ಕೇರಳದಂತೆ ರಾಜ್ಯದಲ್ಲೂ ವಿಶೇಷ ಪ್ಯಾಕೆಜ್ ಘೋಷಿಸಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ವೈರಸ್ ನಿಂದ ಎದುರಾದ ನಿರ್ಬಂಧಗಳಿಂದಾಗಿ ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು ಹೆಚ್ಚು ಬಾಧಿತರಾಗಿದ್ದಾರೆ. 2 ತಿಂಗಳ ಅವರ ಬದುಕಿಗೆ ನೆರವಾಗುವಂತೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಆಟೋ, ಕ್ಯಾಬ್ ಚಾಲಕರ ಬ್ಯಾಂಕ್ ಲೋನ್ ಕಂತು ಪಾವತಿಗೆ 2 ತಿಂಗಳ ವಿನಾಯಿತಿ ಕಲ್ಪಿಸಬೇಕು. ಈ ಮೂಲಕ ಸರ್ಕಾರ ಬಡವರ ಪರ ನಿಲುವು ತಾಳಬೇಕು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕೊರೊನಾ ವೈರಸ್​ನಿಂದ ಹದಗೆಟ್ಟಿರುವ ಆರ್ಥಿಕತೆಗೆ ಚೈತನ್ಯ ನೀಡಲು ಕೇರಳ ಸಿಎಂ ಪಿಣರಾಯಿ ವಿಜಯನ್, ಅಲ್ಲಿನ ಜನರಿಗೆ 20,000 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ. ಇದರಲ್ಲಿ, ಆರೋಗ್ಯ ಸೇವೆ, ಸಾಲಕ್ಕೆ ನೆರವು, ಮಾಶಾಸನ, ಉಚಿತ ದಿನಸಿ, ಕಡಿಮೆ ದರದಲ್ಲಿ ಊಟ, ಬಾಕಿ ಮರುಪಾವತಿ, ಪರಿಹಾರ ಮೊತ್ತಗಳು ಸೇರಿವೆ. ಕೇರಳದ ಈ ನಡೆ ನಮಗೆ ಮಾದರಿಯಾಗಬಾರದೇಕೆ? ಹಾಗಾಗಿ ರಾಜ್ಯ ಸರ್ಕಾರವೂ ಆರ್ಥಿಕ ವಿಶೇಷ ಪ್ಯಾಕೆಜ್ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇರಳದಲ್ಲಿ 26 ಕೊರೊನಾ ಪ್ರಕರಣ ವರದಿಯಾಗಿದ್ದರೆ ಕರ್ನಾಟಕದಲ್ಲಿ 15 ಪ್ರಕರಣಗಳು ವರದಿಯಾಗಿವೆ. ಅಂದರೆ ರಾಜ್ಯದಲ್ಲಿ ಮಹಾಮಾರಿಯ ಬಗೆಗಿನ ಆತಂಕ, ಭೀತಿ ಕೇರಳಕ್ಕಿಂತಲೂ ಭಿನ್ನವೇನಲ್ಲ. ಇದು ರಾಜ್ಯದ ಆರ್ಥಿಕತೆಗೂ ಪೆಟ್ಟು ನೀಡುತ್ತಿದೆ. ಸದ್ಯ ಬಡ ವರ್ಗದ ಮೇಲೆ ಇದು ನೇರ ಪರಿಣಾಮ ಬೀರುತ್ತಿದೆ. ರಾಜ್ಯವೂ ಕೇರಳ ಮಾದರಿಯ ನಿರ್ಧಾರಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಆರೋಗ್ಯ ಸೇವೆಗೆ ಹೆಚ್ಚಿನ ಹಣ, ಬ್ಯಾಂಕ್ ಸಾಲಗಳ ತಿಂಗಳ ಕಂತು ಮುಂದೂಡಿಕೆ, ಬಡ್ಡಿ ಮನ್ನ, ಮಾಸಾಶನ, ಪರಿಹಾರ ಘೋಷಣೆಯಂಥ ನಿರ್ಧಾರಗಳನ್ನು ನಾವೂ ಕೈಗೊಳ್ಳಬೇಕು. ಆರ್ಥಿಕ ದುರ್ಬಲರಿಗೆ ನೆರವಾಗುವ ಮೂಲಕ‌ ಆರ್ಥಿಕತೆಗೆ ಚೈತನ್ಯ ತುಂಬಬೇಕು. ಜೊತೆಗೆ ಕೊರೋನಾ ವೈರಸ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button