Kannada NewsKarnataka NewsLatestPolitics

*ಇಡೀ ವಿಶ್ವದಲ್ಲೇ ಇದು ಮೊದಲ ಯೋಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ‘ಗೃಹ ಲಕ್ಷ್ಮಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಯಾದ ಎರಡು ತಿಂಗಳೊಳಗೆ ನಾಲ್ಕನೇ ಯೋಜನೆ ಜಾರಿಯಾದಂತಾಗಿದೆ.

ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳೆಯರಿಗೆ ಪ್ರತಿ ತಿಂಗಳು ಹಣ ನೀಡುವಂಥ ಯೋಜನೆ ಇಡೀ ವಿಶ್ವದಲ್ಲೇ ಇದು ಮೊದಲನೆಯದಾಗಿದೆ ಎಂದರು.

ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಸುಮಾರು 1. 28 ಕೋಟಿ ಕುಟುಂಬಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಮುಂದಿನ ತಿಂಗಳೇ ಮನೆ ಯಜಮಾನಿಗೆ 2 ಸಾವಿರ ಹಣ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿದ ದಿನ, ಇಂದೇ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ಸಿಗುತ್ತಿರುವುದು ನನ್ನ ಪುಣ್ಯ. ಮನೆ ಮನೆಗೂ ಈ ಯೋಜನೆ ತಲುಪಲಿ. ಸರ್ಕಾರ ನೀಡುತ್ತಿರುವ 2000 ರೂಪಾಯಿ ಪ್ರತಿ ಬಡ ಕುಟುಂಬದ ಹಸಿವನ್ನ ನೀಗಿಸುತ್ತದೆ. ನಾನೊಬ್ಬ ರೈತನ ಮಗಳಾದ ಕಷ್ಟವನ್ನು ನೋಡಿದ್ದೇನೆ. ಹಳ್ಳಿಯ ಜೀವನ ಅನುಭವಿಸಿದ್ದೇನೆ ಎಂದು‌‌ ಸಚಿವರು ಸ್ಮರಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೃಹ ಲಕ್ಷ್ಮಿ ಯೋಜನೆಯ ಮೊದಲ ಮೂರು ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಿದರು. ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಗೃಹ ಲಕ್ಷ್ಮಿ ಯೋಜನೆಯ ಲಾಂಛನ ಮತ್ತು ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ಸಮಾರಂಭದಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ, ರಾಮಲಿಂಗಾರೆಡ್ಡಿ, ಕೆಎಚ್ ಮುನಿಯಪ್ಪ, ರಹೀಂ ಖಾನ್, ಪ್ರಿಯಾಂಕ್ ಖರ್ಗೆ, ಬೈರತಿ‌ ಸುರೇಶ್, ಶಾಸಕರಾದ ಶ್ರೀನಿವಾಸ ಮಾನೆ, ಆಸಿಫ್ ಸೇಠ್, ಬಾಬಾಸಾಹೇಬ ಪಾಟೀಲ, ಎ.ಆರ್.ಕೃಷ್ಣಮೂರ್ತಿ, ಎನ್.ಎಚ್.ಕೋನರಡ್ಡಿ, ವಿಧಾನಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಸಲೀಂ ಅಹಮದ್, ಚನ್ನರಾಜ ಹಟ್ಟಿಹೊಳಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ ಉಪಸ್ಥಿತರಿದ್ದರು. ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button