Kannada NewsKarnataka NewsLatest

*ದಾಂಡೇಲಿ ನಗರಸಭಾ ಮಾಜಿ ಅಧ್ಯಕ್ಷ ಹರೀಶ ನಾಯ್ಕ ವಿಧಿವಶ*

ಪ್ರಗತಿವಾಹಿನಿ ಸುದ್ದಿ; ದಾಂಡೇಲಿ: ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು, ಸಿಐಟಿಯುನ ರಾಜ್ಯ ಉಪಾಧ್ಯಕ್ಷರು, ದಾಂಡೇಲಿ ನಗರಸಭಾ ಮಾಜಿ ಅಧ್ಯಕ್ಷ ಹರೀಶ ನಾಯ್ಕ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಜೋಯಿಡಾದ ರಾಮನಗರದಲ್ಲಿರುವ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಸಂಜೆ 5 ಗಂಟೆವರೆಗೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅವರು ಕೆಎಲ್ ಇ ಗೆ ದೇಹದಾನ ಪತ್ರಕೂಡ ಮಾಡಿದ್ದಾರೆಂದು ತಿಳಿದಿದೆ. ಅವರಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿ ಅಂತಿಮ ಕೆಂಪು ನಮನ ಸಲ್ಲಿಸುತ್ತಿದೆ.

ಕಾ. ಹರೀಶ್ ನಾಯ್ಕ ಸ್ವತಃ ಲೇಖಕರು, ಕವಿಗಳು, ಕಾರ್ಮಿಕ ಕಾನೂನುಗಳ ಅರಿತವರು ಹೌದು. ಜಿಲ್ಲೆಯಲ್ಲಿ ಕಾರ್ಮಿಕ ಚಳುವಳಿಯನ್ನು ಕಟ್ಟುವಲ್ಲಿ ಇವರ ಪಾತ್ರ ಮಹತ್ವದ್ದು. ರಾಜ್ಯದ ಕೆಲವೆಡೆ ಕೂಡ ಕಾರ್ಮಿಕ ಸಂಘಟನೆಗೆ ಮಾರ್ಗದರ್ಶನ ಮಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ಘಟಕದ ಅಧ್ಯಕ್ಷರಾಗಿದ್ದರು.

ಹರೀಶರು ಮೂಲತಃ ಕಾರವಾರದವರು. ಸ್ನಾತಕೋತ್ತರ ಪದವಿ ಪಡೆದ ಇವರು ದಾಂಡೇಲಿ ಪೇಪರ್ ಮಿಲ್ ನಲ್ಲಿ ಕಾರ್ಮಿಕರಾಗಿ ಕಾರ್ಮಿಕ ನಾಯಕರಾಗಿ ಸೇವೆ ಸಲ್ಲಿಸಿದರು.
ಮಾತ್ರವಲ್ಲ ದಾಂಡೇಲಿ ನಗರ ಸಭೆಗೆ ಉಪಾಧ್ಯಕ್ಷರಾಗಿ ಹಂಗಾಮಿ ಅಧ್ಯಕ್ಷರಾಗಿ ಜನತೆಯ ಸೇವೆಯನ್ನು ಮಾಡಿದ್ದಾರೆ.

ಸಿಐಟಿಯು ಜಿಲ್ಲಾ ಸಮಿತಿ ಮೊದಲ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಎರಡು ಬಾರಿ ಹೀಗೆ ಮೂರು ಅವಧಿಗೆ ಅಧ್ಯಕ್ಷರಾಗಿದ್ದರು. ಪೌರ ಕಾರ್ಮಿಕರ ಸಂಗಹದ ರಾಜ್ಯ ಅಧ್ಯಕ್ಷರಾಗಿ, ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಪ್ರಾರಂಭದಲ್ಲಿ ಹಂಚು ಕಾರ್ಮಿಕರ ಸಂಘ, ಪಂಚಾಯತ್ ಕಾರ್ಮಿಕರು, ಕಾರವಾರದಲ್ಲಿ ಗ್ರಾಸಿಂ ಗುತ್ತಿಗೆ ಕಾರ್ಮಿಕರ ಸಂಘ, ಕದ್ರಾ, ಅಂಬಿಕಾನಗರ, ಗಣೇಶ್ ಗುಡಿ ವಿದ್ಯುತ್ ಗುತ್ತಿಗೆ ಕಾರ್ಮಿಕರ ಸಂಘ, ಕೈಗಾ ಅಣು ವಿದ್ಯುತ್ ಸ್ಥಾವರ ಗುತ್ತಿಗೆ ಕಾರ್ಮಿಕರ ಸಂಘ, ವನ್ಯಜೀವಿ ಗುತ್ತಿಗೆ ಕಾರ್ಮಿಕರ ಸಂಘ, ಕಟ್ಟಡ ಕಾರ್ಮಿಕರು ಮತ್ತು ಗ್ರಾಮೀಣ ಕೆಲಸಗಾರರ ಸಂಘ ಹೀಗೆ ಅನೇಕ ವಿಭಾಗದ ಕಾರ್ಮಿಕರನ್ನು ಸಂಘಟಿಸುವಲ್ಲಿ ನಾಯಕತ್ವ ನೀಡುವಲ್ಲಿ ಇವರ ಪಾತ್ರ ಸ್ಮರಣೀಯ. ಅಂಗನವಾಡಿ ನೌಕರರು, ಅಕ್ಷರದಾಸೋಹ, ಆಶಾ ನೌಕರರ ಹೋರಾಟ ಗಳಿಗೆ ಮಾರ್ಗದರ್ಶನ ಮಾಡಿದ್ದರು. ಹಳಿಯಾಳ ರೈತ ಹೋರಾಟದಲ್ಲಿ ಮಾವಳಂಗಿ ಭೂಮಿ ಹೋರಾಟದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button