Latest

ಬೆಲೆ ಏರಿಕೆ ಬಿಸಿ; ಬಿಜೆಪಿ ವಿರುದ್ಧ HDK ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಲಾಲ್ ಹಾಲಾಹಲದ ನಡುವೆಯೇ ಅಪ್ಪಳಿಸಿದ ಸುದ್ದಿ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ; 13 ದಿನಗಳಲ್ಲಿ 8 ರೂ. ಜಿಗಿತ! ʼಬಹುಜನ ಹಿತಾಯ, ಬಹುಜನ ಸುಖಾಯʼಎಂದು ಭಾಷಣ ಬಿಗಿಯುವ ಬಿಜೆಪಿ ಆಡಳಿತದಲ್ಲಿ ಇಂಡಿಯಾ ಶೈನಿಂಗ್… ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

13 ದಿನದಿಂದ ಬೆಲೆ ಏರಿಕೆ ನಿರಂತರ. ಪೆಟ್ರೋಲ್, ಡೀಸೆಲ್ ಬೆಲೆ 8 ರೂ. ಹೆಚ್ಚಳ. ಖಜಾನೆ ಭರ್ತಿಗೆ ಷೇರು ಸೂಚ್ಯಂಕವನ್ನು ಕುಣಿಸಿದಂತೆ, ಬೆಲೆ ಸೂಚ್ಯಂಕದ ಕರಡಿ ಕುಣಿತವೂ ಭರ್ಜರಿಯಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನು 2018ರಲ್ಲಿ ಸಿಎಂ ಆಗಿದ್ದಾಗ ಸಾಲ ಮನ್ನಾಕ್ಕಾಗಿ ಪೆಟ್ರೋಲ್ ಲೀಟರಿಗೆ 1.12 ಪೈಸೆ, & ಡೀಸೆಲ್ ಬೆಲೆಯಲ್ಲಿ ಲೀಟರಿಗೆ 1.14 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿ ನಾಯಕರು ಕೂಗಾಡಿ ಗಲಾಟೆ ಎಬ್ಬಿಸಿದ್ದರು. ಹಾದಿಬೀದಿಯಲ್ಲಿ ಖಾಲಿ ಸಿಲಿಂಡರುಗಳನ್ನು ಹೊತ್ತ ಬಿಜೆಪಿಗರು ಈಗೇಕೆ ಮೌನಕ್ಕೆ ಶರಣಗಾಗಿದ್ದಾರೆ? ಬೆಲೆ ಏರಿಕೆಯಿಂದ ಬಡವರ ಹೊಟ್ಟೆ ಉರಿದರೆ ನಿಮಗೆ ಖುಷಿಯಾ? ಜನರೇ ಪ್ರತಿಭಟನೆ ಮಾಡಿ, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಎಂದು ಹೇಳಿದ್ದಾರೆ.

ಸಿಮೆಂಟ್, ಕಬ್ಬಿಣ, ಆಹಾರ ಪದಾರ್ಥ ಸೇರಿ ಸಾಮಾನ್ಯ ವ್ಯಕ್ತಿ ಬಳಸುವ ಪ್ರತಿ ವಸ್ತುವಿನ ಬೆಲೆ ನಿತ್ಯವೂ ಜಿಗಿಯುತ್ತಿದೆ. ಶ್ರೀಸಾಮಾನ್ಯನು ಮನೆ ಕಟ್ಟುವ ಕನಸು ಇನ್ನು ಬರೀ ಕನಸೇ. ಅವನ ಜೇಬು ಖಾಲಿಯಾಗುತ್ತಿದೆ, ಕೆಲವರ ಜೇಬು ತುಂಬುತ್ತಿದೆ!! ಬಿಜೆಪಿ ಭಾರತದಲ್ಲಿ ಉದ್ಯಮಿಗಳು ಜಗತ್ತಿನ ಟಾಪ್ ಶ್ರೀಮಂತರಾಗುತ್ತಿದ್ದಾರೆ. ಹಿಜಾಬ್, ಕೇಸರಿ ಶಾಲು, ಟಿಪ್ಪು ಪಠ್ಯ, ಮುಸ್ಲಿಂ ವರ್ತಕರಿಗೆ ನಿಷೇಧ, ಹಲಾಲ್ ಕಟ್ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುವ ʼಶ್ರೀಮಂತರ ಪಕ್ಷ ಬಿಜೆಪಿʼಯು ಬೆಲೆ ಏರಿಕೆ ಬಗ್ಗೆ ಮಾತ್ರ ಮೌನವಾಗಿದೆ!
ರಾಜ್ಯ ಸರಕಾರವೂ ಮೌನ! ಮುಖ್ಯಮಂತ್ರಿಗಳೂ ಮೌನ! ಪಕ್ಷವೂ ಮೌನ. ಡಾ.ಮನಮೋಹನ್ ಸಿಂಗ್ ಅವರನ್ನು ʼಮೌನಿ ಪ್ರಧಾನಿʼ ಎಂದ ಇವರ ಅಬ್ಬರ ಎಲ್ಲಿ ಉಡುಗಿ ಹೋಗಿದೆ? ಎಂದು ಪ್ರಶ್ನಿಸಿದ್ದಾರೆ.

Home add -Advt

ಬೆಲೆ ಏರಿಕೆ ಬಗ್ಗೆ ಜನರ ಆಕ್ರೋಶ ಎಲ್ಲಿ ಆಸ್ಫೋಟಗೊಂಡು ಬಿಜೆಪಿ ಬುಡಕ್ಕೆಲ್ಲಿ ಬೆಂಕಿ ಬೀಳುತ್ತದೋ ಎಂಬ ಭಯದಿಂದ ಆ ಮುಗ್ಧಜನರ ಮನಸ್ಸನ್ನು ಸೂಕ್ಷ್ಮ ವಿಷಯಗಳ ಕಡೆ ಹೊರಳುವಂತೆ ಮಾಡಲಾಗಿದೆ. ʼ150 ಸೀಟಿನ ರೋಡ್ ಮ್ಯಾಪ್ ಎಲ್ಲಿ ಮಣ್ಣುಪಾಲಾಗುತ್ತದೋʼ ಎಂದು ಹಿಂದುತ್ವದ ವಿನಾಶಕ್ಕೆ ಹಿಂಸಾಚಾರದ ಶಂಖ ಊದಲಾಗಿದೆ. ಮಾಜಿ ಸಿಎಂ, ಮಾಜಿ ಕೇಂದ್ರಮಂತ್ರಿಗಳೂ ಡಿ.ವಿ.ಸದಾನಂದಗೌಡರು, ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರಕಾರ ಕಾರಣ ಎಂದಿದ್ದಾರೆ. 8 ವರ್ಷವಾದರೂ ಯುಪಿಎ ಮಾಡಿದ ತಪ್ಪು ಸರಿ ಮಾಡಲಿಲ್ಲ, ಏಕೆ? ಅಡುಗೆ ಮನೆಗಳಲ್ಲಿ ತಾಯಂದಿರು, ʼಬೆಲೆ ಏರಿಕೆ ಬೆಂಕಿʼಯಲ್ಲಿ ಬೇಯುತ್ತಿದ್ದರೆ ನಿಮಗೆ ರಾಜಕೀಯ ಮುಖ್ಯವಾಗಿದೆ. ಬಿಜೆಪಿ ಎಂದರೆ ಭಾರತೀಯ ಜನತಾ ಪಕ್ಷವಲ್ಲ, ಬಡವರ ರಕ್ತಹೀರಿ ಸಿರಿವಂತರ ಖಜಾನೆ ಭರ್ತಿ ಮಾಡುವ ʼಬಲ್ಲಿದ ಜನರ ಪಕ್ಷʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪೆಟ್ರೋಲ್-ಡೀಸೆಲ್ ದರ ಮತ್ತಷ್ಟು ಏರಿಕೆ

Related Articles

Back to top button