Latest

ಎಲ್ಲ ಸಿ.ಡಿ.ಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ ಎಂದ ಹೆಚ್ ಡಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಂಗಳೂರು ಗಲಭೆ ಪ್ರಕರಣ ವಿಚಾರವಾಗಿ ತಾವು ಬಿಡುಗಡೆ ಮಾಡಿರುವ ಸಿ.ಡಿ.ಯ ಬಗ್ಗೆ ಬಿಜೆಪಿ ನಾಯಕರು ನೀಡಿದ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಎಲ್ಲ ಸಿ.ಡಿ.ಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ. ಸಿ.ಡಿ.ಗಳು ಬಿಜೆಪಿಯ ಸ್ವತ್ತು. ಸಿ.ಡಿ ಬಗ್ಗೆ ಮಾತಾಡುವಾಗ ಬಿಜೆಪಿ ನಾಯಕರು ಎಚ್ಚರದಿಂದ ಇರಲಿ ಎಂದಿದ್ದಾರೆ.

ಸರಣಿ ಟ್ವೀಟ್ ಮಾಡಿ ಕಿಡಿಕಾರಿರುವ ಕುಮಾರಸ್ವಾಮಿ, ಮಂಗಳುರು ಗಲಭೆ ಬಗ್ಗೆ ಸತ್ಯಾಸತ್ಯತೆ ಕುರಿತು ತಜ್ಞರಿಂದ ವರದಿ ತರಿಸಿ ಕೊಳ್ಳುವ ಧೈರ್ಯ ರಾಜ್ಯ ಸರ್ಕಾರಕ್ಕೆ ಇದೆಯೇ? ಅದಕ್ಕೂ ಮಿಗಿಲಾಗಿ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ನಾನು ಬಿಡುಗಡೆ ಮಾಡಿರುವ ಸಿ.ಡಿ ನೀವು ಸೃಷ್ಟಿಸಿಕೊಂಡಂತ ‘ಕಟ್ ಆ್ಯಂಡ್ ಪೇಸ್ಟ್’ ಬಿಜೆಪಿ ಸರ್ಕಾರ ಎಂದುಕೊಂಡಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ನಾನು ಬಿಡುಗಡೆ ಮಾಡಿದ ಮಂಗಳೂರು ಹಿಂಸಾಚಾರದ ವಿಡಿಯೋಗಳಿಗೆ ಇದು ಕಟ್ ಆಂಡ್ ಪೇಸ್ಟ್ ವೀಡಿಯೋ ಎಂದಿದ್ದಾರೆ. ಇಂತಹ ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಮತ್ತೇನು ಬಿಜೆಪಿ ನಾಯಕರಿಂದ ನಿರೀಕ್ಷಿಸಲು ಸಾಧ್ಯ? ಗೃಹ ಸಚಿವ ಎಸ್‌ಆರ್‌ ಬೊಮ್ಮಾಯಿ ಅವರು ‘ಪೊಲೀಸರು ಗಲಭೆ ಮಾಡುವುದಿಲ್ಲ, ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಕಾಲದಲ್ಲೂ ಅದೇ ಪೋಲೀಸರೇ ಇದ್ದರು’ ಎಂದಿದ್ದಾರೆ. ಬೊಮ್ಮಾಯಿ ಅವರೇ ಅದು ನನ್ನ ಕಾಲ. ಶಾಂತಿ-ಸುವ್ಯವಸ್ಥೆಗಷ್ಟೇ ಪೊಲೀಸರ ಸೇವೆ ಪಡೆಯುತ್ತಿದ್ದೆವು. ಇದು ನಿಮ್ಮ ಕಾಲ. ಗಲಭೆ, ಗುಂಡೇಟಿಗೆ ನೀವು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದೀರಿ. ನನ್ನ ಕಾಲದಲ್ಲೂ ಇದೇ ಪೊಲೀಸರಿದ್ದರು. ಹೌದು. ಆದರೆ ನನ್ನ ಕಾಲದಲ್ಲಿ ಗಲಭೆಗಳು ಯಾಕೆ ಆಗಲಿಲ್ಲ? ಗೋಲಿಬಾರ್‌ಗಳು ಯಾಕೆ ಆಗಲಿಲ್ಲ? ಇದಕ್ಕೆ ನೀವು ಉತ್ತರಿಸುತ್ತೀರಾ ಎಂದು ಪ್ರೆಶ್ನಿಸಿದ್ದಾರೆ.

ಉಪ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಸ್ಥಿಮಿತ ಕಳೆದುಕೊಂಡು ಕುಮಾರಸ್ವಾಮಿ ಮಂಗಳೂರು ಗಲಭೆ ವಿಡಿಯೊ ಬಿಡುಗಡೆ ಮಾಡಿದ್ದಾರೆ ಎಂದು ಡಿಸಿಎಂ ಲಕ್ಮಣ ಸವದಿ ಆರೋಪಿಸಿದ್ದಾರೆ. ಸರಿ. ಹಾಗಾದರೆ ಸವದಿ ಅದ್ಯಾವ ಸ್ಥಿಮಿತ ಕಳೆದುಕೊಂಡು ಸದನದಲ್ಲಿ ನೀಲಿ ಚಿತ್ರ ನೋಡಿದರು? ಈ ಬಾರಿ ಅವರು ಯಾವ ಚುನಾವಣೆ ಗೆದ್ದಿದ್ದಾರೆ? ಸ್ಥಿಮಿತ ಉಳಿದಿದೆಯೇ? ಎಂದು ಕಿಡಿಕಾರಿದ್ದಾರೆ.

ಮಂಗಳೂರು ಶಾಂತಿಯಿಂದಿದೆ, ಮರಳಿ ಗಲಭೆ ಎಬ್ಬಿಸಿ ಅಲ್ಲಿ ಅಸ್ತಿತ್ವವೇ ಇಲ್ಲದ ತಮ್ಮ ಪಕ್ಷಕ್ಕೆ ನೆಲೆ ಕಲ್ಪಿಸಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ ಎಂದು ಸೋದರಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಂಗಳೂರಿನ ಭಿನ್ನ ಧ್ವನಿಗಳ ಕೊರಳು ಬಿಗಿ ಹಿಡಿದು, ಉಸಿರುಗಟ್ಟಿಸಿ, ಸದ್ದು ಬಾರದಂತೆ ಮಾಡಿರುವುದು ನಿಮ್ಮ ಪ್ರಕಾರ ‘ಶಾಂತಿ’ಯೇ? ಮೆಕ್ಕಾಕ್ಕೆ ಹೋದಾಗ ಮುಸಲ್ಮಾನರು ಸೈತಾನನಿಗೆ ಕಲ್ಲು ಹೊಡೆಯುತ್ತಾರೆ. ಪೊಲೀಸರ ಮೇಲೆ ಕಲ್ಲು ತೂರಲು ಅವರೇನು ಸೈತಾನರೇ ಎಂದು ಸೋದರಿ ಶೋಭಾ ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಪೊಲೀಸರು ಕಲ್ಲು ತೂರಾಟ ಮಾಡಿದರಲ್ಲ? ಹೋರಾಟಗಾರರೇನು ಸೈತಾನರೇ? ಎಂದು ಪ್ರೆಶ್ನಿಸಿದ್ದಾರೆ.

ಗಲಭೆಯ ಸಿ.ಡಿ. ಬಿಡುಗಡೆ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ. ಸಿ.ಡಿ. ಹಲವರಿಗೆ ರಾಜಕೀಯ ಅಸ್ತಿತ್ವದ ಸ್ವತ್ತು ಎಂದಿದ್ದಾರೆ. ಬಿಜೆಪಿಯಲ್ಲಿ ಸದ್ದು ಮಾಡಿದ ಸಿ.ಡಿ.ಗಳ ಸಂಖ್ಯೆ ಒಂದೆರಡೇ? ಎಲ್ಲ ಸಿ.ಡಿ.ಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ. ಸಿಡಿ ಬಗ್ಗೆ ಮಾತಾಡುವಾಗ ಸದಾನಂದಗೌಡ ಎಚ್ಚರವಾಗಿರಲಿ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button