*ಹತ್ತಿ ಮೇಲಿನ ಜಿಎಸ್ ಟಿ ತೆಗೆಯಬೇಕು: ಈರಣ್ಣ ಕಡಾಡಿ*
ಸಂಸದ ಈರಣ್ಣ ಕಡಾಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತ ದೇಶವು ಹತ್ತಿ ಉತ್ಪಾದನೆಯಲ್ಲಿ ಸಾವಲಂಬನೆ ಸಾಧಿಸಲು ಹತ್ತಿಯ ಮೇಲೆ ಈಗಿರುವ ಎ.ಪಿ.ಎಂ.ಸಿ ಸೆಸ್ ಮತ್ತು ಜಿ.ಎಸ್.ಟಿಯನ್ನು ತೆಗೆದು ಹಾಕಬೇಕು. ಜೊತೆಗೆ ಹೊರದೇಶಗಳಿಂದ ಕಚ್ಚಾ ಹತ್ತಿಯ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವ ಮೂಲಕ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವ ಹತ್ತಿ ಬೆಳಗಾರ ರೈತರ ಹಿತ ಕಾಪಾಡುವುದರ ಜೊತೆಗೆ 4000 ಹತ್ತಿ ಜಿನ್ನಿಂಗ್ ಸಂಬಂಧಿತ ಸಣ್ಣ ಕೈಗಾರಿಕೆಗಳು, 3000 ನೂಲುವ ಗಿರಿಣಿಗಳು ಸೇರಿದಂತೆ ದೇಶಿಯ ಜವಳಿ ಉದ್ಯಮವನ್ನು ರಕ್ಷಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ನವದೆಹಲಿಯ ರಾಜ್ಯಸಭೆ ಮಳೆಗಾಲ ಅಧಿವೇಶನದ ವಿಶೇಷ ವೇಳೆಯಲ್ಲಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಭಾರತ ಕೃಷಿ ಪ್ರಧಾನ ದೇಶವಾಗಿದೆ. ಒಟ್ಟು ಜನಸಂಖ್ಯೆಯ ಶೇ 48% ರಷ್ಟು ಜನ ಕೃಷಿ ಮತ್ತು ಕೃಷಿ ಸಂಬAಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಸಮುದಾಯದ ಬಲವರ್ಧನೆಗಾಗಿ ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಬಹಳ ದೊಡ್ಡ ಪ್ರಮಾಣದ ಅನುದಾನವನ್ನು ಕೊಡುವ ಮೂಲಕ ವಿಶೇಷ ಆಧ್ಯತೆಯನ್ನು ನೀಡಲಾಗಿದೆ. ಜೊತೆಗೆ ಕೃಷಿ ಕ್ಷೇತ್ರದ ನಂತರ ಜವಳಿ ಉದ್ಯಮವು ದೇಶದಲ್ಲಿ ಎರಡನೆಯ ಅತಿ ದೊಡ್ಡ ಉದ್ಯೋಗವನ್ನು ಒದಗಿಸುವ ಕ್ಷೇತ್ರವಾಗಿದೆ. ಹೀಗಾಗಿ ಜವಳಿ ಉದ್ಯಮಕ್ಕೆ ಪೂರಕವಾಗಿ ಹತ್ತಿ (ಕಾಟನ್) ಬೆಳೆಯು ನಮ್ಮ ಗಮನ ಸೆಳೆಯುತ್ತದೆ. ಇಂತಹ ಹತ್ತಿ ಬೆಳೆಯ ಉತ್ಪಾಧನೆಯು ಕಡಿಮೆಯಾಗುತ್ತಿರುವ ಕಾರಣ ಇದಕ್ಕೆ ಪೂರಕವಾಗಿರುವ ಹತ್ತಿ ಜಿನ್ನಿಂಗ್ ಸಂಬಂಧಿತ ಸಣ್ಣ ಕೈಗಾರಿಕೆಗಳು ಮತ್ತು ನೂಲುವ ಗಿರಣಿಗಳು ಅಳಿವಿನ ಅಂಚಿಗೆ ಬಂದುನಿಂತಿವೆ ಎಂದರು.
ಭಾರತವು ಜಾಗತಿಕವಾಗಿ ಹತ್ತಿಯ ಉತ್ಪಾದನೆಯ ಅತಿದೊಡ್ಡ ದೇಶವಾಗಿದೆ, ಇದು ವಿಶ್ವದ ಶೇ 39% ರಷ್ಟು ಭಾಗವನ್ನು ಹೊಂದಿದ್ದರೂ ಕೂಡಾ ಉತ್ಪಾದನೆಯಲ್ಲಿ ಪ್ರತಿಶತ ಶೇ 23% ರಷ್ಟು ಮಾತ್ರ ಪಾಲು ಹೊಂದಿದೆ. ಮಾಜಿ ಪ್ರಧಾನಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಮಿಷನ್ ಕಾಟನ್ ತಂತ್ರಜ್ಞಾನ ಪರಿಚಯಿಸಿದ ನಂತರ ಹತ್ತಿ ಬೆಳೆಯ ವಿಶಿಷ್ಟ ಯೋಜನೆಯು ಪ್ರತಿ ಹೆಕ್ಟೇರ್‌ಗೆ 275 ಕೆಜಿಯಿಂದ 585 ಕೆಜಿಗೆ ಹೆಚ್ಚಿಸುವ ಮೂಲಕ ದೇಶವು ವಿಶ್ವದ ಅತಿದೊಡ್ಡ ಹತ್ತಿ ಉತ್ಪಾದಕರ ಸಾಲಿನಲ್ಲಿ ಸೇರುವುದಕ್ಕೆ ಅವಕಾಶ ಮಾಡಿಕೊಟ್ಟಿತು.
ಆದರೂ ಕೂಡಾ ಪ್ರಸುತ್ತ ಜಗತ್ತಿನ ಹತ್ತಿ ಇಳುವರಿ ಪ್ರಮಾಣವನ್ನು ಗಮನಿಸಿದಾಗ ಪ್ರತಿ ಹೆಕ್ಟೇರ್‌ಗೆ ಅಮೆರಿಕಾ 900 ಕೆಜಿ, ಬ್ರೆಜಿಲ್ 1800 ಕೆಜಿ ಮತ್ತು ಆಸ್ಟ್ರೇಲಿಯಾ 2400 ಕೆಜಿ ಇಳುವರಿ ಪಡೆಯುತ್ತವೆ. ಇದರ ಪರಿಣಾಮವಾಗಿ ಅಮೇರಿಕಾ ರೈತರು ಪ್ರತಿ ಹೆಕ್ಟೇರ್‌ಗೆ 2 ಲಕ್ಷ ರೂಪಾಯಿಗಳನ್ನು, ಬ್ರೆಜಿಲ್ ರೈತರು ಪ್ರತಿ ಹೆಕ್ಟೇರಿಗೆ 4 ಲಕ್ಷ ರೂಪಾಯಿಗಳನ್ನು ಮತ್ತು ಆಸ್ಟ್ರೇಲಿಯಾ ರೈತರು ಪ್ರತಿ ಹೆಕ್ಟೇರಿಗೆ 5 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಆದರೆ ಭಾರತೀಯ ರೈತರು ಪ್ರತಿ ಹೆಕ್ಟೇರಿಗೆ 400 ಕೆಜಿ ಇಳುವರಿ ಪಡೆದು ಕೇವಲ 40,000 ರೂಪಾಯಿಗಳನ್ನು ಪಡೆಯುತ್ತಾರೆ. ಇದರ ಪರಿಣಾಮ ಜವಳಿ ಉದ್ಯಮಗಳು ಹೊರ ದೇಶಗಳಿಂದ ಕಡಿಮೆ ಬೆಲೆಗೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕ್ರಮೇಣ ನಮ್ಮ ದೇಶದಲ್ಲಿ ಹತ್ತಿ ಬೆಳೆಯ ಕ್ಷೇತ್ರ ಮತ್ತು ಇಳುವರಿ ಕಡಿಮೆಯಾಗುತ್ತಾ ಸಾಗುತ್ತಿದೆ ಎಂದರಲ್ಲದೇ ಅಮೇರಿಕಾ, ಬ್ರೆಜಿಲ್, ಆಸ್ಟ್ರೇಲಿಯಾ ಈ ದೇಶಗಳಲ್ಲಿ ರೈತರಿಗೆ ದೊರೆಯುವ ಉತ್ತಮ ಗುಣಮಟ್ಟದ ಬೀಜಗಳಿಗಿಂತ ಹೆಚ್ಚು ಗುಣಮಟ್ಟದ ಬೀಜಗಳನ್ನು ಹಾಗೂ ಕೀಟನಾಶಕಗಳನ್ನು ಒದಗಿಸಲು ಭಾರತದಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿಶ್ವವಿದ್ಯಾನಿಲಯಗಳು ಸಂಶೋಧನೆ ಮಾಡುವ ಮೂಲಕ ರೈತರ ನೆರವಿಗೆ ಬರಬೇಕಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ