NationalPolitics

*ಗುಂಡಿನ ಚಕಮಕಿ: ಸಮಾಜವಾದಿ ಪಕ್ಷದ ಕಾರ್ಯಕರ್ತರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಕುಶಿನಗರದ ಬಿಂಟೋಲಿಯಾ ಗ್ರಾಮದಲ್ಲಿ ಪೊಲೀಸರು ಮತ್ತು ನಕಲಿ ನೋಟು ದಂಧೆ ನಡೆಸುತ್ತಿದ್ದ ಗ್ಯಾಂಗ್ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ನಕಲಿ ನೋಟು ಗ್ಯಾಂಗ್‌ನ ಓರ್ವ ಸದಸ್ಯನಾದ ಮುಸ್ತಕೀಮ್ ಗಾಯಗೊಂಡಿದ್ದಾನೆ.

ಪೊಲೀಸರು ದಾಳಿಯಲ್ಲಿ ನಕಲಿ ಕರೆನ್ಸಿ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಆರೋಪದ ಮೇಲೆ ಇಬ್ಬರು ಸಮಾಜವಾದಿ ಪಕ್ಷದ ಪದಾಧಿಕಾರಿಗಳು ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 5.92 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳು,10 ಸಾವಿರ ನಗದು, ಒಂದು ಪಿಸ್ತೂಲ್, 13 ಸೆಲ್‌ಫೋನ್‌ಗಳು, 8 ಲ್ಯಾಪ್‌ಟಾಪ್‌ಗಳು, 2 ಕಾರು, ಆಧಾರ್ ಕಾರ್ಡ್‌ಗಳು, ಸಿಮ್ ಮತ್ತು ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಗ್ಯಾಂಗ್‌ ಭೂಕಬಳಿಕೆಯಲ್ಲೂ ತೊಡಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ. ಪಕ್ಷದ ವರ್ಚಸ್ಸಿಗೆ ಮಸಿ ಬಳಿಯಲು ಪೊಲೀಸರು ತನ್ನ ನಾಯಕರನ್ನು ತಪ್ಪಾಗಿ ಸಿಲುಕಿಸಿದ್ದಾರೆ ಎಂದು ಆರೋಪಿಸಿರುವ ಎಸ್‌ಪಿ ಜಿಲ್ಲಾ ಘಟಕ ಈ ಬಗ್ಗೆ ವಿಸ್ಕೃತ ತನಿಖೆಗೆ ಆಗ್ರಹಿಸಿದೆ. ಬಂಧಿತರಲ್ಲಿ ಸಮಾಜವಾದಿ ಪಕ್ಷದ ಲೋಹಿಯಾ ವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಖಾನ್ ಅಲಿಯಾಸ್ ಬಬ್ಲೂ ಖಾನ್ ಮತ್ತು ಪಕ್ಷದ ಸಾಂಸ್ಕೃತಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ನೌಶಾದ್ ಖಾನ್ ಸೇರಿದ್ದಾರೆ.

ಮೊಹಮ್ಮದ್ ರಫೀಕ್ ಅನ್ಸಾರಿ, ಔರಂಗಜೇಬ್, ಅಲಿಯಾಸ್ ಲಾಡೆನ್, ಶೇಖ್ ಜಮಲ್ಲುದಿನ್, ನಿಜಾಮುದಿನ್, ಅಲಿಯಾಸ್ ಮುನ್ನಾ ರೆಹಾನ್ ಖಾನ್, ಅಲಿಯಾಸ್ ಸದ್ದಾಂ, ಹಾಸಿಂ ಖಾನ್, ಶೆರಾಜ್ ಮತ್ತು ಪರ್ವೇಜ್ ಇಲಾಹಿ, ಅಲಿಯಾಸ್ ಕೌಸರ್ ಅಫ್ರಿದಿ ಬಂಧಿತ ವ್ಯಕ್ತಿಗಳಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಜಿತೇಂದ್ರ ಯಾದವ್, ಮನೀಶ್ ಕುಮಾರ್ ಸಿಂಗ್, ಅಲಿಯಾಸ್ ಚೋಟು, ಕಮ್ರುದ್ದೀನ್ ಮತ್ತು ಅಪರಿಚಿತ ವ್ಯಕ್ತಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button