
ಯೋಜನೆಯ ಸದುಪಯೋಗಕ್ಕೆ ಸಂತೋಷ ವ್ಯಕ್ತಪಡಿಸಿದ ಸಿಎಂ
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರದ ಬಹು ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮೀ ಯೋಜನೆ ಕಳೆದ ಒಂದೂವರೆ ವರ್ಷಗಳಿಂದ ಮನೆಮಾತಾಗಿದೆ. ಸುಮಾರು 1.25 ಕೋಟಿ ಮಹಿಳೆಯರಿಗೆ ಪ್ರತಿತಿಂಗಳು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಹಣ ಸಂದಾಯವಾಗುತ್ತಿದೆ. ಯೋಜನೆಯ ಹಣವನ್ನು ವಿವಿಧ ರೀತಿಯಲ್ಲಿ ಸದುಪಯೋಗಪಡಿಸಿಕೊಂಡ ಆಯ್ದ 21 ಫಲಾನುಭವಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪರಿಚಯಿಸಿಕೊಟ್ಟರು.
ಫಲಾನುಭವಿಗಳಿಗೆ ಸಿಎಂ ಶಹಬ್ಬಾಸ್ ಗಿರಿ
ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಬೋರ್‌ವೆಲ್ ಕೊರೆಸಿದ ಗದಗ ಜಿಲ್ಲೆಯ ಗಜೇಂದ್ರಗಢದ ಅತ್ತೆ-ಸೊಸೆ ಮಾಬುಬಿ ಹಾಗೂ ರೋಷನ್ ಬೇಗಂ ಅವರನ್ನು ಮುಖ್ಯಮಂತ್ರಿಗಳಿಗೆ ಸಚಿವರು ಪರಿಚಯಿಸಿಕೊಟ್ಟರು. ಗೃಹಲಕ್ಷ್ಮೀ ಯೋಜನೆ ಹಣದಿಂದ ಅತ್ತೆ-ಸೊಸೆ ನಡುವೆ ಜಗಳ ಆಗಲಿದೆ ಎನ್ನುತ್ತಿದ್ದ ವಿಪಕ್ಷಗಳ ಅಪಪ್ರಚಾರಕ್ಕೆ ಇದು ತಿರುಗೇಟಾಗಿದೆ ಎಂದು ಸಚಿವರು ಹೇಳಿದರು.

ವಿದ್ಯಾಥಿಗಳ ಅನುಕೂಲಕ್ಕಾಗಿ ಲೈಬ್ರರಿ ಆರಂಭಿಸಿದ ರಾಯಭಾಗದ ಮಲ್ಲವ್ವಾ ಮೇಟಿ, ಫ್ಯಾನ್ಸಿ ಸ್ಟೋರ್ ಆರಂಭಿಸಿದ ಶಿಗ್ಗಾವ್‌ನ ದ್ರಾಕ್ಷಾಯಣಿ ಪಾಟೀಲ್, ತರಕಾರಿ ವ್ಯಾಪಾರ ಆರಂಭಿಸಿದ ಬಾಗಲಕೋಟೆಯ ಮುಧೋಳದ ಗೌರಿ ಕೃಷ್ಣಾ ಲಮಾಣಿ ಸೇರಿದಂತೆ ಪ್ರತಿಯೊಬ್ಬರನ್ನು ಮುಖ್ಯಮಂತ್ರಿಗಳಿಗೆ ಸಚಿವರು ಪರಿಚಯಿಸಿಕೊಟ್ಟರು.
ಗೃಹಲಕ್ಷ್ಮೀ ಯೋಜನೆ ಪಡೆದ ಲಿಂಗತ್ವ ಅಲ್ಪಸಂಖ್ಯಾತರು ಇದೇ ವೇಳೆ ಉಪಸ್ಥಿತಿದ್ದರು.
ನಾಡಿನ ದೊರೆಯನ್ನು ಹತ್ತಿರದಿಂದ ನೋಡುತ್ತಿದ್ದಂತೆಯೇ ಫಲಾನುಭವಿಗಳು ಪುಳಕಗೊಂಡರು. ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ