Kannada NewsKarnataka NewsLatestPolitics

*ನಾಳೆ ಅಥವಾ ನಾಡಿದ್ದು ದಾಖಲೆ ಬಹಿರಂಗ* *HDK ಬಾಂಬ್!*

2004ರಲ್ಲಿ ಡಿ.ಕೆ.ಶಿವಕುಮಾರ್‌ ಮಂತ್ರಿ ಆಗಿದ್ದು ರಾಮನಗರ ಜಿಲ್ಲೆ ಉದ್ಧಾರಕ್ಕೋ ನೈಸ್‌ ಕಂಪನಿ ಉದ್ಧಾರಕ್ಕೋ?; HDK ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ; ರಾಮನಗರ: ನೈಸ್‌ ಅಕ್ರಮಗಳು, ಬೆಂಗಳೂರು ಸುತ್ತಮುತ್ತ ರೈತರ ಭೂಮಿ ಕೊಳ್ಳೆ ಹೊಡೆದ ವಿಷಯಕ್ಕೆ ಸಂಬಂಧಿಸಿದಂತೆ ಡಿಕೆ ಸಹೋದರರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; 2004ರಲ್ಲಿ ಡಿ.ಕೆ.ಶಿವಕುಮಾರ್‌ ಅವರು ನಗರಾಭಿವೃದ್ಧಿ ಮಂತ್ರಿ ಆಗಿದ್ದಿದ್ದು ರಾಮನಗರ ಜಿಲ್ಲೆಯ ಉದ್ಧಾರಕ್ಕೋ ಅಥವಾ ನೈಸ್‌ ಕಂಪನಿಯನ್ನು ಉದ್ಧಾರ ಮಾಡಿ ರೈತರ ಭೂಮಿ ಲೂಟಿ ಹೊಡೆಯಲಿಕ್ಕೋ? ಎಂಪಿ ಆಗುವುದಕ್ಕೆ ಮುಂಚೆ ಡಿ.ಕೆ.ಸುರೇಶ್‌ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡುತ್ತಾ ಡಿಕೆ ಸಹೋದರರ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು.

ನಾಳೆ ಅಥವಾ ನಾಡಿದ್ದು ನೈಸ್‌ ಅಕ್ರಮಗಳು, ಡಿಕೆ ಸಹೋದರು ಕೊಳ್ಳೆ ಹೊಡೆದಿರುವ ನೈಸ್‌ ಭೂಮಿಯ ದಾಖಲೆಗಳನ್ನು ಬಹಿರಂಗ ಮಾಡುತ್ತೇನೆ ಎಂದು ಅವರು ಘೋಷಣೆ ಮಾಡಿದರು.

ಕುಮಾರಸ್ವಾಮಿ ನೈಸ್‌ ವ್ಯವಹಾರ ಮಾಡಿದ್ದಾರೆ ಎಂದ ಸಂಸದ ಡಿಕೆ ಸುರೇಶ್‌ ವಿರುದ್ಧ ಕಿಡಿಕಾರಿದ ಮಾಜಿ ಮುಖ್ಯಮಂತ್ರಿಗಳು; ನೈಸ್‌ ಭೂಮಿ ಸೇರಿ ಬೆಂಗಳೂರಿನ ಸುತ್ತಾ ರೈತರ ಭೂಮಿ ಲೂಟಿ ಮಾಡಿಕೊಂಡು ಬದುಕುತ್ತಿದ್ದಾನೆ. ೨೦೧೩ರಲ್ಲಿ ಎಂಪಿ ಆಗುವುದಕ್ಕೆ ಮುಂಚೆ ಇವನ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಎಂಪಿ ಆಗಿ ಎಂಟು ವರ್ಷದಲ್ಲಿ ಇವನು ಆಸ್ತಿ ಎಷ್ಟಾಗಿದೆ? ಇದೆಲ್ಲಾ ಗೊತ್ತಿಲ್ಲದ ವಿಷಯವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರೇ ಸಹಿ ಹಾಕಿದ್ದು

ನೈಸ್‌ ಯೋಜನೆಗೆ ದೇವೇಗೌಡರೇ ಒಪ್ಪಂದ ಮಾಡಿಕೊಂಡಿದ್ದು. ಇಲ್ಲ ಎಂದು ನಾನೆಲ್ಲಿ ಹೇಳಿದೆ, ಅವರು ರಸ್ತೆ ಆಗಲಿ ಎಂದು ಒಪ್ಪಂಡ ಮಾಡಿಕೊಂಡರು. ಬೆಂಗಳೂರು-ಮೈಸೂರು ಜನಕ್ಕೆ ಅನುಕೂಲವಾಗಲಿ ಎಂದು ಅವರು ಈ ಯೋಜನೆಗೆ ಅವರು ಒಪ್ಪಿಗೆ ನೀಡಿದರು. 1995 ಅಥವಾ 1986ನೇ ಇಸವಿ ಇರಬೇಕು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದರು. ಈ ಜಿಲ್ಲೆಯ ಮಾಯಗಾನಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿ 15-20 ಶಾಲಾ ಮಕ್ಕಳು ತೀರಿಕೊಂಡರು. ಆವತ್ತೇ ಬೆಂಗಳೂರು-ಮೈಸೂರು ನಡುವೆ ನಾಲ್ಕುಪಥದ ಹೆದ್ದಾರಿ ಮಾಡಬೇಕು ಎಂದು ದೇವಗೌಡರು ತೀರ್ಮಾನ ಮಾಡಿದರು. ಹಣ ಇಲ್ಲ ಎನ್ನುವ ಕಾರಣಕ್ಕೆ ಹೆಗಡೆ ಅವರ ಕಾಲದಲ್ಲಿ ಆ ಯೋಜನೆ ಆಗಲಿಲ್ಲ. ಕೊನೆಗೆ ದೇವೇಗೌಡರು ಮುಖ್ಯಮಂತ್ರಿ ಆದ ಮೇಲೆ ಈ ಯೋಜನೆಗೆ ಚಾಲನೆ ನೀಡಿದರು ಎಂದರು ಅವರು ಮಾಹಿತಿ ನೀಡಿದರು.

ನೈಸ್‌ ಲೂಟಿಯಲ್ಲಿ ಡಿಕೆ ಸಹೋದರರ ಪಾಲು ಎಷ್ಟಿದೆ?

ದೇವೇಗೌಡರು ಮಾಡಿಕೊಂಡ ಒಪ್ಪಂದದಂತೆ ರಸ್ತೆ ಆಗಿದ್ದಿದ್ದರೆ ಏಷ್ಯಾಖಂಡದಲ್ಲಿಯೇ ಬೆಂಗಳೂರು ಮೈಸೂರು ನಗರಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದ್ದವು. ವಾಣಿಜ್ಯ ಚಟುವಟಿಕೆಗಳು ಹೆಚ್ಚಿ ಜನರಿಗೆ ಜೀವನೋಪಾಯ ಸಿಗುತ್ತಿತ್ತು. ಆದರೆ, ಈ ಲೂಟಿಕೋರರು ಮಾಡಿದ್ದೇನು? ಬೆಂಗಳೂರು ಸುತ್ತಾಮುತ್ತ ರೈತರ ಭೂಮಿಯನ್ನು ಕೊಳ್ಳೆ ಹೊಡೆದರು. ನೈಸ್‌ ಕಂಪನಿ ಮಾಡಿರುವ ಲೂಟಿಯಲ್ಲಿ ಡಿಕೆ ಸಹೋದರರ ಪಾಲು ಎಷ್ಟಿದೆ? ಈ ಬಗ್ಗೆ ದಾಖಲೆಗಳನ್ನೇ ಹೊರಗಿಡುತ್ತೇನೆ. 2004ರಲ್ಲಿ ಇವರ ಅಣ್ಣ (ಡಿಕೆ ಸುರೇಶ್‌ ಅಣ್ಣ ಡಿ.ಕೆ.ಶಿವಕುಮಾರ್‌) ರಾಮನಗರ ಜಿಲ್ಲೆ ಉದ್ಧಾರ ಮಾಡುವುದಕ್ಕೆ ಮಂತ್ರಿ ಆಗಿದ್ದರೋ ಅಥವಾ ನೈಸ್‌ ಕಂಪನಿಯನ್ನು ಉದ್ಧಾರ ಮಾಡಿ ದುಡ್ಡು ಹೊಡೆಯೋದಕ್ಕೆ ಮಂತ್ರಿ ಆಗಿದ್ದರೋ? ಎಲ್ಲ ದಾಖಲೆಗಳನ್ನು ನಾಳೆ ನಾಡಿದ್ದರಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಅವರು ಪ್ರಕಟಿಸಿದರು.

2013ರಿಂದ 2018ರವರೆಗೆ ಡಿ.ಕೆ.ಶಿವಕುಮಾರ್‌ ಮಂತ್ರಿ ಆಗಿದ್ದರಲ್ಲಾ? ಆವಾಗ ಇವರು ರಾಮನಗರಕ್ಕೆ ನೀರನ್ನು ಯಾಕೆ ಕೊಡಲಿಲ್ಲ. ಅವಾಗ ಏನ್‌ ಮಾಡ್ತಾ ಇದ್ದರು? ಬಂಡೆ ಹೊಡೆದಕೊಂಡು ಕೂತಿದ್ದರಾ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಕುಮಾರಸ್ವಾಮಿ ಮಾಡಿರುವ ಎಲ್ಲಾ ಕೆಲಸಗಳಿಗೆ ಸಾಕ್ಷ್ಯ ಗುಡ್ಡೆಗಳಿವೆ, ಅವೆಲ್ಲಾ ಕಣ್ಣಿಗೆ ಕಾಣುತ್ತಿವೆ, ಇವರು ಬೆಟ್ಟಗುಡ್ಡಗಳನ್ನು ಹೊಡೆದು ಚೀನಾಗೆ ಸಾಗಿದ್ದರ ಬಗ್ಗೆ ಕರಗಿರುವ ಬೆಟ್ಟಗುಡ್ಡಗಳ ಸಾಕ್ಷಿಗುಡ್ಡೆಗಳಿವೆ. ಅವು ಎಲ್ಲರ ಕಣ್ಣಿಗೂ ಕಾಣುತ್ತಿವೆ. ಈ ಜಿಲ್ಲೆಯ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದು ದೇವೇಗೌಡರು, ನೀರಿನ ಯೋಜನೆ ತಂದಿದ್ದು ನಾನು. ಇತರರ ಬಗ್ಗೆ ಲಘವಾಗಿ ಮಾತನಾಡುವುದನ್ನು ನಿಲ್ಲಿಸಿ, ಕ್ರಿಯೆ ಇಟ್ಟುಕೊಳ್ಳಿ, ಇನ್ನೊಬ್ಬರು ಮಾಡಿರುವ ಕೆಲಸದ ಬಗ್ಗೆ ಹೇಳುವ ಹೃದಯವೈಶಾಲ್ಯತೆ ಬೆಳೆಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿಗಳು ತಿರುಗೇಟು ನೀಡಿದರು.

ಮೆಡಿಕಲ್‌ ಕಾಲೇಜ್‌ ಕನಕಪುರಕ್ಕೆ ಯಾಕೆ?

ರಾಮನಗರ ಜಿಲ್ಲೆ ಜನರಿಗೆ ನನ್ನಿಂದ ಕಿಂಚಿತ್ತೂ ಅನ್ಯಾಯ ಆಗಿಲ್ಲ. ಜಿಲ್ಲೆಯ ಜನರನ್ನು ನಾನು ತಂದೆ ತಾಯಿ ಸ್ಥಾನದಲ್ಲಿಟ್ಟು ನೋಡುವವನು. ಸ್ವಷ್ಟವಾಗಿ ಹೇಳಬಯಸುತ್ತೇನೆ. ಕಳೆದ ಚುನಾವಣೆ ಫಲಿತಾಂಶದ ಬಗ್ಗೆ ನಾನು ಜನರಿಗೆ ದೋಷ ಕೊಡಲ್ಲ. ನಾನು ಈ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಏನು ಎಂಬುದು ಆ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವರ್ಗಾವಣೆ ದಂಧೆ, ಕಮೀಷನ್ ವ್ಯವಹಾರ ಮರೆಮಾಚಲು ಘರ್ ವಾಪ್ಸಿ ನಾಟಕ: ಹೆಚ್.ಡಿ.ಕುಮಾರಸ್ವಾಮಿ ಆರೋಪ

ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು, ಕಾವೇರಿಗಿಂತ ಘರ್ ವಾಪ್ಸಿಯದ್ದೇ ಚಿಂತೆ!
ಕನ್ನಡಿಗರ ಹಿತ ಬಲಿಗೊಟ್ಟು ತಮಿಳುನಾಡಿಗೆ ನೀರು ಬಿಟ್ಟಿದ್ದು ಸರಿಯಲ್ಲ

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಈಗ ಕಾವೇರಿ, ಕನ್ನಡಿಗರ ಬಗ್ಗೆ ಚಿಂತೆ ಇಲ್ಲ. ಅವರಿಗೆ ಘರ್ ವಾಪ್ಸಿಯದ್ದೇ ಚಿಂತೆಯಾಗಿದೆ. ಈ ಚಿಂತೆಯಲ್ಲಿರುವ ಅವರು ನಮ್ಮನ್ನು ಸರ್ವಪಕ್ಷ ಸಭೆಗೆ ಕರೀತಾರೋ ಇಲ್ವೋ ಗೊತ್ತಿಲ್ಲ. ಅವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ಕುಟುಕಿದರು.

ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಜರಗನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು ಅವರು.

ರಾಜ್ಯ ಕಾಂಗ್ರೆಸ್ ಸರಕಾರ ವರ್ಗಾವಣೆ ದಂಧೆ, ಕಮೀಷನ್ ವ್ಯವಹಾರ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಹಾದಿ ಬೀದಿಯಲ್ಲಿ ಜನರು ಛೀ, ಥೂ ಎನ್ನುತ್ತಿದ್ದಾರೆ. ಇದನ್ನು ಮರೆ ಮಾಚಲು ಘರ್ ವಾಪ್ಸಿ ನಾಟಕ ಆಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಟೀಕಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಅರ್ಧಕ್ಕರ್ಧ ಮುಗಿದು ಹೋಗುತ್ತದೆ, ಜೆಡಿಎಸ್ ಮುಗಿದೇ ಹೋಗುತ್ತದೆ ಅಂತಿದ್ದಾರೆ. ನಿನ್ನೆ ಮೊನ್ನೆ ಆಯ್ಕೆ ಆದವರು ಕೂಡ 10-20ಕ್ಕೂ ಹೆಚ್ಚು ಎಂಎಲ್ ಎಗಳು ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ಆ ಪಕ್ಷದಲ್ಲಿ ಇರುವ ಶಾಸಕರ ತಳಮಳದ ಬಗ್ಗೆ ಅವರು ಮಾತನಾಡುತ್ತಿಲ್ಲ, ಯಾಕೆ ಎಂದು ಅವರು ಪ್ರಶ್ನಿಸಿದರು.

ಘರ್ ವಾಪ್ಸಿ ಇತಿಹಾಸ ಬಿಚ್ಚಿಟ್ಟ ಮಾಜಿ ಸಿಎಂ:

ಇವರಿಗೆ ಗೊತ್ತಿರಲಿ, ಯಾವುದೇ ಪಕ್ಷವನ್ನು ನಿರ್ನಾಮ ಮಾಡೋದು ಯಾರಿಂದಲೂ ಸಾಧ್ಯವಿಲ್ಲ. ಹಿಂದೆ ಎಸ್.ಎಂ. ಕೃಷ್ಣ ಅವರ ಬಹುಮತದ ಸರಕಾರ ಇತ್ತು. ಆಗಲೂ ಬಿಜೆಪಿ, ಜೆಡಿಎಸ್ ನಿಂದ ಹಲವಾರು ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರು. ಆಮೇಲೆ 2004ರಲ್ಲಿ ಏನಾಯ್ತು? ೨೦೦೮ರಲ್ಲಿ ಬಿಜೆಪಿಯವರು ಕೂಡ ಹಾಗೆಯೇ ಮಾಡಿದರು. 2013ಕ್ಕೆ ಏನಾಯಿತು? 2013ರಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಮ್ಮ ಶಾಸಕರಿಂದ ಕ್ರಾಸ್ ವೋಟಿಂಗ್ ಮಾಡಿ ಕರೆದುಕೊಂಡು ಹೋಯಿತು. 2018ರಲ್ಲಿ ಎಲ್ಲಿಗೆ ಬಂದು ನಿಂತಿತು? ಇನ್ನು ಬಿಜೆಪಿಯವರು 17 ಶಾಸಕರನ್ನು ಕರೆದುಕೊಂಡು ಹೋಗಿ 3 ವರ್ಷ ಸರಕಾರವನ್ನೂ ಮಾಡಿ ಈಗೆಲ್ಲಿ ಬಂದು ನಿಂತಿದ್ದಾರೆ. ಮುಂದೆ ಇವರ ಹಣೆಬರಹವೂ ಇಷ್ಟೇ. ಈ ಘರ್ ವಾಪ್ಸಿಗಳೆಲ್ಲ ಕೆಲಸ ಮಾಡಲ್ಲ ಎಂದರು ಮಾಜಿ ಮುಖ್ಯಮಂತ್ರಿಗಳು.

ಪಕ್ಷ ನಿಷ್ಠೆ ಕಡಿಮೆ ಆಗಿದೆ:

ಮಾಜಿ ಶಾಸಕ ಆಯನೂರು ಮಂಜುನಾಥ್ ಮತ್ತು ಡಿ.ಕೆ.ಶಿವಕುಮಾರ್ ಭೇಟಿ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ ಅವರು; ಹೋಗುವವರನ್ನು ಹಿಡಿದುಕೊಳ್ಳಲು ಆಗುತ್ತಾ? ಈಗೆಲ್ಲಾ ಪಕ್ಷ ನಿಷ್ಠೆಗಿಂತ ವೈಯಕ್ತಿಕ ಲಾಭವೇ ಮುಖ್ಯವಾಗಿದೆ ಕೆಲವರಿಗೆ. ಈ ಬಗ್ಗೆ ಇನ್ನೇನು ಹೇಳಲಾರೆ ಎಂದರು.

ಕಾಂಗ್ರೆಸ್ ನವರು ಎಲ್ಲಾ ಪಕ್ಷಗಳ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮದೂ ಅವಕಾಶವಾದಿ ರಾಜಕಾರಣವೇ ಎಂದು ಅವರೇ ಹೇಳಿಲ್ಲವೇ? ಬಿಜೆಪಿಯವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪೇ? ಎಂದು ಅವರೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ:

ರಾಜಧಾನಿ ಬೆಂಗಳೂರಿನಲ್ಲಿ ಕೆಲ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜನರು ಹಣ ಕೊಟ್ಟು ಖಾಸಗಿ ಟ್ಯಾಂಕರ್ ಗಳಲ್ಲಿ ನೀರು ಖರೀದಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನ ನಾಗರಿಕರಿಗೆ ಕುಡಿಯುವ ನೀರು, ರೈತರಿಗೆ ರಕ್ಷಣೆ ನೀಡಬೇಕಾದ್ದು ಸರಕಾರದ ಕೆಲಸ. ಅದರಲ್ಲೂ ರಾಜಧಾನಿಯಲ್ಲಿ ನೀರಿನ ಬವಣೆ ಶುರುವಾಗಿದೆ. ಆದರೆ ರಾಜ್ಯ ಸರಕಾರ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡಿ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

ಪ್ರತಿಪಕ್ಷಗಳು ಹಾಗೂ ಜನರಿಂದ ವಿರೋಧ, ಟೀಕೆಗಳು ವ್ಯಕ್ತವಾದ ಮೇಲೆ ಸರಕಾರಕ್ಕೆ ಜ್ಞಾನೋದಯವಾಗಿದೆ. ನೀರನ್ನು ಬಿಟ್ಟ ಮೇಲೆ ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ ಎನ್ನುತ್ತಿದ್ದಾರೆ. ತಮಿಳುನಾಡಿನವರು ಅರ್ಜಿ ಹಾಕಿದ ಕೂಡಲೇ ಸರಕಾರ ಆಕ್ಷೇಪಣೆ ಸಲ್ಲಿಸಬೇಕಿತ್ತು. ತಮಿಳುನಾಡಿನಲ್ಲಿ ಕುರುವೈ ಬೆಳೆ ವಿಸ್ತೀರ್ಣವನ್ನು ನಾಲ್ಕು ಪಟ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಅದನ್ನು ನಮ್ಮ ಸರಕಾರ ವಿರೋಧ ಮಾಡಲಿಲ್ಲ, ಕೇಂದ್ರ ಸರಕಾರವೂ ಅದನ್ನು ನಿಲ್ಲಿಸಲಿಲ್ಲ. ಕನ್ನಡಿಗರ ಬದುಕಿನ ಜನತೆ ರಾಷ್ಟ್ರೀಯ ಪಕ್ಷಗಳೂ ಚೆಲ್ಲಾಟ ಆಡುತ್ತಿವೆ. ಅದಕ್ಕೆ ನಮ್ಮಲ್ಲೂ ಕೈಜೋಡಿಸಿದ್ದಾರೆ ಎಂದು ಅವರು ಹೇಳಿದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಸಭೆ ಕರೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ʼಊರು ಕೊಳ್ಳೆ ಹೊಡೆದ ದಿಡ್ಡಿ ಬಾಗಿಲು ಹಾಕಿದರುʼ ಎನ್ನುವಂತೆ ಆಗಿದೆ. ಈಗ ಸಭೆ ಕರೆದರೆ ಏನು ಪ್ರಯೋಜನ? 112 ಅಡಿ ಇದ್ದ ನೀರು ಈಗ 107 ಅಡಿಗೆ ಬಂದು ನಿಂತಿದೆ. ಮಳೆ ಆಗದಿದ್ದರೆ ಏನು ಮಾಡುವುದು. ಮುನ್ನೆಚ್ಚೆರಿಕೆ ತೆಗೆದುಕೊಳ್ಳದಿದ್ದರೆ ಉಪಯೋಗ ಏನಿದೆ? ಸಭೆಗೆ ನಮ್ಮನ್ನೇನೂ ಕರೆದಿಲ್ಲ, ನೋಡೋಣ ಎಂದರು ಮಾಜಿ ಮುಖ್ಯಮಂತ್ರಿಗಳು.

ಮೊದಲು ಒಕ್ಕೂಟ ವ್ಯವಸ್ಥೆಯಲ್ಲಿ ಏನೆಲ್ಲಾ ಕ್ರಮ ವಹಿಸಬೇಕು, ಎಲ್ಲೆಲ್ಲಿ ಹೇಗೆಲ್ಲಾ ವಾದ ಮಾಡಬೇಕು, ಆ ಬಗ್ಗೆ ಸರಕಾರ ಆಲೋಚನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರಕ್ಕೆ ಕಿವಿಮಾತು ಹೇಳಿದರಲ್ಲದೆ, ಮಂಡ್ಯ ಜಿಲ್ಲೆಯ ರೈತರು ನಡೆಸುತ್ತಿರುವ ಪ್ರತಿಭಟನೆ, ಹೋರಾಟಗಳಿಗೆ ನಮ್ಮ ಪಕ್ಷದ ಪೂರ್ಣ ಬೆಂಬಲ ಇದೆ ಎಂದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button