Kannada NewsKarnataka NewsLatestPolitics

*ಹೌದು, ಸಿದ್ದರಾಮಯ್ಯಗೆ ನಾನೇ ವಿಲನ್ ಅವರಿಗೆ ವಿಲನ್ ಆಗದೇ ಫ್ರೆಂಡ್ ಆಗಲು ಸಾಧ್ಯವೇ? ಸಿಎಂಗೆ ತಿರುಗೇಟು ನೀಡಿದ ಮಾಜಿ ಸಿಎಂ HDK*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೌದು, ನಾನು ಸಿದ್ದರಾಮಯ್ಯಗೆ ರಾಜಕೀಯವಾಗಿ ವಿಲನ್. ಇಲ್ಲ ಎಂದವರು ಯಾರು? ಅವರಿಗೆ ನಾನು ವಿಲನ್ ಆಗದೇ ಸ್ನೇಹಿತ ಆಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.

ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.

ತಾಜ್ ನಲ್ಲಿ ಇದ್ದೆ ಅಂತ ಪದೇ ಪದೇ ಹೇಳ್ತಾರೆ. ತಾಜ್ ನಲ್ಲಿ ನಾನು ಮೋಜು ಮಸ್ತಿ ಮಾಡ್ತಿರಲಿಲ್ಲ. ಅಭಿವೃದ್ಧಿ ಕೆಲಸದ ಚರ್ಚೆ ಮಾಡ್ತಿದ್ದೆ. ನನ್ನ ಬಳಿ ಎಲ್ಲಾ ದಾಖಲಾತಿ ಇದೆ ಎಂದು ಅವರು ಟಾಂಗ್ ನೀಡಿದರು.

ನನ್ನನ್ನು ಕಾಂಗ್ರೆಸ್ ನಾಯಕರು ಸಿಎಂ ಎನ್ನುವ ಗೌರವ ಇಲ್ಲದೆ ಪಪೇಟ್ ರೀತಿಯಲ್ಲಿ ನಡೆಸಿಕೊಂಡು ಅಪಮಾನ ಮಾಡಿದರು. ನಾನು ಸಿಎಂ ಆದಾಗ ಕಾಂಗ್ರೆಸ್ ಶಾಸಕರು ಇಸ್ಪೀಟ್ ಎಲೆ ಎಸೆದ ಹಾಗೆ ಅವರ ಅಹವಾಲುಗಳನ್ನು ನನ್ನ ಟೇಬಲ್ ಮೇಲೆ ಎಸೆಯುತ್ತಿದ್ದರು. ಅಂತಹವರು ನನ್ನ ಬಗ್ಗೆ ವಿಲನ್ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು ಕುಮಾರಸ್ವಾಮಿ.

ಸರಕಾರ ಬೀಳಿಸಿದ್ದ ಸಿದ್ದರಾಮಯ್ಯ:

ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಅವರೇ. ಇದರಲ್ಲಿ ಎರಡು ಮಾತಿಲ್ಲ. ಬಿಜೆಪಿ‌ಯವರು ಸರ್ಕಾರ ಬೀಳಿಸಿದ್ದರು ಅಂತ ಹೇಳಿದ್ದೆ. ಆದರೆ ಅದಕ್ಕೆ ಬಿತ್ತನೆ ಹಾಕಿದ್ದು ಇದೇ ಸಿದ್ದರಾಮಯ್ಯ ಎಂದ ಅವರು ರಮೇಶ್ ಜಾರಕಿಹೋಳಿ ಯಾರು? ಅವರಿಗೂ ನನಗೂ ಯಾವ ಶತ್ರುತ್ವ ಇತ್ತಾ? ಬೆಳಗಾವಿ ರಾಜಕೀಯ ಸರಿ ಮಾಡಿ ಎಂದು ನಾನು ಇವರಿಗೆ ಹೇಳಿದೆ. ಇವರು ಸರಕಾರ ಬಿದ್ದು ಹೋಗಲಿ ಎಂದು ಸುಮ್ಮನಿದ್ದರು. ಆಗ ಬಿಜೆಪಿ‌ ಜತೆ ಕೈ ಜೋಡಿಸಿದ್ದು ಸಿದ್ದರಾಮಯ್ಯ. ಅದಕ್ಕೆ ‌ಸಮ್ಮಿಶ್ರ ಸರಕಾರ ಬಿದ್ದು ಹೋಯಿತು ಎಂದು ಅವರು ನೇರ ಆರೋಪ ಮಾಡಿದರು.

ಇಬ್ಬರು ಪಕ್ಷೇತರ ಶಾಸಕರನ್ನು ಮಂತ್ರಿ ಮಾಡಿಸಿದ್ದು ಸಿದ್ದರಾಮಯ್ಯ. ಬಿ.ಸಿ.ಪಾಟೀಲ್ ಅವರನ್ನು ಮಂತ್ರಿ ಮಾಡಲು ಹೇಳಿದ್ದೆ. ಆದರೆ‌ ಸಿದ್ದರಾಮಯ್ಯ ಮಾಡಲಿಲ್ಲ. ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಶ್ರೀಮಂತ ಪಾಟೀಲ್, ಆರ್.ಶಂಕರ್ ಅವರನ್ನು ರೆಸಾರ್ಟ್ ನಿಂದ ಕಳಿಸಿದ್ದು ಇದೇ ಸಿದ್ದರಾಮಯ್ಯ ಎಂದು ಟೀಕಾ ಪ್ರಹಾರ ನಡೆಸಿದ ಅವರು; ಅಪ್ಪ ನಿಮಗೊಂದು ನಮಸ್ಕಾರ. 14 ತಿಂಗಳು ನನ್ನನ್ನ ಅಧಿಕಾರದಲ್ಲಿ ಇಟ್ಟಿದ್ದಕ್ಕೆ ನಮೋ ನಮಃ. ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು ಅವರು.

ಗೃಹಲಕ್ಷ್ಮಿ ರಾಜಸ್ಥಾನದಲ್ಲಿ ಯಾಕೆ 10 ಸಾವಿರ‌ ಕೊಡ್ತಿದ್ದೀರಾ? ಎಲ್ಲಾ ಕಡೆ ಗ್ಯಾರಂಟಿಗಳನ್ನು ಕೊಡುತ್ತಿದೆ ಕಾಂಗ್ರೆಸ್. ಈ ಕಾರಣಕ್ಕೆ ಎಲ್ಲ ಯೋಜನೆಗಳು ಹಳ್ಳ ಹಿಡಿದು ಹೋಗಿವೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಜನ ಛೀ ಥೂ ಎಂದು ಉಗಿಯೋ ಕಾಲ ಬರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿರುವ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು; ಸಿಎಂ, ಡಿಸಿಎಂ ಸೇರಿ ಎಲ್ಲಾ ‌‌ಸಚಿವರು ನಾವು ವರ್ಗಾವಣೆಯಲ್ಲಿ ‌ಕಳೆದ 5 ತಿಂಗಳ ಸರ್ಕಾರದಲ್ಲಿ‌ ಹಣ ತೆಗೆದುಕೊಂಡಿಲ್ಲ ಅಂತ‌ ಆಣೆ ಮಾಡಲಿ ಎಂದು ಆಹ್ವಾನ ನೀಡಿದರು.

ಶಾಸಕ ಬಾಲಕೃಷ್ಣ ಅವರ ಸವಾಲ್ ನಾನು ಸ್ವೀಕಾರ ಮಾಡುತ್ತೇನೆ. ಅದರಂತೆ ನನ್ನ ಸವಾಲನ್ನು ಅವರು ಸ್ವೀಕಾರ ಮಾಡಲಿ. ನಾನು,‌ ನನ್ನ ಕುಟುಂಬ ಸರ್ಕಾರದ ಹಣವನ್ನು ಲೂಟಿ ಮಾಡಿಲ್ಲ. ಅಧಿಕಾರಿಗಳ ನಿಯೋಜನೆಯಲ್ಲಿ ಹಣಕ್ಕೆ ಅವಕಾಶ ನೀಡಿಲ್ಲ. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ, ತಾಯಿ ಚಾಮುಂಡೇಶ್ವರಿ ಸನ್ನಿದಿ‌ ಎಲ್ಲೇ ಆದರೂ ನಾನು ಆಣೆ‌‌‌‌ ಮಾಡಲು ಸಿದ್ಧ ಎಂದರು ಅವರು.

ಚುನಾವಣೆ ವೇಳೆ ನಮ್ಮ ಮನೆ ಹಣ ಖರ್ಚು ಮಾಡಿಲ್ಲ ಎಂದು ಅನೇಕ ಸಲ ಹೇಳಿದ್ದೇನೆ. ಸದನದಲ್ಲಿಯೇ ಈ ಮಾತನ್ನು ಹೇಳಿದ್ದೇನೆ. ನಮ್ಮ ‌ಕೆಲಸ ನೋಡಿ‌ ಕೆಲವರು ನೀಡಿದ ದೇಣಿಗೆ‌ಯಿಂದ‌ ಪಕ್ಷ ಕಟ್ಟಿದ್ದೇನೆ. ಚುನಾವಣೆ ‌ಎದುರಿಸಿದ್ದೇನೆ. ಇಂಥ ಪಾಪದ ಹಣದಿಂದ ಚುನಾವಣೆ ಮಾಡಿಲ್ಲ ಎಂದು ಅವರು ಹೇಳಿದರು.

ಕಳೆದ ಐದು ತಿಂಗಳಿನಲ್ಲಿ ಈ ಸರಕಾರ ಏನು ಮಾಡಿತು ಎನ್ನುವುದು ಗೊತ್ತಿದೆ. ಸಿಎಂ, ಡಿಸಿಎಂ ಸೇರಿ ಎಲ್ಲಾ ‌‌ಸಚಿವರು ನಾವು ವರ್ಗಾವಣೆಯಲ್ಲಿ ‌5 ತಿಂಗಳ ಸರ್ಕಾರದಲ್ಲಿ‌ ಹಣ ತೆಗೆದುಕೊಂಡಿಲ್ಲ ಅಂತ‌ ಆಣೆ ಮಾಡಲಿ. ಲೂಟಿ ಹೊಡೆದಿದ್ದೇ ಹೊಡೆದಿದ್ದು. ಇಡೀ ಜಗತ್ತಿಗೆ ಅದು ಗೊತ್ತಿದೆ. ನಮ್ಮ ಸರಕಾರ ಇದ್ದಾಗ ಪೊಲೀಸರ ವರ್ಗಾವಣೆ, ಎಂಜಿನಿಯರ್ ಗಳ ಬಡ್ತಿ ಸೇರಿ ಎಲ್ಲೂ ಒಂದು ರೂಪಾಯಿ ದಂಧೆ ನಡೆದಿಲ್ಲ. ನಾವು ಮಾಡಿಲ್ಲ ಎನ್ನುವ ಧೈರ್ಯ ಇವರಿಗೆ ಇದೆಯೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.

ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಯಾವತ್ತು ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ‌ಮಾಡಿದವರಲ್ಲ. ನಾವು ಅಕ್ರಮವಾಗಿ ಹಣ‌ ಸಂಪಾದನೆ ಮಾಡಿಲ್ಲ. ತಪ್ಪು ‌ದಾರಿಯಲ್ಲಿ‌ ಹಣ ಸಂಪಾದನೆ ‌ಮಾಡಿಲ್ಲ. ತಪ್ಪಾಗಿ ಹಣ ಸಂಪಾದನೆ ಮಾಡಿದ್ದರೆ ರಾಜ್ಯ ಸರ್ಕಾರ ತನಿಖೆ ಮಾಡಿ ಅದನ್ನು ವಶಪಡಿಸಿಕೊಳ್ಳಲಿ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button