*ನಾನು-ಚಂದ್ರಕಾಂತ ಬೆಲ್ಲದ್ ಗೋಕಾಕ್ ಚಳವಳಿಯ ಒಡನಾಡಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ; ಧಾರವಾಡ: ನಾನು-ಚಂದ್ರಕಾಂತ ಬೆಲ್ಲದ್ ಗೋಕಾಕ್ ಚಳವಳಿಯ ಒಡನಾಡಿಗಳು. ಬಸವಣ್ಣನವರ ಮನುಷ್ಯ ಪ್ರೀತಿ, ಜಾತಿ ತಾರತಮ್ಯ ವಿರೋಧಿ ವಿಚಾರಗಳಲ್ಲಿ ಬೆಲ್ಲದ್ ಅವರಿಗೆ ಅಪಾರ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಿಸಿದರು.
ಅವರು ಶ್ರೀ ಚಂದ್ರಕಾಂತ ಗುರಪ್ಪ ಬೆಲ್ಲದ ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಅಲ್ಲಮಲೋಕ”, ” ದೊಡ್ಡಹೊಳೆ ದಾಟಿದವರು”, “ಬೆಲ್ಲದಚ್ಚು” ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತಾಡಿದರು.
ಮನುಷ್ಯರನ್ನು ಜಾತಿ-ಧರ್ಮಗಳಾಚೆಗೆ ಪರಸ್ಪರ ಪ್ರೀತಿಸುವ, ಗೌರವಿಸುವ ಸಂಸ್ಕೃತಿಯನ್ನು ಚಂದ್ರಕಾಂತ ಬೆಲ್ಲದ್ ಅವರು ತಮ್ಮ ಬದುಕಿನಲ್ಲಿ ಆಚರಿಸಿಕೊಂಡು ಬಂದಿದ್ದಾರೆ ಎಂದು ತಮ್ಮ ಮತ್ತು ಬೆಲ್ಲದ್ ಅವರ ನಡುವಿನ ಬಾಂಧ್ಯವ್ಯವನ್ನು ಸ್ಮರಿಸಿದರು.
ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವಂತಹ ಮಾತುಗಳನ್ನು ಯಾವತ್ತೂ ಆಡದ ಚಂದ್ರಕಾಂತ ಬೆಲ್ಲದ್ ಅವರು ಅತ್ಯುನ್ನತ ಮನುಷ್ಯ ಗೌರವವನ್ನು ಹೊಂದಿದ್ದು, ಇವರದ್ದು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತಹ ಅಪರೂಪದ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಅಪಾರವಾಗಿ ಮೆಚ್ಚುಗೆ ಸೂಚಿಸಿದರು.
ಚಂದ್ರಕಾಂತ ಬೆಲ್ಲದ್ ಅವರು ಉದ್ಯಮಶೀಲತೆ, ಮನುಷ್ಯ ಪ್ರೀತಿ, ಮೂಲಕ ವಿಶಾಲವಾಗಿ ಬೆಳೆದಿದ್ದಾರೆ. ಎಲ್ಲಾ ವರ್ಗದ ಜನರಿಂದ ಅಪಾರ ಪ್ರೀತಿ ಗಳಿಸಿ ಅತ್ಯಂತ ನಿಷ್ಠುರ ನ್ಯಾಯಪರವಾದ ಪ್ರಾಮಾಣಿಕತೆ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಮೆಚ್ಚಿಕೊಂಡರು.
ಡಂಬಳದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಭಾಲ್ಕಿಯ ಹಿರೇಮಠ ಸಂಸ್ಥಾನದ ಶ್ರೀ ಮ.ಘ.ಚ.ಡಾ.ಬಸವಲಿಂಗ ಪಟ್ಟದೇವರು, ಧಾರವಾಡ ಮುರುಘಾಮಠದ ಮ.ನಿ.ಪ್ರ.ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಗೋ.ರು.ಚನ್ನಬಸಪ್ಪ ಅವರು ವಹಿಸಿದ್ದರು.
ಕಾರ್ಮಿಕ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಂತೋಷ್ ಲಾಡ್ ಅವರು ಮುಖ್ಯ ಅತಿಥಿಗಳಾಗಿದ್ದ ಕಾರ್ಯಕ್ರಮದಲ್ಲಿ ಲೀಲಾವತಿ ಬೆಲ್ಲದ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ್ ಅಬ್ಬಯ್ಯ, ಶ್ರೀನಿವಾಸ ಮಾನೆ , ಮಹೇಶ್ ಟೆಂಗಿನಕಾಯಿ ಉಪಸ್ಥಿತರಿದ್ದರು.
ಸಾಹಿತಿಗಳಾದ ನಾ.ಮೊಗಸಾಲೆ, ಡಾ.ಶಂಭು ಬಳಿಗಾರ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಗುರಪ್ಪ ಬೆಲ್ಲದ, ಅಭಿನಂದನ ಗ್ರಂಥದ ಸಂಪಾದಕಾರದ ಸಾಹಿತಿ ರಂಜಾನ್ ದರ್ಗಾ, ಇತರೆ ಗ್ರಂಥಗಳ ಸಂಪಾದಕರಾದ ಪ್ರೊ ಶಶಿಧರ ತೋಡಕರ, ದಿವಾಕರ ಹೆಗಡೆ ಮತ್ತು ಚಿತ್ರಕಲಾವಿದ ಚಂದ್ರು ಗಂಗೊಳ್ಳಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ