ಎಚ್ಎ3ನ್2 ವೈರಸ್ ಸೋಂಕು: ವಿಸ್ತೃತ ಮಾರ್ಗಸೂಚಿ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ೨೬ ಜನರಲ್ಲಿ ಎಚ್೩ಎನ್೨ ವೈರಸ್ ಸೋಂಕು ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ವಿಚಾರವಾಗಿ ಸೋಮವಾರ ಸಂಜೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಸಚಿವ ಸುಧಾಕರ್ ಟ್ವೀಟ್ ಮೂಲಕವೂ ಮಾಹಿತಿ ನೀಡಿದ್ದಾರೆ. ಎಚ್೩ಎನ್೨ ವೈರಸ್ ನಿಂದ ಹರಡಿರುವ ಸೋಂಕು ಕನಿಷ್ಠ ೫ರಿಂದ ೭ ದಿನಗಳ ವರೆಗೆ ಇರುತ್ತದೆ. ಗರ್ಭಿಣಿಯರು, ಮಕ್ಕಳು, ವೃದ್ಧರಿಗೆ ಬೇಗ ಸೋಂಕು ಹರಡುತ್ತದೆ. ೧೫ ವರ್ಷದಿಂದ ೬೫ ವರ್ಷದವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ವಯೋಮಾನದವರು ಹಾಗೂ ಎಲ್ಲರೂ ಬಹಳ ಎಚ್ಚರಿಕೆ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ವಿಸ್ತೃತ ಮಾರ್ಗಸೂಚಿಯಲ್ಲಿ ಸೋಂಕಿನ ಲಕ್ಷಣಗಳ ಕುರಿತ ವಿವರನ್ನೂ ನೀಡಲಾಗಿದೆ. ಜ್ವರ, ಚಳಿ, ಮೈ-ಕೈ ನೋವು, ತುರಿಕೆ, ಸೀನು ಪ್ರಮುಖವಾಗಿ ಕಂಡುಬರುತ್ತವೆ. ಕಲುಷಿತ ವಾತಾವರಣವಿದ್ದರೆ ೩ ವಾರಗಳವರೆಗೆ ಸೋಂಕು ಇರುವ ಸಾಧ್ಯತೆ ಇದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಸೋಂಕು ತಡೆಗೆ ಏನೇನು ಕ್ರಮ ಕೈಗೊಳ್ಳಬೇಕು?
ಆರೋಗ್ಯ ಸಿಬ್ಬಂದಿ ಮಾಸ್ಕ್ ಬಳಸುವುದು ಕಡ್ಡಾಯ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗೆ ಮಾಸ್ಕ್ ಬಳಕೆ ಕಡ್ಡಾಯ. ಉಸಿರಾಟ ಸಂಬಂಧಿತ ಸೋಂಕು ಪ್ರಕರಣಗಳ ಮೇಲೆ ಸೂಕ್ತ ನಿಗಾವಹಿಸಬೇಕು. ಪೋರ್ಟಲ್‌ನಲ್ಲಿ ಪ್ರಕರಣಗಳ ಬಗ್ಗೆ ಹಾಗೂ ಮಾದರಿ ಸಂಗ್ರಹದ ಮಾಹಿತಿ ದಾಖಲು ಮಾಡಬೇಕು. ಅಗತ್ಯವಿರುವ ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸಿ ಇಟ್ಟಿಕೊಳ್ಳಬೇಕು. ಉಸಿರಾಟ ಸಂಬಂಧಿತ ಸೋಂಕು ಪ್ರಕರಣಗಳ ಚಿಕಿತ್ಸೆ ವೇಳೆ ಆರೋಗ್ಯ ಸಿಬ್ಬಂದಿ ಮಾಸ್ಕ್ ಹಾಗೂ ಪಿಪಿಇ ಕಿಟ್ ಧರಿಸಬೇಕು. ತೀವ್ರ ನಿಗಾ ಘಟಕ ಮತ್ತು ಆಸ್ಪತ್ರೆಯ ಚಿಕಿತ್ಸಾ ವಾರ್ಡ್ ಗಳಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಫ್ಲೂ ಲಸಿಕೆ ಪಡೆಯಬೇಕು. ಹೆಲ್ತ್ ಕೇರ್ ಫೆಸಿಲಿಟಿಗಳಲ್ಲಿ ಎಲ್ಲಾ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು. ಉಸಿರಾಟ ಸಂಬಂಧಿತ ಸೋಂಕು ಪ್ರಕರಣಗಳಿಂದ ಮೃತಪಟ್ಟವರ ಸ್ವಾಬ್ ವರದಿಯನ್ನು ಹತ್ತಿರದ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯದ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕು.
ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಕಾಲೋಚಿತ ಜ್ವರದ ರೋಗಲಕ್ಷಣದ ನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸ್ವಯಂ-ಔಷಧಿ ಮತ್ತು ಪ್ರತಿಜೀವಕಗಳ ಅನಗತ್ಯ ಬಳಕೆಯನ್ನು ತಪ್ಪಿಸಬೇಕು. ಏನೇನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ವಿವರವನ್ನು ಜನಜಾಗೃತಿಗಾಗಿ ಆಸ್ಪತ್ರೆಯ ಆವರಣದಲ್ಲಿ ಲಗತ್ತಿಸಬೇಕು ಎಂದು ತಿಳಿಸಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button