರಮುಖವಾದ ದಿನ. ಯಾರೇ ಆಗಲಿ ನಾವು ಉತ್ತಮ ಕೆಲಸ ಮಾಡಿದಾಗ ಜನರು ಪ್ರಶಂಸಿಸಿದರೆ ನಾವು ಸಂತೋಷವಾಗುವುದು ಸಹಜವಲ್ಲದೇ? ಇಲ್ಲಿ ನಾವು ಯಾರೂ ಶಾಶ್ವತವಲ್ಲ” ಎಂದರು.

ನೀವು ಬಿಜೆಪಿ ಸೇರುತ್ತೀರಿ ಎಂದು ರಾಜಣ್ಣ ಅವರ ಪುತ್ರ ಹೇಳಿಕೆ ನೀಡಿದ್ದಾರೆ ಎಂದು ಕೇಳಿದಾಗ, “ಯಾರೂ ಏನಾದರೂ ಹೇಳಿಕೆ ನೀಡಲಿ, ನಾನು ರಾಜಕೀಯ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು.

Related Articles

Back to top button