Kannada NewsKarnataka NewsLatestPolitics

*ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ*

ಗ್ಯಾರಂಟಿ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಇವುಗಳು ನಿರಂತರವಾಗಿ ನಡೆಯಲಿವೆ. ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಬಡ ಜನರ ಸಬಲೀಕರಣಕ್ಕಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಕೋಟೆ ಮೈದಾನದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಅಂದರೆ ಬದ್ಧತೆ, ಬದ್ಧತೆ ಅಂದರೆ ಕಾಂಗ್ರೆಸ್. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಅಧಿಕಾರಕ್ಕೆ ಬಂದ ಕೇವಲ ಆರು ತಿಂಗಳಲ್ಲಿ ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ನಾವು ನಮ್ಮ ಸರಕಾರ ಬಂದ ಮರು ಕ್ಷಣದಿಂದಲೇ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸಬೇಕು, ಎಷ್ಟು ಜನರಿಗೆ ನಮ್ಮ ಗ್ಯಾರಂಟಿ ಯೋಜನೆ ತಲುಪಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಎಲ್ಲ ಕಡೆ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸುತ್ತಿದ್ದೇವೆ. ಡಿಮೊನಿಟೈಜೇಶನ್, ಕೊರೋನಾ, ಪ್ರವಾಹ, ಬೆಲೆ ಏರಿಕೆ ಎಲ್ಲದರಿಂದಾಗಿ ತತ್ತರಿಸಿರುವ ಜನರ ಬವಣೆಯನ್ನು ನೋಡಿ, ಜನರು ಉಸಿರಾಡಲು ಅವಕಾಶ ಮಾಡಿಕೊಡೋಣ ಎಂದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ನಮ್ಮ ವಿರೋಧಿಗಳು ಇದಕ್ಕೆ ಏನೆಲ್ಲ ಹೇಳಿದರು, ಯೋಜನೆ ಜಾರಿಯಾಗುವುದೇ ಇಲ್ಲ ಎಂದರು, ಬಿಟ್ಟಿ ಯೋಜನೆ ಎಂದು ಕರೆದು ಬಡ ಜನರನ್ನು ಅವಮಾನಿಸಿದರು. ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಜನರಲ್ಲಿ ಭಯ ಮೂಡಿಸಲು ಪ್ರಯತ್ನಿಸಿದರು. ಆದರೆ, ಅಧಿಕಾರಕ್ಕೆ ಬಂದ ಮರುಕ್ಷಣವೇ ಜನರಿಗೆ ಕೊಟ್ಟ ಭಾಷೆಯಂತೆ ಯೋಜನೆ ಜಾರಿಗೆ ತಂದಿದ್ದೇವೆ, ಅತ್ಯಂತ ಸಮರ್ಥವಾಗಿ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಿದೆ, ಜನರ ಜೀವನ ಮಟ್ಟ ಮೇಲಕ್ಕೇರಿದೆ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ. ನಮ್ಮ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಪ್ರತಿ ತಿಂಗಳು ಸರಾಸರಿ ನಾಲ್ಕೂವರೆ ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ವರ್ಷಕ್ಕೆ 54 ಸಾವಿರ ಕೋಟಿ ರೂ.ಗಳನ್ನು ನಾವು ಜನರಿಗಾಗಿ ನೇರವಾಗಿ ಬಿಡುಗಡೆ ಮಾಡುತ್ತಿದ್ದೇವೆ. ಕೇವಲ ನನ್ನ ಇಲಾಖೆಯ ಗೃಹಲಕ್ಷ್ಮೀ ಯೋಜನೆಗಾಗಿಯೇ ವರ್ಷಕ್ಕೆ 28 ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಸಚಿವೆ ಹೇಳಿದರು.
ಸಣ್ಣ ಪುಟ್ಟದ್ದಕ್ಕೆಲ್ಲ ಗಂಡನ ಎದುರು, ಮಕ್ಕಳ ಎದುರು ಕೈ ಚಾಚುವಂತಹ ಸ್ಥಿತಿಯಿಂದ ಮಹಿಳೆಯರನ್ನು ಪಾರು ಮಾಡಿದ್ದೇವೆ. ಮುಂದಿನ ದಿನಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿ ಎಂದರು.

ಬದ್ಧತೆವುಳ್ಳ ಓರ್ವ ಸಂಸದ ಡಿ.ಕೆ.ಸುರೇಶ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಬದ್ದತೆ ಹಾಗೂ ಓರ್ವ ಕ್ರಿಯಾಶೀಲ ಜನ ಪ್ರತಿನಿಧಿ ಎಂದು ಹೆಬ್ಬಾಳಕರ್ ಹೇಳಿದರು.


ಮುಂದಿನ ಚುನಾವಣೆಯಲ್ಲೂ ಡಿ.ಕೆ.ಸುರೇಶ್ ಅವರನ್ನು ಆರಿಸಿ ಕಳುಹಿಸಿ ಎಂದು ವಿನಂತಿಸಿದರು. ಕಾಂಗ್ರೆಸ್ ಎಂದರೆ ನುಡಿದಂತೆ ನಡೆಯುವ ಪಕ್ಷ, ಕೊಟ್ಟ ಭಾಷೆಗೆ ತಪ್ಪದ ಪಕ್ಷ, ನಮ್ಮ ಜೊತೆ ನೀವಿರಿ, ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ರಾಜು, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ವಿವಿಧ ಇಲಾಖೆಯ ಅಧಿಕಾರಿಗಳು, ಅಪಾರ ಸಂಖ್ಯೆಯ ಮಹಿಳೆಯರು ಸಮಾವೇಶಕ್ಕೆ ಸಾಕ್ಷಿಯಾದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button