*ಕೂಲಿಂಗ್ ಗ್ಲಾಸು, ಸಫಾರಿ ಸೂಟು, ವನ್ಯಜೀವಿ ನೋಡಿದ್ರೆ ಬಿಜೆಪಿಗೆ ಮತವೊತ್ತಿ ಬಿಡ್ತಾರಾ? ಪ್ರಧಾನಿ ಪ್ರವಾಸಕ್ಕೆ HDK ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಫಾರಿ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಂಗ್ಯವಾಡಿದ್ದಾರೆ. ಪ್ರವಾಹ ಬಂದಾಗ ಬರಲಿಲ್ಲ, ಕೋವಿಡ್ ಬಂದಾಗ ಬರಲಿಲ್ಲ, ಈಗ ಸಫಾರಿ ಸೂಟ್ ಹಾಕೊಂಡು ಸಫಾರಿಗೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮರಸ್ವಾಮಿ, ಜನರು ಸಂಕಷ್ಟದಲ್ಲಿದ್ದಾಗ ಬಂದು ಸಮಸ್ಯೆ ಆಲಿಸಿಲ್ಲ, ಈಗ ಚುನವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುತಿದ್ದಾರೆ. ಈಗ ಸಫಾರಿ ಸೂಟ್ ಹಾಕಿಕೊಂಡು ಬಂದಿದ್ದಾರೆ. ಇದರಿಂದ ಕನ್ನಡಿಗರಿಗೆ ಏನು ಪ್ರಯೋಜನ, ಬಡ ಜನತೆಗೆ ಯಾವ ಅನುಕೂಲ? ಪ್ರಧಾನಿ ಮೋದಿ ರಾಜ್ಯ ಪ್ರವಾಸದ ಬಗ್ಗೆ ಜನರು ತೀರ್ಮಾನ ಮಾಡಬೇಕು ಎಂದರು.
ವನ್ಯಜೀವಿಗಳ ಸಂರಕ್ಷಣೆ ಮಾಡಬೇಕು ಎಂಬುದು ನಿಜ, ಸಂತೋಷದ ವಿಚಾರ ಆದರೆ ವನ್ಯಜೀವಿಗಳ ರಕ್ಷಣೆ ಜೊತೆಗೆ ಮಾನವ ರಕ್ಷಣೆ ಕೂಡ ಆಗಬೇಕಲ್ಲವೇ? ಕಳೆದ ಐದಾರು ತಿಂಗಳಿನಲ್ಲಿ ವನ್ಯಜೀವಿಗಳ ದಾಳಿ ಅದೆಷ್ಟು ಜೀವಗಳು ಬಲಿಯಾದವು. ಅವರ ಸಂಕಷ್ಟ ಕೇಳುವವರಾರು? ಆ ಸಂತ್ರಸ್ತ ಕುಟುಂಬವನ್ನು ಒಮ್ಮೆಯಾದರೂ ಪ್ರಧಾನಿ ಮೋದಿ ಭೇಟಿಯಾದರಾ? ಅವರಿಗೆ ಪರಿಹಾರ ನೀಡುವ ಕಾರ್ಯಕ್ರಮಗಳನ್ನು ಮಾಡಬೇಕಾಗಿತ್ತು. ಅದನ್ನು ಬಿಟ್ಟು ಕೂಲಿಂಗ್ ಗ್ಲಾಸ್, ಹ್ಯಾಟ್, ಸಫಾರಿ ಸೂಟ್ ಹಾಕಿಕೊಂಡು ಸಫಾರಿ ಮಾಡುತ್ತಿದ್ದಾರೆ. ವನ್ಯಜೀವಿಗಳನ್ನು ನೋಡಿದ ತಕ್ಷಣ ಬಿಜೆಪಿಗೆ ಜನ ಮತ ಒತ್ತಿಬಿಡ್ತಾರಾ? ಎಂದು ವಾಗ್ದಾಳಿ ನಡೆಸಿದ್ದಾರೆ.