Latest

ಇಡೀ ಪಕ್ಷವನ್ನೇ ವಿಲೀನ ಮಾಡಿಸಿಕೊಳ್ಳುವುದು ಪ್ರಜಾಪ್ರಭುತ್ವ ನಡೆಯೇ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ “ಪ್ರಜಾಪ್ರಭುತ್ವ ಉಳಿಸಿ” ಎಂದು ಹೋರಾಟ ನಡೆಸುತ್ತಿದೆ. ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ? ಸರ್ಕಾರ ರಚಿಸಲು ಬೆಂಬಲ ನೀಡಿದ BSP ಪಕ್ಷದ ಎಲ್ಲಾ ಶಾಸಕರನ್ನೂ ಕಾಂಗ್ರೆಸ್ ಸೆಳೆದಿಲ್ಲವೇ? ಇದು ಖರೀದಿಯಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ನಾಯಕರ ಹೋರಾಟದ ವಿರುದ್ಧ ಟ್ವೀಟ್‌ ಮೂಲಕ ಕಿಡಿಕಾರಿರುವ ಕುಮಾರಸ್ವಾಮಿ, “ಸರ್ಕಾರ ರಚಿಸಲು ಬೆಂಬಲ ಕೊಟ್ಟವರನ್ನೇ ಕುತಂತ್ರದಿಂದ ಸೆಳೆದುಕೊಳ್ಳುವುದು, ಇಡೀ ಪಕ್ಷವನ್ನೇ ವಿಲೀನ ಮಾಡಿಸಿಕೊಳ್ಳುವುದು ಪ್ರಜಾಪ್ರಭುತ್ವ ನಡೆಯೇ? ಸಮಾನ ಮನಸ್ಕ ಪಕ್ಷಗಳನ್ನು ಒಡೆದು ಶಾಸಕರನ್ನು ಸೆಳೆಯುತ್ತಿದ್ದರೆ ನಿಮಗೆ ಯಾರು ಬೆಂಬಲ ಕೊಟ್ಟಾರು. ಈ ತಪ್ಪುಗಳು ನಿಮಗೆ ಕಾಣುತ್ತಿಲ್ಲವೇ? ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ಈ ಹಿಂದೆ ಆಪರೇಷನ್ ಕಮಲದ ಮೂಲಕ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಿದ್ದ ಬಿಜೆಪಿ ಇದೀಗ ರಾಜಸ್ಥಾನದಲ್ಲೂ ಅದೇ ಕೆಲಸಕ್ಕೆ ಮುಂದಾಗಿದೆ. ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದೇ ಕಾರಣಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರು ನಿನ್ನೆಯಿಂದ ದೇಶದಾದ್ಯಂತ “ಪ್ರಜಾಪ್ರಭುತ್ವ ಉಳಿಸಿ” ಎಂದು ಹೋರಾಟಕ್ಕೆ ಮುಂದಾಗಿದೆ.

ಶಾಸಕರ ಖರೀದಿ ವಿಚಾರವಾಗಿ ದೊಡ್ಡ ಗಂಟಲು ಮಾಡುತ್ತಿರುವ ಕಾಂಗ್ರೆಸ್ ಹಿಂದೆ ಜೆಡಿಎಸ್ ಅನ್ನು ಒಡೆದಿಲ್ಲವೇ? ಒಡೆಯಲು ಪ್ರಯತ್ನಗಳನ್ನು ಮಾಡಲಿಲ್ಲವೇ? ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಮಂದಿಯನ್ನು ಕೇವಲ ರಾಜ್ಯಸಭೆ ಚುನಾವಣೆಗಾಗಿ ಖರೀದಿಸಲಿಲ್ಲವೇ? ಇದು ಪ್ರಜಾಸತ್ತಾತ್ಮಕವೇ? ಖರೀದಿ ವಿಚಾರದಲ್ಲಿ ಎರಡೂ ಪಕ್ಷಗಳೂ ‘ಅಪರಾಧಿ’ಗಳೇ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button