Kannada NewsKarnataka News

ಜೀರ್ಣೋದ್ಧಾರಗೊಂಡ ಕೇಳ್ಕರ್ ಬಾಗ್ ಬಾವಿ ಪಾಲಿಕೆಗೆ ಹಸ್ತಾಂತರ

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿರುವ ಪ್ಯಾಸ್ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಶಾಸಕ ಅನೀಲ ಬೆನಕೆ ಹೇಳಿದರು. ಅವರು  ಜೀರ್ಣೊದ್ಧಾರಗೊಳಿಸಿದ ಕೇಳಕರ ಬಾಗ್  ಭಾವಿಯ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ಯಾಸ್ ಫೌಂಡೇಶನ್ ಸಂಸ್ಥೆಯು ಕೇಳಕರ ಬಾಗ್ ಬಾವಿಯನ್ನು ಜೀರ್ಣೊದ್ಧಾರಗೊಳಿಸಿ ಮಹಾನಗರ ಪಾಲಿಕೆಗೆ ಇಂದು ಹಸ್ತಾಂತರಿಸಿತು. ಪಾಳುಬಿದ್ದ ಬಾವಿಯ ಜೀರ್ಣೊದ್ಧಾರದ ಕೆಲಸವನ್ನು ಮೇ ೨೦೧೮ರಲ್ಲಿ  ಪ್ರಾರಂಭಿಸಿ ಎರಡು ಹಂತಗಳಲ್ಲಿ ಮುಕ್ತಾಯಗೊಳಿಸಿದೆ.

ಶಂಕರ ಶೆಟ್ಟೆಪ್ಪ ಕಲಘಟಗಿ ಇವರು ಬ್ರೀಟಿಷರ ಆಳ್ವಿಕೆಯಲ್ಲಿ ಈ ತೆರೆದ ಭಾವಿಯನ್ನು ಕೊರೆಯಿಸಿದ್ದರು. ಕಸದರಾಶಿಯಲ್ಲಿ ಈ ಭಾವಿ ಮುಚ್ಚಿಹೋಗಿತ್ತು. ಇದನ್ನು ಜೀರ್ಣೊದ್ಧಾರಗೊಳಿಸುವ ಎರಡು ಪ್ರಯತ್ನಗಳು ವಿಫಲವಾದವು. ಆಗ ಕಲಘಟಗಿಯವರ ಮೊಮ್ಮಗ ಈ ಬಾವಿಯನ್ನು ಜೀರ್ಣೊದ್ಧಾರಗೊಳಿಸಬೇಕೆಂದು ಪ್ಯಾಸ್ ಫೌಂಡೇಶನ್‌ಗೆ ಸಂಪರ್ಕಿಸಿದರು. ಈ ಸವಾಲಿನ ಕಾರ್ಯವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿದರು.

ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅವರು ಮಾತನಾಡಿ, ಪ್ಯಾಸ್ ಫೌಂಡೆಶನ್ ಈ ಕಾರ್ಯವನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿದೆ,  ಈ ತರಹದ ಕಾರ್ಯವನ್ನು ಎಲ್ಲಾ ಎನ್‌ಜಿಓ ಗಳು ಮಾಡಬೇಕು ಎಂದರು.

ಕಳೆದ ೪ ವರ್ಷಗಳಿಂದ ನಮ್ಮ ಫೌಂಡೆಶನ್ ನೀರಿನ ನಿರ್ವಹಣೆಯ ಕುರಿತು ಅಧ್ಯನಮಾಡಿ ೯ ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ. ಸದ್ಯ ಮಣ್ಣಿಕೇರಿ ಕೆರೆಯ ಪುನರುಜ್ಜೀವನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಸಮಾಜದಿಂದ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಸಮಾಜದ ಎಲ್ಲ ವರ್ಗಗಳಿಂದ ದೇಣಿಗೆ ಹರಿದು ಬರುತ್ತಿದೆ ಎಂದು ಪ್ಯಾಸ್ ಫೌಂಡೆಶನ್ ಅಧ್ಯಕ್ಷ ಡಾ. ಮಾಧವ ಪ್ರಭು ಹೇಳಿದರು.

ಪಾಲಿಕೆ ಆಯುಕ್ತ ಜಗದೀಶ್, ಬೆಳಗಾವಿ ಸ್ಮಾರ್ಟ ಸಿಟಿ  ಎಂಡಿ ಶಶಿಧರ ಕುರೇರ, ಕೆಯುಡಬ್ಲುಎಸ್ ನ ಎಇಇ ಚಂದ್ರಪ್ಪ, ಪ್ಯಾಸ್ ಫೌಂಡೆಶನ್ ನಿರ್ದೇಶಕರಾದ ಅಭಿಮನ್ಯು ಡಾಗಾ, ಸತೀಶ ಲಾಡ್, ಅವಧೂತ ಸಮಂತ, ದೀಪಕ ಓವುಳಕರ, ಸೂರ್ಯಕಾಂತ, ವಿಜಯ ಭಾಗವತ ಮತ್ತು ಪರಿಸರದ ನಾಗರಿಕರು ಬಹು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪ್ಯಾಸ್ ಫೌಂಡೆಶನ್ ನ ಸೆಕ್ರೆಟರಿ ಡಾ. ಪ್ರೀತಿ ಕೋರೆ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button