Kannada NewsKarnataka NewsLatest

*ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ಅವಕಾಶ*: *ನಾಳೆ ದೇವಾಲಯದ ಗರ್ಭಗುಡಿ ಬಂದ್‌*

ಪ್ರಗತಿವಾಹಿನಿ ಸುದ್ದಿ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ಕೊನೆಯ ದಿನ. ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಕೊನೆಯ ದಿನವಾದ ಇಂದು ನಿರೀಕ್ಷೆಗೂ ಮೀರಿ ಭಕ್ತರು ಹರಿದುಬರುವ ಸಾಧ್ಯತೆಯಿದೆ. ದರ್ಶನಕ್ಕೆ 10ರಿಂದ 12 ಗಂಟೆಗಳವರೆಗೆ ಕಾಯಬೇಕಾಗಬಹುದು ಎಂದು ಜಿಲ್ಲಾಡಳಿತವೇ ಮುನ್ನೆಚ್ಚರಿಕೆ ನೀಡಿದೆ.

ಕೊನೆಯ ದಿನ ಭಕ್ತಸಾಗರದ ನಿರೀಕ್ಷೆ!

ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವ ಹೊಸ ದಾಖಲೆ ನಿರ್ಮಿಸಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದಿದ್ದು, ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹವಾಗಿದೆ. ಕೊನೆಯ ದಿನವಾದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ದರ್ಶನ ವಿಳಂಬವಾದರೂ ಬರುವ ಎಲ್ಲ ಭಕ್ತರಿಗೂ ದೇವಿಯ ದರ್ಶನ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ಭರವಸೆ ನೀಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಭಕ್ತರಿಗೆ ಮನವಿ ಮಾಡಿದ್ದಾರೆ. ಕೊನೆಯ ದಿನ ಜನದಟ್ಟಣೆ ಹೆಚ್ಚಿರುವುದರಿಂದ 10ರಿಂದ 12 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಭಕ್ತರು ಮಾನಸಿಕವಾಗಿ ಸಿದ್ಧರಾಗಿ ಬರಬೇಕು ಎಂದು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 6ರಿಂದ ಸಂಜೆ 7ರವರೆಗೆ ನಿರಂತರವಾಗಿ 11 ಗಂಟೆಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ. ಸಂಜೆ 7ರಿಂದ ಮಧ್ಯರಾತ್ರಿ 1ರವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ಭಕ್ತರು ಸರತಿ ಸಾಲಿನಲ್ಲೇ ಕಾಯಬೇಕಾಗುತ್ತದೆ. ಮಧ್ಯರಾತ್ರಿ 1ರಿಂದ ಬುಧವಾರ ಬೆಳಿಗ್ಗೆ 7ರವರೆಗೆ ಮತ್ತೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಾಳೆ ಗಣ್ಯರಿಗೆ ಮಾತ್ರ ವಿಶೇಷ ದರ್ಶನ!

ಬುಧವಾರ ಬೆಳಿಗ್ಗೆ 8ರಿಂದ 10ರವರೆಗೆ ಗೋಲ್ಡ್ ಪಾಸ್ ಹೊಂದಿರುವವರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಪ್ರೋಟೋಕಾಲ್ ಪ್ರಕಾರ ದರ್ಶನ ಕಲ್ಪಿಸಲಾಗುತ್ತದೆ. ಈ ಸಮಯದಲ್ಲಿ ಧರ್ಮದರ್ಶನ ಹಾಗೂ 1,000 ಮತ್ತು 300 ರೂಪಾಯಿ ವಿಶೇಷ ದರ್ಶನದ ಸಾಲಿನಲ್ಲಿರುವ ಭಕ್ತರಿಗೆ ದರ್ಶನ ವಿಳಂಬವಾಗುವ ಸಾಧ್ಯತೆಯಿದೆ.

ಬುಧವಾರ ಮಧ್ಯಾಹ್ನ 12 ಗಂಟೆಯ ನಂತರ ವಿಶ್ವರೂಪ ದರ್ಶನದ ಬಳಿಕ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಹೀಗಾಗಿ ಈ ವರ್ಷದ ಜಾತ್ರಾ ಮಹೋತ್ಸವದ ಸಾರ್ವಜನಿಕ ದರ್ಶನಕ್ಕೆ ಇಂದು ಕೊನೆಯ ಅವಕಾಶವಾಗಿದೆ. ಭಕ್ತರ ನೂಕುನುಗ್ಗಲು ಮತ್ತು ಗೊಂದಲ ತಪ್ಪಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿವೆ.

Related Articles

Back to top button