Kannada NewsKarnataka NewsLatest
ಶೀಘ್ರವೇ ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
- *
ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ : ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಶೀಘ್ರವೇ ಮನೆ ಯಜಮಾನಿಯರ ಖಾತೆಗೆ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದುವರೆಗೆ 11 ತಿಂಗಳ ಮೊತ್ತ ಸಂದಾಯವಾಗಿದ್ದು, ಶೀಘ್ರವೇ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವೂ ಸಂದಾಯವಾಗಲಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಏಕಕಾಲದಲ್ಲಿ ಒಟ್ಟಿಗೆ ಹಣ ಸಂದಾಯವಾಗುತ್ತಿಲ್ಲ. ಒಂದು ವರ್ಷದಲ್ಲಿ 25 ಸಾವಿರ ಕೋಟಿ ರೂ ಮೊತ್ತವನ್ನು ಯೋಜನೆಗೆ ವ್ಯಯಿಸಲಾಗಿದೆ ಎಂದರು.
- ಬಿಜೆಪಿಗರ ಕುತಂತ್ರಕ್ಕೆ ಶೀಘ್ರವೇ ಉತ್ತರ
ಕರ್ನಾಟಕದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸ್ಥಿರವಾದ ಸರ್ಕಾರವನ್ನು ಅಸ್ಥಿರಗೊಳಿಸುವುದೇ ಬಿಜೆಪಿ ನಾಯಕರ ಉದ್ದೇಶ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಏನೆಲ್ಲಾ ಸರ್ಕಸ್ ನಡೆಸುತ್ತಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಕೋವಿಡ್ ಕಾಲದ ಭ್ರಷ್ಟಾಚಾರ ಬಯಲು
ಕೋವಿಡ್ ವೇಳೆ ಬಿಜೆಪಿ ಸಚಿವರು ಮಾಡಿದ್ದ ಭ್ರಷ್ಟಾಚಾರ ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ಮಾಸ್ಕ್, ಆಕ್ಸಿಜನ್, ಬೆಡ್ ಖರೀದಿ ಇನ್ನಿತರ ಪರಿಕರಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಇದೀಗ ಕೋವಿಡ್ ಕಾಲದ ಭ್ರಷ್ಟಾಚಾರ ಕುರಿತು ರಚಿಸಲಾಗಿದ್ದ ತನಿಖಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಈ ಕುರಿತು ಶೀಘ್ರವೇ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು. - ಮಾಜಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಕಿಡಿ
ಕಾಂಗ್ರೆಸ್ ನಾಯಕರು ಬೆಲೆ ನಿಗದಿ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿ.ಸಿ.ಪಾಟೀಲರು ತಮ್ಮನ್ನು ತಾವೇ ಮಾರಿಕೊಂಡು ಬಿಜೆಪಿಗೆ ಹೋದವರು. ಇಂದು ಅವರಿಗೆ ತಮ್ಮ ಬೆಲೆ ಎಷ್ಟು ಎಂದು ಗೊತ್ತಾಗಿದೆ. ಇಂದು ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದಾರೆ. ಬಿ.ಸಿ.ಪಾಟೀಲರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದರು.
ನಮ್ಮದು ಸ್ಥಿರ ಹಾಗೂ ಜನಪರ ಸರ್ಕಾರ, ಜನರ ಆಶೀರ್ವಾದದಿಂದ ಬಂದಿರುವ ಸರ್ಕಾರವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿ-ಜೆಡಿಎಸ್ ಪಕ್ಷಗಳು ಇದೀಗ ಕಿಚಡಿ ಮೈತ್ರಿ ಮಾಡಿಕೊಂಡಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಟೀಕಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ