Kannada NewsLatest

ಅಂದು ಎಂಇಎಸ್ ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ ಇಂದು ಉದ್ಧವ್ ಠಾಕ್ರೆ ಈ ಮಾತು ಹೇಳುತ್ತಿರಲಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದಿರುವ ಉದ್ಧವ್‌ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ ವಿಸ್ತರಣಾವಾದ ಸೌಹಾರ್ದಕ್ಕೆ ಧಕ್ಕೆ ತರಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರ ಸಿಎಂ ಉದ್ಧವ್ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಕುಮಾರಸ್ವಾಮಿ, ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರು ನೆಟ್ಟಿದ್ದ ಕನ್ನಡ ಧ್ವಜ ತೆರವು ಮಾಡಬೇಕು ಎಂದು ವಾದಿಸಿದ್ದ ಎಂಇಎಸ್‌ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ, ಇಂದು ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಲು ಸಾಧ್ಯವಾಗುತ್ತಿರಲಿಲ್ಲ. ಎಂಇಎಸ್‌ ಅನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವವರಿಂದ ಪ್ರೇರಣೆ ಪಡೆದೇ ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಿದ್ದಾರೆ. ಬಹುತೇಕ ಕನ್ನಡಿಗ ರಾಜರು ಮಹಾರಾಷ್ಟ್ರದ ಬಹುಪಾಲನನ್ನು ಆಗಲೇ ಆಳಿದ್ದಾರೆ. ಕನ್ನಡಿಗರ ಸಾಹಸ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಉದ್ಧವ ಠಾಕ್ರೆ ಒಂದು ಬಾರಿ ಇತಿಹಾಸವನ್ನು ಅವಲೋಕಿಸಿದರೆ, ಈಗ ಯಾರು ಯಾರ ಪ್ರದೇಶಗಳನ್ನು ಆಕ್ರಮಿಸಿದ್ದಾರೆ ಎಂಬುದೂ ಗೊತ್ತಾಗುತ್ತದೆ. ಯಾರು ಯಾರ ಪ್ರದೇಶವನ್ನು ಬಿಟ್ಟುಕೊಡಬೇಕೆಂಬುದೂ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಬೆಳಗಾವಿ ಸಾಂಸ್ಕೃತಿಕವಾಗಿ, ಆಡಳಿತಾತ್ಮಕವಾಗಿ ಕರ್ನಾಟಕದ ಹೆಗ್ಗುರುತು. ಬೆಳಗಾವಿಯ ಬಗ್ಗೆ ಪದೇ ಪದೆ ಕಿತಾಪತಿ ಮಾಡುವ ಎಂಇಎಸ್‌ ಮತ್ತು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ಕೊಡಬೇಕೆಂದೇ ನಾನು ಸಿಎಂ ಆಗಿದ್ದಾಗ ಅಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿತ್ತು. ಅದು, ಬೆಳಗಾವಿ ನಮ್ಮ ಅವಿಭಾಜ್ಯ ಅಂಗ ಎಂಬುದರ ದ್ಯೋತಕ ಎಂಬುದನ್ನು ಠಾಕ್ರೆ ಅರಿಯಲಿ.

ಗಡಿ ವಿವಾದದಲ್ಲಿ ಮಹಾಜನ ಆಯೋಗದ ತೀರ್ಪೇ ಅಂತಿಮ. ಇತ್ಯರ್ಥ ಆಗಿರುವ ವಿಷಯಗಳ ಬಗ್ಗೆ ತಗಾದೆ ತೆಗೆದು, ಬೆಳಗಾವಿಯಲ್ಲಿ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿರುವವರಲ್ಲಿ ವಿಷ ಬೀಜ ಬಿತ್ತುವುದನ್ನು ದೇಶದ್ರೋಹಿ ಕೃತ್ಯ ಎಂದೆನ್ನಬೇಕಾಗುತ್ತದೆ. ಬೆಳಗಾವಿ ವಿಚಾರಕ್ಕೆ ಬಂದರೆ ಕನ್ನಡಿಗರು ಸಿಡಿದೇಳುತ್ತಾರೆ ಎಂಬುದು ಉದ್ಧವ ಠಾಕ್ರೆಗೆ ತಿಳಿಯಲಿ ಎಂದು ಎಚ್ಚರಿಕೆ ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button