Belagavi NewsBelgaum NewsKannada NewsKarnataka NewsLatestPolitics

​*ನಾವು ಸೇತುವೆಯ​ನ್ನೂ ಕಟ್ಟಿದ್ದೇವೆ, ಮಂದಿರವ​ನ್ನೂ ಕಟ್ಟಿದ್ದೇವೆ​, ಬಡ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ​ಯೂ ಮಾಡಿದ್ದೇವೆ  : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್* 

ಪ್ರಗತಿವಾಹಿನಿ ಸುದ್ದಿ: ​ನಾವು ಸೇತುವೆಯ​ನ್ನೂ ಕಟ್ಟಿದ್ದೇವೆ, ಮಂದಿರವ​ನ್ನೂ ಕಟ್ಟಿದ್ದೇವೆ. ಬಡ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ​ಯೂ ಮಾಡಿದ್ದೇವೆ. ನಮ್ಮ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಉಪಯೋಗ ಮಾಡಿಕೊಳ್ಳುತ್ತಿದ್ದಾರೋ, ಇಲ್ಲವೋ ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ  ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಇವರ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಮ್ಮಿಕೊಂಡಿದ್ದ ಗ್ಯಾರಂಟಿ ಸಮಾವೇಶ ಸಮಾರಂಭದಲ್ಲಿ  ಮಾತನಾಡಿದ ಸಚಿವರು, ಚುನಾವಣೆಗೂ ಮುನ್ನ ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಭಾಷೆ ಕೊಟ್ಟಿ​ದ್ದೆವು. ಬೆಳಗಾವಿ ಜಿಲ್ಲೆಯಲ್ಲಿ ನೀವು 11 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದೀರಿ. ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಪಕ್ಷ. ಭಾಗ್ಯಗಳ ಸರದಾರ ಖ್ಯಾತಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಮಾತಿನಂತೆ ವಿಶ್ವಾಸ ಉಳಿಸಿಕೊಂಡಿದ್ದಾರೆ. ನಿಮ್ಮ ಸ್ವಾಭಿಮಾನ, ಗೌರವ ಎತ್ತಿ ಹಿಡಿಯುವ ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಕ್ರಮ ತೆಗೆದುಕೊಂಡಿದ್ದೇವೆ. ಕೆಲವರು ಎರಡು ಸಾವಿರ ರೂಪಾಯಿ ಎಂದರೆ ಅದೇನು ದೊಡ್ಡ ಮೊತ್ತವೇ ಎಂದು‌ ಕೇಳುತ್ತಿದ್ದಾರೆ. ತರಕಾರಿ ಮಾರುವ ಮಹಿಳೆಯನ್ನು ಕೇಳಿ, ಬಿಸಿಲಿನಲ್ಲಿ ಕೆಲಸ ಮಾಡುವ ಉದ್ಯೋಗ ಖಾತ್ರಿಯ ಮಹಿಳೆಯರನ್ನು ಕೇಳಿ ವರ್ಷಕ್ಕೆ 24 ಸಾವಿರ ರೂಪಾಯಿ ಅವರಿಗೆ ಎಷ್ಟು ಮುಖ್ಯ ಅನ್ನೋದು ತಿಳಿಯುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.  

ಬಿಜೆಪಿಯವರು ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುತ್ತಾರೆ. ಅಂಬಾನಿ, ಅದಾನಿಯಂಥವರಿಗೆ ಸಹಾಯ ಮಾಡುತ್ತಾರೆ. ಆದರೆ ನಾವು ಬಡವರಿಗೆ ನೇರವಾಗಿ ಸಹಾಯ ಹಸ್ತ ನೀಡುತ್ತಿದ್ದೇವೆ ಎಂದು‌ ಸಚಿವರು ಹೇಳಿದರು. 

Home add -Advt

ಹಬ್ಬಗಳು ಬಂದಾಗ ಮಹಿಳೆಯರಿಗೆ ಒಂದು ಒಳ್ಳೆಯ ಸೀರೆ ಖರೀದಿಸಬೇಕೆನ್ನುವ ಆಸೆ ಬಂದರೆ ದುಡ್ಡಿಗಾಗಿ ಅಪ್ಪನನ್ನು ಕೇಳಲೋ, ಗಂಡನನ್ನು ಕೇಳಲೋ ಅಥವಾ ಪಕ್ಕದ ಮನೆಯವಳ ಬಳಿ ಸಾಲ ಪಡೆಯಲೋ ಎಂದು ಯೋಚಿಸುತ್ತಾರೆ. ಯಾರದ್ದೋ ಮುಂದೆ ಕೈ ಚಾಚುವ ಸ್ಥಿತಿಯಿ​ರುತ್ತದೆ. ಈಗ ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ ಅಷ್ಟರ ಮಟ್ಟಿಗೆ ಸಹಾಯವಾಗಿದೆ. ನಿಮ್ಮಿಂದಲೇ ಬಂದ ನಮ್ಮ ಸರ್ಕಾರ, ನಿಮ್ಮ ನೆರವಿಗೆ ನಿಂತಿದೆ ಎಂದು ಸಚಿವರು ಹೇಳಿದರು. 

ಚುನಾವಣೆ ಹತ್ತಿರ ಬಂದಾಗ ಏನೇನೋ‌ ವಿಷಯ ತರುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ಕಷ್ಟದಲ್ಲಿ​ ಸ್ಪಂದಿಸಿದವರಿಗೆ ಆಶೀರ್ವಾದ ಮಾಡುವುದು ನಮ್ಮ ಗುಣ. ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಿ. ಹೆಣ್ಣು ಮಕ್ಕಳು ಭಾಷೆಕೊಟ್ಟರೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸ್ವಾಭಿಮಾನದಿಂದ ಜೀವನ ನಡೆಸಲು ಐದು ಗ್ಯಾರಂಟಿಗಳನ್ನು ನೀಡಿರುವ ನಮಗೆ ನಿಮ್ಮ ಆಶೀರ್ವಾದ ಇರಲಿ ಎಂದು ಸಚಿವರು ವಿನಂತಿಸಿದರು. 

​ನಮ್ಮ ಬೆಳಗಾವಿ ಜಿಲ್ಲೆಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗಾಗಿ 212 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ. ನಾವು ಮಾತುಕೊಟ್ಟಂತೆ ನಡೆದುಕೊಳ್ಳುತ್ತಿದ್ದೇವೆ. ಇದು ಕೇವಲ ಚುನಾವಣೆ ಗಿಮಿಕ್ ಅಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಜನ ಪ್ರತಿನಿಧಿಗಳನ್ನು ಮುಂದಿನ ದಿನಗಳಲ್ಲಿ ಆರಿಸಿ ಕಳುಹಿಸಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

  ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವುದು ಬಾಕಿ ಇದೆ. ನಿಮ್ಮ ಸೇವೆಯನ್ನು ಗುರುತಿಸಿದ್ದೇವೆ. ಶೀಘ್ರವೇ ಕೊಟ್ಟ ಭಾಷೆಯನ್ನು ​ಈಡೇರಿಸುತ್ತೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇನ್ನೂ ಹಲವು ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದು‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. 

ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ನಮ್ಮ ಸರ್ಕಾರ ಬಂದರೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಮಾತು ಕೊಟ್ಟಿ​ದ್ದೆವು. ಆ​ಗ ಟೀಕೆ, ಅಪಪ್ರಚಾರ ಮಾಡಿದವರೇ ಈಗ ಪ್ರಚಾರ ಪಡೆಯಲು ಗ್ಯಾರಂಟಿ ಶಬ್ದವನ್ನು ಬಳಸುತ್ತಿದ್ದಾರೆ. ಇದೇ ನಮ್ಮ ಸರ್ಕಾರದ ಸಾಧನೆಯನ್ನು ಸಾರಿ ಹೇಳುತ್ತದೆ ಎಂದರು. 

ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲವಾಗಿದೆ.  60 ಸಾವಿರ ಕೋಟಿ ರೂಪಾಯಿ ದೊಡ್ಡ ಮೊತ್ತದ ಹಣ ಜೋಡಿಸುವುದು ಸುಲಭವಾಗಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಿ ಇದು ಸಾಧ್ಯವಾಗಿದೆ.  ಬರುವ ದಿನಗಳಲ್ಲಿ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಕೋರಿದರು. 

ಇದೇ ವೇಳೆ ಅನ್ನ ಭಾಗ್ಯ ಮತ್ತು ಡಿಬಿಟಿ‌ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಯಿತು. 

​ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಬಾಬಾಸಾಹೇಬ್ ಪಾಟೀಲ, ವಿಶ್ವಾಸ್ ವೈದ್ಯ, ಹೆಸ್ಕಾಂ  ಮುಖ್ಯ ಇಂಜಿನಿಯರ್ ವಿ. ಪ್ರಕಾಶ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಪೋಲಿಸ್ ಆಯುಕ್ತರಾದ ಎಸ್ ಎನ್. ಸಿದ್ದರಾಮಪ್ಪ, ಜಿಲ್ಲಾ ಸಾಂಖಿಕ ಅಧಿಕಾರಿ ಗಂಗಾಧರ್ ಡ್ಯೂಟರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಅಧಿಕಾರಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಯೋಜನಾಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ವಿಜಯಕುಮಾರ ಹೊನಕೇರಿ, ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಆಯಾ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button