
*ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದಕ್ಕೆ ಅವರ ಕೇಂದ್ರ ನಾಯಕರ ನಿರಂತರ ರಾಜ್ಯ ಪ್ರವಾಸವೇ ಸಾಕ್ಷಿ: ಡಿ.ಕೆ. ಶಿವಕುಮಾರ್ ವ್ಯಂಗ್ಯ*
*ಬೆಂಗಳೂರು:* ‘ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ರಾಜ್ಯದ ಜನ ತೀರ್ಮಾನಿಸಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರ ಪಕ್ಷದ ನಾಯಕರಿಗೇ ಅರಿವಾಗಿದೆ. ಇದೇ ಕಾರಣಕ್ಕೆ ಪದೇ ಪದೆ ಬಿಜೆಪಿ ಕೇಂದ್ರ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ಮೋದಿ ಅವರು ಈ ದೇಶದ ಪ್ರಧಾನಮಂತ್ರಿಗಳು. ಅವರು ಎಷ್ಟು ಬಾರಿಯಾದರೂ ರಾಜ್ಯಕ್ಕೆ ಭೇಟಿ ನೀಡಬಹುದು. ಆದರೆ ಕರ್ನಾಟಕದ ಚುನಾವಣೆ ಸಮಯದಲ್ಲಿ ಪಕ್ಷದ ಪ್ರಚಾರಕ್ಕೆ ಹೆಚ್ಚು ಆಗಮಿಸುತ್ತಿದ್ದು, ಅವರ ಪಕ್ಷ ರಾಜ್ಯದಲ್ಲಿ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅವರು ಈ ರೀತಿ ಎಲ್ಲ ಪ್ರಯತ್ನ ಮಾಡುತ್ತಾ ಪರೋಕ್ಷವಾಗಿ ಸೋಲನ್ನು ಒಪ್ಪಿಕೊಳ್ಳುತ್ತಿದ್ದಾರೆ. ರಾಜ್ಯದ ಜನರು ಪ್ರಜ್ಞಾವಂತರು. ಮೋದಿ ಅವರು ಎಷ್ಟು ಬಾರಿ ಬಂದರೂ ಜನ ಈಗಾಗಲೇ ಈ ಸರ್ಕಾರ ಕಿತ್ತೊಗೆಯಲು ತೀರ್ಮಾನ ಮಾಡಿದ್ದಾರೆ. ಬಿಜೆಪಿ ಪ್ರಚಾರಕ್ಕೆ ಜನ ಸೇರುತ್ತಿಲ್ಲ ಎಂದು ಚಿತ್ರ ನಟರನ್ನೂ ಪ್ರಚಾರಕ್ಕೆ ಕರೆಯುತ್ತಿದ್ದಾರೆ.’
*ಆಟೋ ಚಾಲಕರಿಗೆ ಕಿರುಕುಳ:*
‘ಇತ್ತೀಚೆಗೆ ಆಟೋ ಚಾಲಕರನ್ನು ನಾನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದ ಅವರ ಬದುಕಿನ ಮೇಲೆ ಬರೆ ಬಿದ್ದಿದೆ. ಚುನಾವಣೆ ಸಮಯದಲ್ಲಿ ಆಟೋ ಚಾಲಕರು ತಮಗೆ ಬೇಕಾದ ಪಕ್ಷದ ಅಭ್ಯರ್ಥಿ ಹಾಗೂ ಕಾರ್ಯಕ್ರಮಗಳನ್ನು ತಮ್ಮ ಆಟೋ ಮೇಲೆ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಬಹುತೇಕ ಆಟೋ ಚಾಲಕರು ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇಂತಹ ಆಟೋ ಚಾಲಕರ ಮೇಲೆ 5 ಸಾವಿರ ದಂಡ ಹಾಕಲಾಗುತ್ತಿದೆ. ಆಟೋಗಳ ಮೇಲೆ ಪಕ್ಷದ ಪರ ಹಾಕಿಕೊಳ್ಳಬಾರದು ಎಂದು ಯಾವ ಕಾನೂನಿನಲ್ಲಿದೆ? ಆಯೋಗದವರು ಬೇಕಾದರೆ ಆಟೋ ಚಾಲಕರಿಗೆ ಬಾಯಿ ಮಾತಲ್ಲಿ ತಿಳುವಳಿಕೆ ಹೇಳಲಿ. ಆದರೆ ಮೂರ್ನಾಲ್ಕು ದಿನ ಆಟೋ ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸುತ್ತಿರುವುದೇಕೆ? ರಾಜ್ಯದ ಎಲ್ಲ ಆಟೋ ಚಾಲಕರ ಪರವಾಗಿ ನಾವು ನಿಲ್ಲುತ್ತೇವೆ. ಯಾರಿಗೂ ತೊಂದರೆ ನೀಡದಂತೆ ಆಗ್ರಹಿಸುತ್ತೇನೆ. ಅವರನ್ನು ಬಳಸಿಕೊಳ್ಳುತ್ತಿರುವ ಬೇರೆ ಪಕ್ಷದವರು ಅವರ ರಕ್ಷಣೆಗೆ ಬರುತ್ತಿಲ್ಲ. ಆಟೋ ಚಾಲಕರು ಯಾವುದೇ ಪಕ್ಷದ ಪರವಾಗಿ ಬೇಕಾದರೂ ಪ್ರಚಾರ ಮಾಡಲಿ. ಅವರಿಗೆ ಈ ರೀತಿ ಕಿರುಕುಳ ನೀಡಿದರೆ ಅವರ ಪರವಾಗಿ ನಾವು ನಿಲ್ಲುತ್ತೇವೆ. ಆಟೋ ಚಾಲಕರು ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಧೈರ್ಯವಾಗಿರಬೇಕು. ತಮ್ಮ ಹಕ್ಕು, ವಿಚಾರವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ನಾನು ಪೊಲೀಸ್ ಆಯುಕ್ತರು ಹಾಗೂ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಇದಕ್ಕೆ ನಿರ್ಬಂಧ ಹೇರುವ ಕಾನೂನು ಇಲ್ಲ, ಹೀಗಾಗಿ ಆಟೋ ಚಾಲಕರಿಗೆ ಕಿರುಕುಳ ನೀಡಬಾರದು ಎಂದು ಆಗ್ರಹಿಸುತ್ತೇನೆ.’
ಹಲವು ಕ್ಷೇತ್ರಗಳಲ್ಲಿ ಅನೆಕ ಆಕಾಂಕ್ಷಿಗಳಿದ್ದು, ಎಲ್ಲರನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ನೂರಾರು ಹೊಳೆ, ನದಿಗಳು ಸೇರುತ್ತವೆ. ಅನೇಕರಿಗೆ ತಾವು ನಾಯಕರಾಗಬೇಕು ಎಂದು ಆಸೆ ಹೊಂದಿರುತ್ತಾರೆ. ಹೀಗಾಗಿ ಕೆಲವರಿಗೆ ಬೇಸರವಾಗಿರುತ್ತದೆ. ಜೆಡಿಎಸ್ ನಿಂದ ಅನೇಕ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ನಾಳೆ ಶಿವಲಿಂಗೇಗೌಡರೂ ಕೂಡ ಕಾಂಗ್ರೆಸ್ ಸೇರುತ್ತಿದ್ದಾರೆ’ ಎಂದು ತಿಳಿಸಿದರು.
ಅಮೂಲ್ ವಿವಾದದ ಬಗ್ಗೆ ಕೇಳಿದಾಗ, ‘ನಂದಿನಿ ನಮ್ಮ ರೈತರ ಸಂಸ್ಥೆ. ರಾಜ್ಯದ 80 ಲಕ್ಷ ರೈತರು ಅಧಿಕೃತವಾಗಿ ಸಹಕಾರ ಸಂಸ್ಥೆ ಸದಸ್ಯತ್ವ ಪಡೆದು ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಈಗ ಅವರಿಗೆ ಕಡಿಮೆ ಬೆಲೆ ನೀಡುತ್ತಿದ್ದಾರೆ. ಜಾನುವಾರುಗಳ ಮೇವಿನ ಬೆಲೆ ಹೆಚ್ಚಾಗಿದ್ದರೂ ಹಾಲಿನ ದರ ಹೆಚ್ಚಳ ಮಾಡಿ ಅವರಿಗೆ ನೇರವು ನೀಡಲು ಆಗಿಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಅದನ್ನು ಮಾಡುತ್ತಿಲ್ಲ. ನಮ್ಮ ನಂದಿನಿ ಸಂಸ್ಥೆಯ ಬ್ಯ್ರಾಂಡ್ ಗೆ ಏನು ಕಡಿಮೆಯಾಗಿದೆ? ಗುಜರಾತಿನಿಂದ ಇಲ್ಲಿಗೆ ತಂದು ಮಾರಾಟ ಮಾಡುತ್ತಿರುವುದೇಕೆ? ನಮ್ಮ ರೈತರಿಗೆ ನಾವು ಬೆಂಬಲ ಬೆಲೆ ನೀಡಿ ಅವರ ರಕ್ಷಣೆ ಮಾಡಬೇಕಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಬಿಜೆಪಿ ಸರ್ಕಾರ, ಸಹಕಾರಿ ಸಚಿವರಿಗೆ ಈ ಅಮೂಲ್ ಉತ್ಪನ್ನಗಳ ಅತಿಕ್ರಮಣವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯವರು ಈ ವಿಚಾರವಾಗಿ ಕೈಗೆ ಬಳೆ ತೊಟ್ಟುಕೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೇಲೆ ಇಡಿ ದುರ್ಬಳಕೆ ಮಾಡಿಕೊಳ್ಳಲು ಪಿತೂರಿ ನಡೆಯುತ್ತಿದೆ. ಚುನಾವಣೆ ಸಮಯದಲ್ಲಿ ನೇಮಕ ಮಾಡಿರುವ ಪೊಲೀಸ್ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ. ಇಂತಹ ಪೊಲೀಸ್ ಅಧಿಕಾರಿಗಳ ಪಟ್ಟಿ ಮಾಡುವಂತೆ ತಿಳಿಸಿದ್ದೇನೆ. ಇನ್ನು 40 ದಿನಗಳು ಮಾತ್ರ ಈ ರೀತಿ ಮಾಡಲು ಸಾಧ್ಯ.
ಸರ್ಕಾರ ಮೀಸಲಾತಿ ನೀಡಲು ಇಚ್ಛೆ ಇದ್ದರೆ ನೀಡಲಿ. ಆಧರೆ ಬೇರೆಯವರ ಮೀಸಲಾತಿಯನ್ನು ಕಿತ್ತು ನೀಡುತ್ತಿರುವುದೇಕೆ. ಇನ್ನು ಅಲ್ಪಸಂಖ್ಯಾತ ಸಮುದಾಯದವರು ಈ ದೇಶದ ಭಾಗ, ಸಂವಿಧಾನದ ಭಾಗವಾಗಿದ್ದಾರೆ. ಅವರನ್ನು ಸಾಮಾನ್ಯ ವರ್ಗಕ್ಕೆ ಸೇರಿಸುತ್ತಿರುವುದೇಕೆ? ಸರ್ಕಾರ ಮೀಸಲಾತಿ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಯಾವುದೇ ಮೀಸಲಾತಿಯನ್ನು ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸುತ್ತಿಲ್ಲ. ಕೇವಲ ಚುನಮಾವಣೆ ಉದ್ದೇಶದಿಂದ ಈ ಮೀಸಲಾತಿ ಘೋಷಣೆ ಮಾಡಿದ್ದು, ಇದನ್ನು ಜಾರಿಗೆ ತರಲು ಸಂಸತ್ತಿಗಾಗಲಿ, ರಾಷ್ಟ್ರಪತಿಗಳಿಗಾಗಲಿ ಕಳುಹಿಸುತ್ತಿಲ್ಲ.
ಸತ್ಯಮೇವ ಜಯತೆ ಕಾರ್ಯಕ್ರಮದ ಬಗ್ಗೆ ಕೇಳಿದಾಗ, ‘ಪಕ್ಷದ ಅಭ್ಯರ್ಥಿ ತೀರ್ಮಾನ ವಿಚಾರವಾಗಿ ನಮಗೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ. ದೆಹಲಿ ನಾಯಕರು ನಮಗೆ ದಿನಾಂಕ ತಿಳಿಸಿದ ನಂತರ ನಾವು ಕಾರ್ಯಕ್ರಮ ಮಾಡುತ್ತೇವೆ’ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ