Kannada NewsKarnataka NewsLatestPolitics

*692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದೇ ಸಿದ್ದರಾಮಯ್ಯ ಸಾಧನೆ; ಸಿಎಂ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರಕಾರ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ಕಟುವಾಗಿ ಟೀಕಿಸಿದರು.

ಪಕ್ಷದ ರಾಜ್ಯ ಕಾವೇರಿ ಜೆ ಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಎಲ್ಲಾ ಕಡೆ ಗ್ಯಾರಂಟಿ ಕೊಟ್ಟಿದ್ದೇವೆ, ಸಾಧನೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಿದ್ದಾರೆ. ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಸಾಧನೆಯ ಕಿರುನೋಟ ಎಂದು ಮಾಜಿ ಪ್ರಧಾನಿಗಳು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕಾವೇರಿ ನೀರಿಗಾಗಿ ಹೋರಾಟ ನಡೆಸಿ ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟು ಕಟ್ಟಿಸಿದವನು ನಿಮ್ಮ ಮುಂದೆ ಕೂತಿದ್ದೇನೆ. ಹೇಮಾವತಿಯಲ್ಲಿ ನೀರಿದೆ. ಅಲ್ಲಿನ ಹಳ್ಳಿಗಳಿಗೂ ಆ ನೀರು ಕೊಡಿ, ಬೆಂಗಳೂರಿಗೂ ನೀರು ಕೊಡಿ. ಕೆ.ಆರ್.ಎಸ್ ನಲ್ಲಿ 90 ಅಡಿಗೆ ಬಂದಿದೆ. ಹೇಮಾವತಿಯಲ್ಲಿ 23 ಟಿಎಂಸಿ ನೀರಿದೆ. ಜನರಿಗೆ ಕೊಡಲು ನಿಮಗೆ ಸಮಸ್ಯೆ ಏನು? ಜನರು ನೀರಿಗಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಾಜಿ ಪ್ರಧಾನಿಗಳು ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ನೀರಿನ ಸಮಸ್ಯೆ ಉಲ್ಬನಕ್ಕೆ ಕಳವಳ

ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮಾರ್ಚ್ 7ರ ಒಳಗೆ ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ ಗಳನ್ನು ವಶಕ್ಕೆ ಪಡೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ದಿನಪತ್ರಿಕೆಗಳ ಸುದ್ದಿ ತುಣುಕುಗಳನ್ನು ತೋರಿಸುತ್ತಾ ಸರಕಾರದ ಮೇಲೆ ಮಾಜಿ ಪ್ರಧಾನಿಗಳು ಪ್ರಹಾರ ನಡೆಸಿದರು.

ಕುಡಿಯುವ ನೀರಿನ ಸಮಸ್ಯೆ ಎಷ್ಟು ದಿನಗಳಿಂದ ಇದೆ. ಇವರೇ ಅಲ್ಲವೇ ಡಿಸಿಎಂ, ನೀರಾವರಿ ಮಂತ್ರಿ. ಒಂದು ಟ್ಯಾಂಕರ್ ನೀರಿಗೆ ₹2500 ರಿಂದ 3,000 ಕೊಡಬೇಕು. 10 ತಿಂಗಳಲ್ಲಿ‌ ನೀವು ಎಷ್ಟು ಕಡೆ ಪ್ರವಾಸ ಮಾಡಿದ್ದೀರಾ? 20 ದಿನ ಅಧಿವೇಶನ, ಸಭೆ, ಮಂತ್ರಿಗಳ ಮನೆ ಊಟಕ್ಕೆ 4 ದಿನ ಕಳೆದಿರಿ. ಬಾಕಿ ದಿನ ಏನು ಮಾಡಿದಿರಿ ನೀವು? ಗ್ಯಾರಂಟಿ ಯೋಜನೆ ಉಸ್ತುವಾರಿಗೆ ಮಾಜಿ ಮಂತ್ರಿಗಳ ನೇತೃತ್ವದಲ್ಲಿ ಸಮಿತಿ ಮಾಡಿದ್ದೀರಿ. 95 ಜನರಿಗೆ ಕ್ಯಾಬಿನೆಟ್ ದರ್ಜೆ!! ಆಹಾ.. ಎಂತಹ ಆಡಳಿತ? ಎಂದು ಮಾಜಿ ಪ್ರಧಾನಿಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಇವತ್ತು ವಿಡಿಯೋ ಕಾನ್ಫರೆನ್ಸ್ ಮಾಡ್ತಿದ್ದೀರಾ. ನೀರಿನ ಬಗ್ಗೆ ಇವತ್ತು ಸಭೆ. ಜನ ನೀರು ಕುಡಿಯುತ್ತಿದ್ದಾರಾ ಅಂತ ಸಭೆ. ಗೌರವಾನ್ವಿತ ಸಿಎಂ, ಕಾಂಗ್ರೆಸ್ ಅಧ್ಯಕ್ಷರು ಸಭೆ ಮಾಡುತ್ತಿದ್ದಾರೆ. ನಾನು ಕೂಗಿದರೇ ಮಂಡ್ಯ, ಹಾಸನ ಅಲ್ಲ. ಚಿಕ್ಕಮಗಳೂರುವರೆಗೂ ಕೇಳಬೇಕು.. ಕೂಗಿ ಅಂದರು. ನಾಚಿಕೆ ಆಗೊಲ್ಲವಾ? ಎಂದು ದೇವೇಗೌಡರು ಕಿಡಿಕಾರಿದರು.

ಎರಡು ನಾಲಿಗೆಯ ಹೇಳಿಕೆಗೆ ಕಿಡಿ:

ವೃಷಭಾವತಿ ನೀರನ್ನು ನೆಲಮಂಗಲಕ್ಕೆ ಎತ್ತುತ್ತೇವೆ ಅಂತಾರೆ. ಮೂರು ತಿಂಗಳ ಹಿಂದೆ ಹೇಮಾವತಿ ನೀರು ನೆಲಮಂಗಲಕ್ಕೆ ತರುತ್ತೇನೆ ಅಂದರು. ಸಮಯಕ್ಕೆ ಸಂದರ್ಭಕ್ಕೆ ಅನುಸಾರವಾಗಿ ಹೇಳಿಕೆ ನೀಡುವ ನಿಮ್ಮನ್ನು ಜನ ನಂಬ್ತಾರೇನ್ರಿ? ಈ ನಾಲಿಗೆಯಲ್ಲಿ ಯಾವ ಯಾವ ಸಮಯಕ್ಕೆ ಏನೇನು ಹೇಳ್ತೀರಾ? ಎಂದು ಮಾಜಿ ಪ್ರಧಾನಿಗಳು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಶೀಘ್ರವೇ ಟ್ಯಾಂಕರ್ ನೀರಿಗೆ ದರ ನಿಗದಿ ಮಾಡುತ್ತೇವೆ ಅಂತಾರೆ. ನೀರಿನ‌ ಬಗ್ಗೆ ಸಚಿವರಿಗೆ ಕೇಳಿದರೆ ಕುಡಿಯುವ ನೀರು ಕೊಡುವುದು ದೊಡ್ಡ ಸಮಸ್ಯೆ ಅಂತಾರೆ. ಸಚಿವರು ಎಲ್ಲಾ ನೀರಿನ ಟ್ಯಾಂಕರ್ ಗಳು ರಿಜಿಸ್ಟರ್ ಮಾಡಿಕೊಳ್ಳಬೇಕು ಅಂತಾರೆ‌. ಇತ್ತ ನೋಡಿದರೆ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 15 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತಿದೆ. ಕಾವೇರಿ ನೀರಿಗೆ ಜನರು ಚಾತಕ ಪಕ್ಷಿಯಂತೆ ಕಾಯುದ್ದಾರೆ. ಪಾಪ ಈ ಜನ 5 ಗ್ಯಾರಂಟಿ ಸಿಕ್ಕಿದವು ಎಂದು ಸಂತೋಷವಾಗಿ ಇದ್ದಾರೆ! ಎಂದು ನೀರಿನ ಅಭಾವದ ಬಗ್ಗೆ ದೇವೇಗೌಡರು ಕಳವಳ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಯನ್ನು ಯಾರು ಮಂಜೂರು ಮಾಡಿದ್ದು? ಈ ಯೋಜನೆಗೆ ಅನುಮತಿ ಕೊಟ್ಟಿದ್ದು ಜಗದೀಶ್ ಶೆಟ್ಟರ್. ಇದರಲ್ಲಿ ನಿಮ್ಮ ಪಾತ್ರ ಏನು? ಕುಮಾರಸ್ವಾಮಿ ವಿರೋಧ ಮಾಡ್ತಾರೆ ಅಂತೀರಾ. ಅವರ ಬಗ್ಗೆ ಮಾತಾಡೋಕೆ ನಿಮಗೆ ಏನಿದೆ ನೈತಿಕತೆ? ನಿಮ್ಮ ಪಾತ್ರ ಎತ್ತಿನಹೊಳೆ ಯೋಜನೆಯಲ್ಲಿ ಏನು? ಎಂದು ದೇವೇಗೌಡರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ಯೋಜನೆ ಮಾಡಿದ್ದು. ಆದರೆ, ಅರಸೀಕೆರೆಗೆ ನೀರು ಕೊಡಲು ನಮಗೆ ವಿರೋಧ‌ ಇಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹೇಮಾವತಿಯಿಂದ ಅರಸಿಕೆರೆಗೆ ನೀರು ಕೊಟ್ಟಿದ್ದರು. ಆ ವಿಷಯವನ್ನು ಈಗ ಹೇಳಲಿ ನೋಡೋಣ. ಹೇಳಲಿ ಯೋಗ್ಯತೆ ಇದ್ದರೆ ಎಂದು ಹಾಸನದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಭಾಷಣದ ಮಾಡಿದ ನಾಯಕರಿಗೆ ದೇವೇಗೌಡರು ತಿರುಗೇಟು ಕೊಟ್ಟರು.

ಈ ಸಂದರ್ಭದಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ ಅವರು ಹಾಜರಿದ್ದರು.

Related Articles

Back to top button