Cancer Hospital 2
Beereshwara 36
LaxmiTai 5

ಹಿತವಿದೆ ಹಿತಕರ ವಲಯದಾಚೆ

Anvekar 3

ಜಯಶ್ರೀ ಜೆ. ಅಬ್ಬಿಗೇರಿ

Emergency Service

ಏನೇ ಹೇಳಿ ಉಳಿದೆಲ್ಲ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯನ ಸ್ವಭಾವವೇ ವಿಚಿತ್ರ. ತಾನು ಸುಖದಲ್ಲಿರುವಾಗ ಅಕ್ಕಪಕ್ಕದಲ್ಲಿರುವವರ ಬಗೆಗೆ ಕಿಂಚಿತ್ತೂ ಯೋಚಿಸುವುದಿಲ್ಲ. ಇನ್ನೂ ಹಿತಕರ ವಲಯದಲ್ಲಿ ಇರುವಾಗಲಂತೂ ನೆರೆಯವರ ಬದುಕಿಗೆ ಹೇಗೆ ನೆರವಾಗಬಲ್ಲೆ ಎಂದು ತಿಳಿದುಕೊಳ್ಳಲು ಪುರುಸೊತ್ತಿರುವುದಿಲ್ಲ. ಬೆಳಗಿನ ತಿಂಡಿ ಮನೆಯಲ್ಲಿ, ಮಧ್ಯಾಹ್ನದ ಊಟ ಆಫೀಸ್‌ನಲ್ಲಿ ರಾತ್ರಿಯ ಡ್ರಿಂಕ್ಸ್ ಡಿನ್ನರ್ ಯಾವುದೋ ಮುಗಿಲು ಮುಟ್ಟುವ ಪಂಚತಾರಾ ಹೊಟೆಲ್ಲಿನಲ್ಲಿ. ಹೀಗೆ ಅಮಲಿನಲ್ಲಿ ಇರುವಾಗ ಇತರರ ನೆನಪಾಗುವುದಾದರೂ ಹೇಗೆ? ಚೆನ್ನಾಗಿರುವಾಗ ತನ್ನ ಹಿತಕರ ವಲಯದಲ್ಲಿ ಇರುತ್ತಾನೆ. ನಡುನಡುವೆ ಮಜಾ ಮಸ್ತಿ, ಗಾಳಿಮಾತಿನ ಮಸಾಲೆ ಹಿತವನ್ನು ನೀಡುತ್ತಿರುತ್ತದೆ ಅಂತ ಬೇರೆ ಹೇಳಬೇಕಿಲ್ಲ. ಹಿತಕರ ವಲಯದಲ್ಲಿ ಹೊದ್ದು ಮಲಗಿರುವಾಗ ವ್ಯಕ್ತಿತ್ವ ಬೆಳಗಿಸುವ ಪ್ರತಿಭೆ ಹೊರಬರುವ ಮಾತೆಲ್ಲಿ?
ಸಾಗುವ ದಾರಿ ಸದಾ ಒಂದೇ ತರನಾಗಿ ಇರುವುದಿಲ್ಲ. ಸುತ್ತ ಮುತ್ತ ಮಹತ್ತರ ಪಾತ್ರ ವಹಿಸಿರುವ ಭಿನ್ನ ಪಾತ್ರಗಳು ಎದುರಾಗುತ್ತವೆ. ಆಗ ಕಾಣದ ದ್ವಂದ್ವಗಳು ಕಣ್ಣೆದುರಿಗೆ ಬಂದು ನಿಲ್ಲುತ್ತವೆ. ಇಂಥ ಪರಿಸ್ಥಿತಿಯಲ್ಲಿ ಹಿತಕರ ವಲಯ ಗೌಣವಾಗಿ ಸಮಸ್ಯೆಗಳು ಉದ್ಭವಿಸುತ್ತವೆ. ದ್ವಂದ್ವ ಹುಟ್ಟುತ್ತದೆ ಜತೆಗೆ ಬಿಕ್ಕಟ್ಟು ನಿರ್ಮಾಣವಾಗುವುದು ಸಹಜ. ತೀವ್ರಗತಿಯ ಬದಲಾವಣೆಗಳು ಹಿತಕರ ವಲಯದ ಗಿರಾಕಿಯನ್ನು ಎತ್ತಂಗಡಿ ಮಾಡಿಸುವಲ್ಲಿ ಕೆಲಸ ಮಾಡುತ್ತವೆ. ತಕ್ಷಣದ ಬದಲಾವಣೆಗೆ ಹೊಂದಿಕೊಳ್ಳಲು ಆಗದೇ ಮನಸ್ಸಿಗೆ ಬೇಸರ ಉಂಟಾಗುತ್ತದೆ.


ಕೆಲವೊಮ್ಮೆ ಮನಸ್ಸಿಗಾದ ನೋವುಗಳನ್ನು ಆಘಾತಗಳನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗದೇ ಇದ್ದರೂ ಬೇಸರವಾಗುತ್ತದೆ. ಬೇಸರವಾದಾಗ ಇಲ್ಲ, ನನಗೇನೂ ಆಗಿಲ್ಲ ಎಂಬ ಸಮಜಾಯಿಷಿ ನೀಡುತ್ತೇವೆ. ಇದರಿಂದ ಹೆಚ್ಚೆಂದರೆ ಬೇರೆಯವರನ್ನು ಸಂತುಷ್ಟಗೊಳಿಸಬಹುದೇ ವಿನಃ ನಮ್ಮ ಬೇಸರಕ್ಕೆ ಅಗತ್ಯವಿರುವ ಸಾಂತ್ವನ ಸಮಾಧಾನ ನೀಡಲಾರದು. ಕೆಲವೊಂದು ವಿಷಯಗಳನ್ನು ಹೇಳಲು ಆಗುವುದಿಲ್ಲ. ಮನಸ್ಸಿನಲ್ಲಿ ಮುಚ್ಚಿಟ್ಟುಕೊಳ್ಳಲು ಆಗುವುದಿಲ್ಲ ಅಂತಹ ಸನ್ನಿವೇಶದ ನೋವಿನ ಸ್ಥಿತಿ. ಕೇಳಲೊಂದು ಮನವಿಲ್ಲದ ಹೇಳಿಕೊಳ್ಳಲು ಶಬ್ದವಿಲ್ಲದ ಏನೋ ಒಂಥರ ಮೌನ. ಕಷ್ಟವಾದರೂ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ. ಸಂತಸದ ಸಮಯದಲ್ಲಿ ಚಪ್ಪಾಳೆ ತಟ್ಟುವ ಹತ್ತು ಬೆರಳುಗಳಿಗಿಂತ ಬೇಜಾರಾದ ಸಂದರ್ಭದಲ್ಲಿ ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು ಶ್ರೇಷ್ಠ. ಎಂಬ ಶ್ರೇಷ್ಠ ಮಾತನ್ನೆಂದೂ ಮರೆಯುವಂತಿಲ್ಲ.
ನೊಂದ ಮನಸ್ಸಿಗೆ ಬೆನ್ನು ತಟ್ಟಿ ಬೆಂಬಲಿಸುವ ಒಂದೊಳ್ಳೆಯ ಮಾತು ಅದೆಷ್ಟು ಬದಲಾವಣೆ ತರುತ್ತದೆ. ಪ್ರತಿಭೆ ಮಿನುಗುವಲ್ಲಿ ಹೊರಸೂಸುವಲ್ಲಿ ಮುದ್ದಾದ ಮಾತು ಸಹಕರಿಸುತ್ತದೆ. ಮನಸ್ಸಿಗೆ ಹಿತ ನೀಡುತ್ತದೆ. ಸೋತು ಸುಣ್ಣವಾದಾಗ ನಾನು ನಿನ್ನೊಂದಿಗಿದಿನಿ ಎನ್ನುವ ಪುಟ್ಟ ಭರವಸೆಯ ಮಾತು ಮತ್ತೆ ಚಿಗುರುವಂತೆ ಮಾಡುತ್ತದೆ. ಮನಸ್ಸೆಂಬ ಒಣಗಿದ ಕೊಳದಲ್ಲಿ ಸ್ಪೂರ್ತಿಯ ಸೆಲೆಯನ್ನು ಪುನಃ ಜಿನುಗಿಸುತ್ತದೆ. ನಾನು ಗೆದ್ದೆ ಗೆಲ್ಲುವೆನೆಂಬ ಅಗಾಧವಾದ ನಂಬಿಕೆಯನ್ನು ಹುಟ್ಟಿಸುತ್ತದೆ. ಇದರರ್ಥ ಇಷ್ಟೆ ಅವಶ್ಯಕತೆ ಇದ್ದಾಗ ಪುಟ್ಟ ಸಾಧನೆಗೂ ಸಹ ದೊಡ್ಡ ಅಭಿನಂದನೆ ಸಲ್ಲಿಸಿದರೆ ದೊಡ್ಡ ಸಾಧನೆಗೆ ನಾಂದಿ ಹಾಡಿದಂತೆಯೇ ಸರಿ. ಹಿತಕರ ವಲಯದಾಚೆ ಬಂದರೆ ಹಿತವಿದೆ. ಅದು ನಮ್ಮ ಒಳನೋಟವನ್ನು ನಿಧಾನವಾಗಿ ಬದಲಿಸುತ್ತದೆ. ಒಳನೋಟ ಬದಲಾದರೆ ಬದುಕಿನ ದೋಣಿ ಕ್ಷೇಮವಾಗಿ ದಡ ಸೇರುವಲ್ಲಿ ಸಂಶಯವೇ ಇಲ್ಲ.

Bottom Add3
Bottom Ad 2