ಪ್ರಗತಿವಾಹಿನಿ ಸುದ್ದಿ; ರಾಮನಗರ: ಹಲಾಲ್ ವಿವಾದ ಹಾಗೂ ಜಟ್ಕಾ ಕಟ್ ಅಭಿಯಾನ ರಾಜಕೀಯ ನಾಯಕರ ವಾಕ್ಸಮರಕ್ಕೆ ಕಾರಣವಾಗಿದ್ದು, ಮಾಜಿ ಸುಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೊಮ್ಮಾಯಿಗೆ ಗಂಡಸ್ತನ ಇದ್ದರೆ ಆಗುತ್ತಿರುವ ಬೆಳವಣಿಗೆಯನ್ನು ತಡೆಯಲಿ ಎಂದು ಹೇಳಿದರು.
ರಾಮನಗರದ ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಹಲಾಲ್ ವಿವಾದ ರಾಜ್ಯದಲ್ಲಿ ಕೆಲದಿನಗಳಿಂದ ನಡೆಯುತ್ತಿದೆ. ಹಲಾಲ್ ಬಹಿಷ್ಕರಿಸಿ ಜಟ್ಕಾ ಕಟ್ ಅಭಿಯಾನ ಆರಂಭಿಸಿ ಭಜರಂಗ ದಳ, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹ್ಯಾಂಡ್ ಬಿಲ್ ಹಂಚಿ ಸಮಾಜಘಾತುಕ ಶಕ್ತಿಗಳು ಓಡಾಡುತ್ತಿದ್ದರು ಸಿಎಂ ಬಸವರಾಜ್ ಬೊಮಮಯಿ ಈ ಬಗ್ಗೆ ಮೌನವಹಿಸಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಭಜರಂಗದಳ ಕಾರ್ಯಕರ್ತರು ಸಮಾಜಘಾತುಕರು. ಸಮಾಜ ಒಡೆದು ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಹಲಾಲ್ ನಡೆಯುತ್ತಿದೆ. ಇಷ್ಟು ವರ್ಷ ಇಲ್ಲದ ವಿವಾದ ಈಗ ಯಾಕೆ ಆರಂಭಿಸಿದ್ದೀರಿ? ಇಷ್ಟು ವರ್ಷ ಅದೇ ಸಮಾಜದವರು ಕೊಟ್ಟ ಹಲಾಲ್ ಸ್ವೀಕರಿಸಿ ಚನ್ನಾಗಿಯೇ ಇದ್ದವರಿ ಈಗ ಅಪಚಾರ, ನಮ್ಮ ದೇವರಿಗೆ ಆಗಲ್ಲ ಎಂದು ಹೇಳುತ್ತಿದ್ದ ದೇವರು ಬಂದು ಈಗ ಹೇಳಿದನಾ ಅಪಚಾರ ಎಂದು? ದ್ರಾಕ್ಷಿ ಬೆಳೆ ಖರೀದಿಸಲು, ರೇಷ್ಮೆ, ಮಾವು ಖರೀದಿಸಲು ಅವರೇ ಬೇಕು. ಇಂದು ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್, ಭಜರಂಗದಳದವರು ಬಂದು ರೈತರ ಬೆಳೆ ಖರೀದಿಗೆ ಮುಂದಾಗಲ್ಲ, ಬಂದು ಸಹಾಯವನ್ನೂ ಮಾಡಲ್ಲ ಎಂದು ಕಿಡಿಕಾರಿದರು.
ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ಸಾವಿರಾರು ಜನರು ಬೀದಿಯಲ್ಲಿ ಸಾವನ್ನಪ್ಪಿದರು. ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಆಗ ಭಜರಂಗ ದಳದವರು, ವಿಶ್ವ ಹಿಂದೂ ಪರಿಷತ್ ನವರು ಎಲ್ಲಿಗೆ ಹೋಗಿದ್ದರು? ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಸಿಎಂಗೆ ಗಂಡಸ್ತನ ಇದ್ದರೆ ಏನೂ ಗೊತ್ತಿಲ್ಲದಂತೆ ಮೌನವಾಗಿರುವುದನ್ನು ಬಿಟ್ಟು ಮಾತನಾಡಲಿ.
ಹಲಾಲ್, ಜಟ್ಕಾ ಕಟ್ ಎಂದು ರಾಜ್ಯದಲ್ಲಿ ದ್ವೇಷದ ಭಾವನೆ ಬಿತ್ತುವ ಕೆಲಸ ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಮಾತನಾಡಲು ತಾಕತ್ತಿಲ್ಲ. ವೋಟ್ ಬ್ಯಾಂಕ್ ಗಾಗಿ ಅವರು ಸುಮ್ಮನಿರಬಹುದು, ನಮಗೆ ಸಮಾಜದ ಶಾಂತಿ ಮುಖ್ಯ. ಇದನ್ನೆಲ್ಲ ಸಹಿಸಿಕೊಂಡಿರಲು ಸಾಧ್ಯವಿಲ್ಲ. ಕುವೆಂಪು ಚಿಂತನೆಯಂತೆ ಸರ್ವಜನಾಂಗದ ಶಾಂತಿಯ ತೋಟವಾಗಿರುವ ನಮ್ಮ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿರುವುದು ಯಾಕೆ? ಇದನ್ನೆಲ್ಲ ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ. ಇಲ್ಲಿ ನಿಮ್ಮ ಆಟ ನಡೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಗಂಡಸ್ತನ ಗೊತ್ತು ಎಂದು ಬಿಜೆಪಿ
ಗಂಡಸ್ತನ ಬಳಕೆಗೆ ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಸಚಿವ ಕೆ.ಎಸ್.ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕುಮಾರಸ್ವಾಮಿ ಅವರ ಗಂಡಸ್ತನ ಗೊತ್ತಿದೆ. ಅದನ್ನು ಎಷ್ಟು ಕಡೆ ಬಳಸಬೇಕೆನ್ನುವುದೂ ಕುಮಾರಸ್ವಾಮಿಗೆ ಗೊತ್ತಿದೆ ಎಂದಿದ್ದಾರೆ. ಅವರ ಹಾಗೆ ಎಲ್ಲೆಂದರಲ್ಲಿ ಗಂಡಸ್ತನ ಬಳಸುವುದು ನಮಗೆ ಗೊತ್ತಿಲ್ಲ ಎಂದೂ ತಿರುಗೇಟು ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯತ್ವಕ್ಕೆ ಸಿ.ಎಂ.ಇಬ್ರಾಹಿಂ ರಾಜೀನಾಮೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ