Belagavi NewsBelgaum NewsKannada NewsKarnataka News

*ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳುವಳಿಕಾರ: ಡಾ. ಅವಿನಾಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿವಶರಣ ಹಡಪದ ಅಪ್ಪಣನವರು 12ನೇ ಶತಮಾನದ ವಚನ ಚಳುವಳಿ ಪ್ರಾರಂಭಿಸಿ, ನಿಜಸುಖಿ ಎಂದು ಹೆಸರು ಹೊಂದಿದವರು. ಬಸವಣ್ಣನವರ ಅನುಯಾಯಿಗಳಾಗಿ ಅವರ ನೆರಳಂತೆ ಬದುಕು ನಡೆಸಿದ್ದಾರೆ.  ಹಡಪದ ಅಪ್ಪಣ್ಣನವರನ್ನು ನೆನೆದರೆ ಸಾಕ್ಷಾತ್ ಬಸವಣ್ಣನವರನ್ನು ನೆನಪಿಸಿಕೊಂಡತೆ ಎಂದು ಎನ್.ಎಮ್.ಸಿ. ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅವಿನಾಶ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ (ಜು.20) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ಶಿವಶರಣ ಹಡಪದ ಅಪ್ಪಣ್ಣವರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿಯೇ ಹಡಪದ ಅಪ್ಪಣ್ಣನವರಿಗೆ ನಿಜಸುಖಿ ಎಂದು ಬಸವಣ್ಣನವರು ಕರೆಯುತ್ತಿದ್ದರು. ಅಪ್ಪಣ್ಣನವರು ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ಲಿಂಗವನ್ನು ನೋಡಿ ಅದರಲ್ಲಿಯೇ ತಲ್ಲೀನರಾಗಿರುತ್ತಿದ್ದರು ಎಂದು ಬಸವಬೆಳವಿಯ ಶರಣಬಸವ ದೇವರು ಹೇಳಿದರು.

ಡೋಹರ ಡಕ್ಕಯ್ಯ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮೋಳಿಗೆಯ ಮಾರಯ್ಯ, ಮೇಧಾರ ಕೇತಯ್ಯ, ಸಮಗಾರ ಹರಳಯ್ಯ, ಸೊನ್ನಲಗದ ಸಿದ್ದರಾಮ ಸೇರಿದಂತೆ ಜಗತ್ತಿನ ಎಲ್ಲ ಧರ್ಮದ ಶರಣರಿಗೆ ಬಸವಣ್ಣನವರು 12ನೇ ಶತಮಾನದ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದ್ದರು.

ಹಡಪದ ಅಪ್ಪಣ್ಣನವರ ವಚನದಲ್ಲಿ ಲಾಲಿತ್ಯ, ಗುರು, ಲಿಂಗ, ಜಂಗಮ, ನಿಷ್ಠೆ ಇತ್ತು. ಹೀಗಾಗಿ ಹಡಪದ ಸಮಾಜ ಬಾಂಧವರೆಲ್ಲರೂ ಅಪ್ಪಣ್ಣನವರ ವಚನದ ಪುಸ್ತಕಗಳನ್ನು ಮನೆಯಲ್ಲಿಟ್ಟುಕೊಂಡು ನಿತ್ಯವೂ ಅವರ ವಚನಗಳನ್ನು ಮಕ್ಕಳಿಗೆ ಹಾಗೂ ಕುಟುಂಬದ ಎಲ್ಲರಿಗೂ ಓದಿಸಬೇಕು. ಅಂದರೆ ಮಾತ್ರ ಯುವ ಪೀಳಿಗೆ ಅಪ್ಪಣ್ಣನವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಅಪ್ಪಣ್ಣರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಅವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆ ಎಂದರೆ ತಪ್ಪಾಗಲಾರದು. 

ಸಮಾಜದಲ್ಲಿ ಬೆಳಗ್ಗೆ ಎದ್ದ ತಕ್ಷಣವೇ ಹಡಪದ ಸಮುದಾಯದ ಜನರ ಮುಖ ನೋಡಬಾರದು ಎಂಬ ತಪ್ಪು ಕಲ್ಪನೆ ದೂರ ಮಾಡಲು ಬಸವಣ್ಣನವರು ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡು ತಮ್ಮನ್ನು ನೋಡಲು ಬರುವವರೆಲ್ಲರೂ ಮೊದಲು ಅಪ್ಪಣ್ಣನವರನ್ನು ಭೇಟಿ ಮಾಡಿ ಬರುವಂತೆ ಹೇಳುತ್ತಿದ್ದರು. ಇದು ಸಮಾನತೆಯ ಮೊದಲ ಹೆಜ್ಜೆಯಾಗಿದೆ.

ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರೂ ಸಹ ಮಹಾನ್ ವಚನಗಾರ್ತಿಯಾಗಿದ್ದರು. ಇವರು ಸುಮಾರು  ವಚನಗಳನ್ನು ಅಪ್ಪಣ್ಣ ಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ. 

ಒಬ್ಬ ಕಾರ್ಯದರ್ಶಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಹಡಪದ ಅಪ್ಪಣ್ಣನವರು ಒಂದು ಉತ್ತಮ ಉದಾಹರಣೆಯಾಗಿರುತ್ತಾರೆ. ಸತ್ಯದ ನಿಲುವುಗಳ್ಳನ್ನು ಕಂಡು ಕೊಂಡ ಇತಿಹಾಸ ಅದು ಶರಣರ ಜೀವನವನ್ನು ಅರಿತು ಅವರ ವಚನಗಳಿಂದ ಈಗಿನ ಜನತೆ ಜೀವನವನ್ನು ಕಂಡುಕೊಳ್ಳಬೇಕು ಎಂದು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರು ವಿದ್ಯಾವತಿ ಭಜಂತ್ರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಹಡಪದ ಸಮಾಜ ಜಿಲ್ಲಾ ಅಧ್ಯಕ್ಷರು ಸುರೇಶ ಹಡಪದ, ತಾಲೂಕಾ ಅಧ್ಯಕ್ಷ ಎಮ್.ಎಸ್. ಹಂಪನ್ನವರ, ರಾಜ್ಯ ಉಪಾಧ್ಯಕ್ಷರು ಸಂತೋಷ ಹಡಪದ, ಪಂಚಮ ಸಾಲಿ ಪ್ರಚಾರ ಸಮಿತಿ ಅಧ್ಯಕ್ಷ ರಾವಸಾಹೇಬ ಪಾಟೀಲ, ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದಯನ್ನವರ, ಜಿಲ್ಲಾಯುವ ಘಟಕದ ಅಧ್ಯಕ್ಷ ಶಿವಪ್ಪ ಸವದಿ, ಸೇರಿದಂತೆ ಸಮಾಜದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.

ಮೆರವಣಿಗೆ ಕಾರ್ಯಕ್ರಮ:

ಇದಕ್ಕೂ ಮುಂಚೆ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ನಗರದ ಕುಮಾರ ಗಂಧರ್ವ ಕಲಾ ಮಂದಿರದ ವರೆಗೆ ಬಂದು ಸಮಾರೋಪಗೊಂಡಿತು.

ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕುಂಭಮೇಳ  ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button