ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ತಿಳಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಲುವಿನ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಜೆಡಿಎಸ್ 6 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಬಿಜೆಪಿ ನಮ್ಮಿಂದ ಯಾವುದೇ ಬೆಂಬಲ ಕೋರಿಲ್ಲ. ಆದರೆ ಜೆಡಿಎಸ್ ಅಭ್ಯರ್ಥಿ ನಿಲ್ಲದ ಕಡೆಗಳಲ್ಲಿ ಬಿಜೆಪಿಗೆ ಬೆಂಬಲಿಸಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಅಷ್ಟಕ್ಕೇ ಸೀಮಿತವಾಗಿದೆ. ಅವರು ಮುತ್ಸದ್ದಿತನದಲ್ಲಿ ಕೇಳಿದ್ದಾರೆ. ನಾವೂ ಕೂಡ ಅದೇ ರೀತಿ ಉತ್ತರಿಸಿದ್ದೇವೆ ಎಂದರು.
ಮೈತ್ರಿ ಪ್ರಶ್ನೆಯೇ ಇಲ್ಲ. ಬಿಜೆಪಿ ಜೊತೆ ಯಾವುದೇ ಒಳ ಒಪ್ಪಂದವಾಗಲಿ, ಹೊರ ಒಪ್ಪಂದವಾಗಲಿ ಇಲ್ಲ. ಜೆಡಿಎಸ್ ಸ್ಪರ್ಧಿಸಿದ 6 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇರಲಿದೆ. ಆರೂ ಕ್ಷೇತ್ರಗಳಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ತಿಳಿಸಿದರು. ಉಳಿದ ಕಡೆಗಳಲ್ಲಿ ಸ್ಥಳೀಯ ಮುಖಂಡರ ಜತೆ ನಾನು ಚರ್ಚೆ ನಡೆಸಿದ್ದೇನೆ. ನಮ್ಮ ಅಭ್ಯರ್ಥಿಗಳು ಇಲ್ಲದ ಕಡೆ ಬೆಂಬಲ ನೀಡುವುದು ಬಿಡುವುದು ಸ್ಥಳೀಯ ನಾಯಕರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಾವು ಹೋರಾಟ ಮಾಡುತ್ತಿದ್ದೇವೆ. 2023ರ ವಿಧಾನಸಭಾ ಚುನಾವಣೆ ನಮ್ಮ ಗುರಿ. 123 ಸೀಟ್ ಗೆಲ್ಲುವುದು ನಮ್ಮ ಉದ್ದೇಶ. ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದರು.
ಯಡಿಯೂರಪ್ಪ ಪ್ರಾಮಾಣಿಕವಾಗಿ ಕೇಳಿದ್ದಾರೆ ಎನಿಸುತ್ತೆ. ಆದರೆ ನಮ್ಮ ಪಕ್ಷದ ಮುಂದಿನ ರಾಜಕೀಯ ಭವಿಷ್ಯ ಮುಖ್ಯ. ಹಾಗಾಗಿ ನಾವು ಕೆಲ ನಿರ್ಧಾರ ಮಾಡಬೇಕು. ಈಗ ಮೈತ್ರಿ ಮಾಡಿಕೊಂಡರೆ ಮುಂದಿನ ನಡೆಗೆ ತೊಂದರೆಯಾಗುತ್ತೆ ಎಂದು ಹೇಳಿದರು.
ಬೆಳಗಾವಿ ಅಧಿವೇಶನಕ್ಕೆ ಪ್ರತ್ಯೇಕ ಮಾರ್ಗಸೂಚಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ