ಪ್ರಗತಿವಾಹಿನಿ ಸುದ್ದಿ: ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ವಿರುದ್ಧದ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಿಡ್ನ್ಯಾಪ್ ಆಗಿದ್ದ ಮಹಿಳೆಯನ್ನು ಎಸ್ ಐಟಿ ಅಧಿಕಾರಿಗಳು ರಕ್ಷಿಸಿದ್ದಾರೆ.
ಏಪ್ರಿಲ್ 29ರಿಂದ ನಾಪತ್ತೆಯಾಗಿದ್ದ ಸಂತ್ರಸ್ತ ಮಹಿಳೆ ಹೆಚ್.ಡಿ.ರೇವಣ್ಣ ಅವರ ಪಿಎ ರಾಜಶೇಖರ್ ಅವರ ತೋಟದ ಮನೆಯಲ್ಲಿ ಪತ್ತೆಯಾಗಿದ್ದು, ಎಸ್ ಐಟಿ ಅಧಿಕಾರಿಗಳು ಮಹಿಳೆಯನ್ನು ರಕ್ಷಿಸಿದ್ದಾರೆ.
ಮೈಸೂರು ಜಿಲ್ಲೆಯ ಹಣಸೂರು ತಾಲ್ಲೂಕಿನ ಕಾಳೇನಹಳ್ಳಿಯಲ್ಲಿರುವ ರೇವಣ್ಣ ಅವರ ಆಪ್ತ ಸಹಾಯಕ ರಾಜಶೇಖರ್ ಅವರ ತೋಟದ ಮನೆಯಿಂದ ಸಂತ್ರಸ್ತ ಮಹಿಳೆ ರಕ್ಷಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ.
ಹೆಚ್.ಡಿ.ರೇವಣ್ಣ ವಿರುದ್ಧ ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಕೇಸ್ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ, ಕೋರ್ಟ್ ಕೆಲವೇ ಕ್ಷಗಳಲ್ಲಿ ಆದೇಶ ಹೊರಡಿಸುವ ಸಂದರ್ಭದಲ್ಲೇ ರೇವಣ್ಣ ಆಪ್ತಸಹಾಯಕನ ಮನೆಯಿಂದಲೇ ಎಸ್ ಐಟಿ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದು, ಸಿನಿಮೀಯ ರೀತಿಯಲ್ಲಿ ಬೆಳವಣಿಗೆ ನಡೆದಿದೆ.
ಸಂತ್ರಸ್ತ ಮಹಿಳೆಯನ್ನು ಏಪ್ರಿಲ್ 29ರಂದು ರೇವಣ್ಣ ಸಂಬಂಧಿ ಸತೀಶ್ ಬಾಬು ಎಂಬುವವರು ಮೈಸೂರಿನ ಕೆ.ಆರ್.ನಗರದಿಂದ ಕರೆದೊಯ್ದಿದ್ದರು. ಬಳಿಕ ಮಹಿಳೆಯ ಸುಳಿವಿರಲಿಲ್ಲ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಹೊರಬರುತ್ತಿದ್ದಂತೆ ಮಹಿಳೆಯ ಮಗ ಎರಡು ದಿನಗಳ ಹಿಂದೆ ತನ್ನ ತಾಯಿ ಕಿಡ್ನ್ಯಾಪ್ ಆಗಿದ್ದಾರೆ. ರೇವಣ್ಣ ಸಂಬಂಧಿ ಸತೀಶ್ ಬಾಬು ಎಂಬುವವರು ಕರೆದೊಯ್ದಿದ್ದು, ತಾಯಿಯ ಸುಳಿವಿಲ್ಲ. ಇದರಲ್ಲಿ ಹೆಚ್.ಡಿ ರೇವಣ್ಣ ಕೈವಾಡವೂ ಇದೆ. ಹುಡುಕಿಕೊಡಿ ಎಂದು ಕೆ.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸತೀಶ್ ಬಾಬು ಹಾಗೂ ಹೆಚ್.ಡಿ.ರೇವಣ್ಣ ವಿರುದ್ಧ ಕಿಡ್ನ್ಯಾಪ್, ಅಕ್ರಮ ಬಂಧನ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ