Kannada NewsKarnataka NewsLatest

*ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ*: *ಸಮೀಕ್ಷೆ ಗಡುವು ವಿಸ್ತರಣೆ ಇಲ್ಲ*: *ತಕ್ಷಣ ದಾಖಲಾತಿ ಸಲ್ಲಿಸಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ನೀಡಿರುವ ಗಡುವು ಅಕ್ಟೋಬರ್‌ 31ಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸಲು ಬೆಸ್ಕಾಂ ವಿನಂತಿಸಿದೆ.


ಕಳೆದ ಮೂರುವರೆ ತಿಂಗಳಿನಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ಮನೆಗೆ ಬೀಗ ಹಾಕಿರುವ, ಮನೆ ಖಾಲಿ ಇರುವ ಹಾಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಬೆಸ್ಕಾಂ ಕಚೇರಿಗೆ ತೆರಳಿ ದಾಖಲಾತಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಗಡುವಿನೊಳಗೆ ದಾಖಲಾತಿ ಸಲ್ಲಿಸಲು ಬೆಸ್ಕಾಂ ಮನವಿಮಾಡಿದ್ದು, ದಾಖಲಾತಿ ಸಲ್ಲಿಸಲು ಇದು ಕೊನೆಯ ಅವಕಾಶ ಎಂದು ಸ್ಪಷ್ಟಪಡಿಸಿದೆ.


ಬೆಸ್ಕಾಂನ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಯ ಗ್ರಾಹಕರು ಸೇರಿದಂತೆ ಒಟ್ಟು 7429773 ಲಕ್ಷ ಗ್ರಾಹಕರು ಗೃಹ ಜ್ಯೋತಿ ಫಲಾನುಭವಿಗಳಿದ್ದು, ಈ ಪೈಕಿ 7317687 ಲಕ್ಷ ಗ್ರಾಹಕರ ಸಮೀಕ್ಷೆ (ಶೇ. 98.49) ಅಕ್ಟೋಬರ್‌ 22ಕ್ಕೆ ಪೂರ್ಣಗೊಂಡಿದೆ.


ಸಮೀಕ್ಷೆ ಸಂದರ್ಭದಲ್ಲಿ ಬೀಗ ಹಾಕಿರುವ, ಖಾಲಿ ಇರುವ ಮನೆಗಳಿಗೆ ಬೆಸ್ಕಾಂ ಸಿಬ್ಬಂದಿ ಮೂರು ಬಾರಿ ಭೇಟಿ ನೀಡಿದ್ದು, ಈ ವರ್ಗಗಳ ಗ್ರಾಹಕರ ಮೊಬೈಲ್‌ ಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸಂದೇಶವನ್ನು ಕೂಡ ಕಳುಹಿಸಲಾಗಿತ್ತು. ಇಂತಹ ಗ್ರಾಹಕರಿಗೆ ದಾಖಲಾತಿ ಸಲ್ಲಿಸಲು ಅಕ್ಟೋಬರ್‌ 31 ಕೊನೆಯ ದಿನಾಂಕವಾಗಿದ್ದು, ಗಡುವು ವಿಸ್ತರಣೆ ಇಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button