Kannada NewsLatest

ಬೆಳಗಾವಿ ನಮ್ಮದು ಅಂದಮೇಲೆ ಕನ್ನಡ ಧ್ವಜ ಹಾರಿಸುವುದು ನಮ್ಮ ಹಕ್ಕು; ಶಿವಸೇನೆಗೆ ಹೆಚ್.ಡಿ.ಕೆ ತಿರುಗೇಟು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಡಿ ವಿವಾದದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದಿರುವ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಗಡಿ ವಿವಾದದಲ್ಲಿ ಯಾರ ಮಧ್ಯಸ್ಥಿತಿಕೆಯೂ ಬೇಡ. ಪ್ರಧಾನಿ ಮಧ್ಯಸ್ಥಿಕೆ ಮಾಡಿದರೆ ಮಹಾರಾಷ್ಟ್ರ ಬಿಜೆಪಿಯು ಅವರ ಮೇಲೆ ಪ್ರಭಾವ ಬೀರದೇ ಇರದೇ? ಮಧ್ಯಸ್ಥಿಕೆಯಲ್ಲಿ ಮೋದಿಯವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ವಹಿಸಿದರೆ ಬಿಜೆಪಿಗರು ಒಪ್ಪುವರೇ? ಎಂದು ಪ್ರಶ್ನಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಗಡಿ ವಿಚಾರದಲ್ಲಿ ಮಹಾಜನ ಆಯೋಗದ ವರದಿಯೇ ಅಂತಿಮ. ಮಹಾರಾಷ್ಟ್ರದ ಹಠದಿಂದಲೇ ರಚಿಸಲಾದ ಮಹಾಜನ ಆಯೋಗವು ಬೆಳಗಾವಿ ಕರ್ನಾಟಕದ್ದು ಎಂದು ಸ್ಪಷ್ಟವಾಗಿ ಹೇಳಿದೆ. ಈ ವಿಚಾರವಾಗಿ‌ ಮಹಾರಾಷ್ಟ್ರ ಮತ್ತೊಮ್ಮೆ ನಡೆಸುತ್ತಿರುವ ಕಾನೂನು ಹೋರಾಟ ವ್ಯರ್ಥವಾಗಲಿದೆ. ಅಲ್ಲಿ ವರೆಗೆ ವಿಸ್ತರಾಣಾವಾದದ ಮಾತುಗಳನ್ನು ನೆರೆಯ ರಾಜ್ಯ ನಿಲ್ಲಿಸುವುದು ಒಳಿತು ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಅಕ್ರಮವಾಗಿ ವಿಧಾನಸೌಧ ನಿರ್ಮಿಸಿ 2ನೇ ರಾಜಧಾನಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ವಾದಿಸಿದೆ. ಬೆಳಗಾವಿ ವಿಚಾರದಲ್ಲಿನ ಮಹಾರಾಷ್ಟ್ರ ಖ್ಯಾತೆ ಗಮನಿಸಿಯೇ ನನ್ನ ಅವಧಿಯಲ್ಲಿ ಅದನ್ನು ನಿರ್ಮಿಸಲಾಯಿತು, ಕಲಾಪವನ್ನೂ ನಡೆಸಲಾಯಿತು. ಸುವರ್ಣ ವಿಧಾನಸೌಧವು ಮಹಾರಾಷ್ಟ್ರ ವಿಸ್ತರಣಾವಾದದ ವಿರುದ್ಧದ ಕನ್ನಡಿಗರ ಸಾರ್ವಭೌಮತ್ವದ ಸಂಕೇತ.

ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರು ಕನ್ನಡ ಧ್ವಜ ಸ್ಥಾಪಿಸಿರುವುದನ್ನು ಶಿವಸೇನೆ ಅಪರಾಧವೆಂಬಂತೆ ನೋಡುತ್ತಿದೆ. ಅಲ್ಲಿಂದಾಚೆಗೆ ಮಹಾರಾಷ್ಟ್ರ ಪ್ರೇರಿತ ಭಾಷೆ, ಗಡಿ ವಿವಾದ ಮುನ್ನೆಲೆಗೆ ಬಂದಿದೆ. ಅಸಲಿಗೆ ಬೆಳಗಾವಿ ನಮ್ಮದು. ಇಲ್ಲಿ ಕನ್ನಡ ಧ್ವಜ ಹಾರಿಸುವುದು ನಮ್ಮ ಹಕ್ಕು. ಇದನ್ನು ಪ್ರಶ್ನಿಸಲು ಮಹಾರಾಷ್ಟ್ರಕ್ಕೆ ಯಾವ ಹಕ್ಕೂ ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಬೆಳಗಾವಿಯಲ್ಲಿ ಪರಿಸ್ಥಿತಿ ಕೈ ಮೀರಿದರೆ ಶಿವಸೇನೆ, ಮಹಾ ಸರ್ಕಾರ ಕಾರಣವಲ್ಲ; ರಾವತ್ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button