Kannada NewsKarnataka NewsLatest

ಬೆಳಗಾವಿಯಲ್ಲೊಂದು ಅಪರೂಪದ ಕಾರ್ಯಕ್ರಮ; ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜನೆ

 ಸಂತ ಮೀರಾ ಶಾಲೆಯಲ್ಲಿ ಗುರುವಂದನೆ, ಸಾಧಕರಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿಯಲ್ಲಿ ಶನಿವಾರ ಅತ್ಯಂತ ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಗುರುವಂದನೆ ಹಾಗೂ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಂಗವಾಗಿ ವಿವಿಧ ಕ್ಷೇತ್ರದ 75 ಸಾಧಕರಿಗೆ ಪಾದಪೂಜೆ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ ತಿಳಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು.  

ಅನಗೋಳದ ಜನಕಲ್ಯಾಣ ಟ್ರಸ್ಟ್ ನ ಸಂತ ಮೀರಾ ಅಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ  ಗುರು ವಂದನೆ ಹಾಗೂ 75 ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಂಡಿತ್ ವಿಜಯೇಂದ್ರ ಶರ್ಮಾ, ಸಂಸ್ಕೃತಿ ಉಳಿದರೆ ದೇಶ ಉಳಿಯುತ್ತದೆ. ದೇಶ ಉಳಿದರೆ ವಿಶ್ವ ಉಳಿಯುತ್ತದೆ. ಹಾಗಾಗಿ ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವುದು ನಮ್ಮ ಕರ್ತವ್ಯ  ಎಂದು  ಹೇಳಿದರು.

 

ಇಂದು ಇಡೀ ದೇಶದ ಕಣ್ಣು ಭಾರತದತ್ತ ಇದೆ. ಇದಕ್ಕೆ ಕಾರಣ ನಮ್ಮ ದೇಶದ ದಾರ್ಶನಿಕರು, ಮಹಾಪುರುಷರ ತತ್ವಾದರ್ಶಗಳು. ಮಕ್ಕಳಲ್ಲಿ ಉತ್ತಮ ಆಚಾರ, ವಿಚಾರ ಬೆಳೆಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಪೂರಕ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಸಾಧಕರ ಪಾದಪೂಜೆ ಮಾಡಿಸಲಾಯಿತು.  ನಂತರ ಉದ್ಯೋನ್ಮುಖ ಸಾಧಕರು ಹಾಗೂ ಕಲಾವಿದರಾದ ಅಶ್ವಿನಿ ಕಿತ್ತೂರ್, ಶಿವಾನಿ ಜಮಖಂಡಿ, ಸಂಚಿತಾ ನಿಲಜಿಕರ್ ಅವರನ್ನು ಸತ್ಕರಿಸಲಾಯಿತು.

ಶಾಲೆಯ ಮುಖ್ಯಾಧ್ಯಾಪಕಿ ಸುಜಾತಾ ದಫ್ತರದಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಗುರು ಹಿರಿಯರನ್ನು ಗೌರವಿಸುವ ಗುರು ಪೂರ್ಣಿಮೆ ಉತ್ಸವ ನಮ್ಮ ಉದಾತ್ತ ಸಂಸ್ಕೃತಿಯ ಪ್ರತೀಕ. ಅನೇಕ ಸಂಘ ಸಂಸ್ಥೆಗಳು ನಾನಾ ರೀತಿಯಲ್ಲಿ ಕಾರ್ಯಕ್ರಮ ನಡೆಸಿದ್ದರೂ ಸಂತ ಮೀರಾ ಶಾಲೆ ವತಿಯಿಂದ ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಔಚಿತ್ಯಪೂರ್ಣವೆನಿಸುವಂತೆ ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.  75 ಸಾಧಕರ ಸನ್ಮಾನ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ  ಪರಮೇಶ್ವರ ಹೆಗಡೆ  ಸಂಸ್ಕಾರ, ಸಂಸ್ಕೃತಿ ಬಗ್ಗೆ ತಿಳಿಸಿಕೊಟ್ಟರು. ಜನಕಲ್ಯಾಣ ಟ್ರಸ್ಟ್ ಸಂಸ್ಕೃತಿ ಉಳಿಸಲು ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಅವರು ಸವಿಸ್ತಾರ ಮಾಹಿತಿ ನೀಡಿದರು.

ವಿದ್ಯಾರ್ಥಿನಿ ಗೌಸಿಯಾ ಮಾಡಿವಾಲೆ ಮಾತನಾಡಿ,  ಶ್ರೀ ರಾಮಚಂದ್ರನ ಗುರುಗಳಾದ  ವಸಿಷ್ಠರು, ಶ್ರೀಕೃಷ್ಣನ ಗುರು ಸಂದೀಪನಿ, ಅರ್ಜುನ,  ಏಕಲವ್ಯರ ಗುರು ದ್ರೋಣಾಚಾರ್ಯರು, ಸಂತ ಜ್ಞಾನೇಶ್ವರರರು  ಸಾಧನೆಯ ಹಿಂದೆ ಗುರುವಿನ ಮಹತ್ವಕ್ಕೆ ನಿದರ್ಶನವಾದವರು.  ಜೀವನದಲ್ಲಿ ಗುರುವಿನ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ.  ಜ್ಞಾನ ಪಡೆಯಲು,  ಪರಿಪೂರ್ಣತೆ ಸಾಧಿಸಲು ಗುರುವಿನ ಕೃಪೆ ಬೇಕೇಬೇಕು ಎಂದರು.

ಅರುಣಾ ಪುರೋಹಿತ ನಿರೂಪಿಸಿದರು. ಭಾಗ್ಯಶ್ರೀ ದೇಸಾಯಿ ವಂದಿಸಿದರು.  ಜನಕಲ್ಯಾಣ ಟ್ರಸ್ಟ್ ಸದಸ್ಯ ಟ್ರಸ್ಟಿ ಲಕ್ಷ್ಮಣ ಪವಾರ್, ಶಿಕ್ಷಕ ವೃಂದ, ಪಾಲಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

NIRF ರ್ಯಾಂಕಿಂಗ್ ಪಟ್ಟಿ ಪ್ರಕಟ: ವಿಟಿಯು ಶ್ರೇಷ್ಠ ಸಾಧನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button