ಪ್ರಗತಿವಾಹಿನಿ ಸುದ್ದಿ; ಮೈಸೂರು: ಮುಂದಿನ ಸಂಭವನೀಯ ಅಭ್ಯರ್ಥಿಗಳು, ಶಾಸಕರು, ಮಾಜಿ ಶಾಸಕರ ಜೊತೆ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ತರುವಂತೆ ತಾಯಿ ಚಾಮುಂಡೇಶ್ವರಿಯನ್ನು ಬೇಡಿದ್ದೇನೆ. ತಾಯಿ ಅನುಗ್ರಹದಿಂದ ಹಾಗೂ ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತವಾದ ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತರಿಗೆ ಸ್ವಾವಲಂಬಿ ಯೋಜನೆ, ಪ್ರತಿಯೊಬ್ಬರಿಗೂ ಸೂರು, ನೀರಾವರಿ ಕಾರ್ಯಕ್ರಮದ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಇದನ್ನೆಲ್ಲಾ ಅನುಷ್ಠಾನಕ್ಕೆ ತರಲು ಬರುವ ಎಲ್ಲಾ ಸವಾಲನ್ನು ಸ್ವೀಕರಿಸಿದ್ದೇನೆ. ಜನರು ಉತ್ತಮ ಬದುಕು ಕಟ್ಟಿಕೊಡುತ್ತೇನೆ. ಅಂತಹ ಸರ್ಕಾರ ಅಧಿಕಾರಕ್ಕೆ ತರುತ್ತೇವೆ. ಇದಕ್ಕೆ ರಾಜ್ಯದ ಜನರು ಆಶೀರ್ವಾದ ಮಾಡುವಂತೆ ಕೋರುತ್ತೇನೆ. ಒಂದು ವೇಳೆ ಈ ಯೋಜನೆ ಅನುಷ್ಠಾನ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದರು.
ಕಳೆದ ಬಾರಿ ಸಿಎಂ ಆಗಿದ್ದಾಗ ಸ್ಪಷ್ಟ ಬಹುಮತ ಬರದಿದ್ದರೂ ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆದಿದ್ದೇನೆ. ಸಂಪೂರ್ಣ ಒಂದು ಸರ್ಕಾರ ಹೇಗೆ ನಡೆಸಬಹುದು ಅಂತ ತೋರಿಸುವ ಸವಾಲು ಸ್ವೀಕರಿಸಿದ್ದೇನೆ. ಹೊಂದಾಣಿಕೆ ಅಥವಾ ಮೈತ್ರಿ ಸರ್ಕಾರ ಮಾಡಿದರೆ ಜನಪರ ಯೋಜನೆ ಅನುಷ್ಠಾನ ಮಾಡಲು ಆಗಲ್ಲ. ಆ ಕಾರಣ ಪಕ್ಷ ವಿಸರ್ಜನೆ ಬಗ್ಗೆ ಹೇಳಿದೆ ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಶಾಸಕರ 126 ಸೀಟ್ ಗೆಲ್ಲಿಸಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ತರಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಆದರೆ 126 ರಲ್ಲಿ ನಿಖಿಲ್ ಅವರು ಇರಬಹುದು ಎಂದು ನಿಖಿಲ್ ಸ್ಪರ್ಧೆ ಬಗ್ಗೆ ಪರೋಕ್ಷ ಸುಳಿವು ನೀಡಿದರು.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಕನ್ನಡಿಗರಾದ ನಮಗೆ ಸಂತೋಷದ ಸಂಗತಿ, ಅಸೂಯೆ ಪಡಬಾರದು. ಆದರೆ ಈ ಮೂಲಕ ಮತ್ತೊಂದು ಪವರ್ ಸೆಂಟರ್ ಆಗಲಿದೆ, ಈಗ ಖರ್ಗೆ ಅವರಿಗೆ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಬಿಟ್ಟು ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬ ಕುತೂಹಲವಿದೆ ಎಂದರು.
ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು PDOಗಳು
https://pragati.taskdun.com/latest/two-pdolokayuktaarrestedbagalakote/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ