Karnataka NewsLatestPolitics

*ಮಹಿಳೆಯರಿಗೆ ಅಪಮಾನ ಆಗುವ ರೀತಿಯಲ್ಲಿ ಮಾತನಾಡಿಲ್ಲ; ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ಗ್ಯಾರಂಟಿಗಳ ಬಗ್ಗೆ ಹೇಳಿದ್ದೇನೆಯೇ ಹೊರತು ಮಹಿಳೆಯರಿಗೆ ಅಪಮಾನ ಮಾಡುವ ರೀತಿಯಲ್ಲಿ ನಾನು ಮಾತನಾಡಿಲ್ಲ. ಅನಗತ್ಯವಾಗಿ ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಸೋಲುವ ಹತಾಶೆ ಕಾಂಗ್ರೆಸ್ ಅನ್ನು ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.

ತಮ್ಮ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಅಪಪ್ರಚಾರಕ್ಕೆ ತಿರುಗೇಟು ಕೊಟ್ಟ ಮಾಜಿ ಮುಖ್ಯಮಂತ್ರಿಗಳು; ಕಾಂಗ್ರೆಸ್ ನಾಯಕರಿಗೆ ಬರ, ನೀರಿನ ಸಮಸ್ಯೆಗಿಂತ ರಾಜಕೀಯವೇ ಹೆಚ್ಚಾಗಿದೆ ಎಂದರು.

ಸಿದ್ದರಾಮಯ್ಯ ಅವರ ಬಳಿ ಬಗ್ಗೆ ಹೇಳುವುದು ಏನಿದೆ? ಇದನ್ನು ಬಿಟ್ಟು ಬೇರೇನು ಹೇಳಬೇಕಿಲ್ಲ. ನಾನು ಹೇಳಿದ್ದೇ ಬೇರೆ, ಇವರು ತಿರುಚಿ ಹೇಳಿದ್ದೇ ಬೇರೆ. ಗ್ಯಾರಂಟಿಗಳ ಹೆಸರಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಷ್ಟೇ ಹೇಳಿದ್ದೇನೆ. ನಾನು ಮಹಿಳೆಯರನ್ನು ಅವಮಾನ ಮಾಡಿದ್ದೀನಾ? ಖಂಡಿತಾ ಇಲ್ಲ. ಮುಗ್ದ ಜನರನ್ನು, ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ. ನೀವು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದೇನೆ ಎಂದರು.

ನಾನಾಗಲಿ, ನನ್ನ ಕುಟುಂಬವಾಗಲಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಡೆದುಕೊಳ್ಳುವುದೂ ಇಲ್ಲ. ಕಷ್ಟ ಅಂತ ಬಂದಾಗ ನಾನು ನೆರವಾಗಿದ್ದೇನೆ. ಅಧಿಕಾರ ಸಿಕ್ಕಿದಾಗ ಮಹಿಳೆಯರಿಗಾಗಿ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಮಹಿಳೆಯರ ಕೂಗಿಗೆ ಸ್ಪಂದಿಸಿ ಸಾರಾಯಿ, ಲಾಟರಿ ನಿಷೇಧಿಸಿದ್ದೇನೆ. ನಾನು ಮಹಿಳೆಯರಿಗೆ ನೀಡಿದ ಗೌರವ ಇದು. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವ ವ್ಯಕ್ತಿ ಅಲ್ಲ. ಅಸಡ್ಡೆಯತೆಯಿಂದ ಕಂಡಿಲ್ಲ. ಮಹಿಳೆಯರಿಗೆ ಅವಮಾನ ಆಗುವ ರೀತಿ ಎಲ್ಲೂ ಹೇಳಿಲ್ಲ. ನಾನು ಏನು ಹೇಳಿದ್ದೇನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಈ ರೀತಿ ಹೇಳುತ್ತಿದ್ದಾರೆ. ರಾಜಕೀಯದಲ್ಲಿ ನನಗೆ ಶಕ್ತಿ ಇದೆ ಅಂದರೆ ಅದು ಮಹಿಳೆಯರಿಂದಲೇ. ಕಾಂಗ್ರೆಸ್ ನಾಯಕರು ನನ್ನ ಮೇಲೆ ತಪ್ಪು ಹೊರೆಸುವ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಸಂಕಲ್ಪ ಸಾಕಾರ ಆಗುತ್ತದೆ

ಬಿಜೆಪಿ ಪ್ರಣಾಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು; ಮೋದಿ ಅವರ ಗ್ಯಾರಂಟಿ ಮತ್ತು ಸಂಕಲ್ಪ ಹೆಸರಲ್ಲಿ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಅವು ಸಾಕಾರ ಆಗಿಯೇ ಆಗುತ್ತವೆ. ೨೦೪೭ನೇ ಗುರಿ ಇಟ್ಟುಕೊಂಡು ಚಾಲನೆ ಕೊಡಲಾಗಿದೆ. ಮಧ್ಯಮ, ಬಡ ವರ್ಗದ ಹಿತ ಕಾಯುವುದು ಮತ್ತು ದೇಶದ ರಕ್ಷಣೆ, ಸಾಮಾನ್ಯ ನಾಗರೀಕ ಸಂಹಿತೆ ಜಾರಿಗೆ ತರುವುದಾಗಿ ಭರವಸೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಾರಿಗೆ ತಂದು ಬಡತನ ಹೋಗಿಸುತ್ತೇವೆ ಎಂದು ಮೋದಿ ಅವರು ಹೇಳಿದ್ದಾರೆ. ಕಳೆದ ೧೦ ವರ್ಷದಲ್ಲಿ ನಡೆದುಕೊಂಡಂತೆ ಈ ಮುಂದೆಯೇ ನಡೆದುಕೊಳ್ಳುತ್ತೇವೆ ಎಂದಿದ್ದಾರೆ ಅವರು. ಇದು ಸ್ವಾಗತಾರ್ಹ. ಮೋದಿ ಅವರ ಜತೆ ನಾವೂ ಒಂದಾಗಿ ಕೆಲಸ ಮಾಡುತ್ತೇವೆ ಎಂದರು.

Related Articles

Back to top button