*ಹಾಸನಾಂಬೆ ದೇವಾಲಯದ ಬಾಗಿಲು ಓಪನ್*: *ಒಂದು ವರ್ಷದಿಂದ ಉರಿಯುತ್ತಲೇ ಇದೆ ನಂದಾದೀಪ*; *ಬಾಡದ ದೇವರಿಗೆ ಮುಡಿಸಿದ ಹೂವು*

ಪ್ರಗತಿವಾಹಿನಿ ಸುದ್ದಿ: ಹಾಸನದ ಶಕ್ತಿ ದೇವತೆ ಪ್ರಸಿದ್ಧ ಹಾಸನಾಂಬ ದೇವಿಯ ದರ್ಶನೋತ್ಸವ ಹಿನ್ನೆಲೆಯ್ಲಲ್ಲಿ ಇಂದು ಹಾಸನಾಂಬ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರಯಲಾಗಿದೆ.
ವರ್ಷಕ್ಕೊಮ್ಮೆ ಮಾತ್ರ ತೆರೆಯುವ ದೇವಾಲಯದ ಗರ್ಭಗುಡಿಯನ್ನು ಪುರಾತನ ಸಂಪ್ರದಾಯದಂತೆ ತೆರೆಯಲಾಗಿದೆ. ತಾಯಿ ಹಾಸನಾಂಬೆಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದು, ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನೆರವೇರಿವೆ.
ಬಾಳೆಕಂಬವನ್ನು ಕಡಿದ ಬಳಿಕ ಗರ್ಭಗುಡಿಯ ಬಾಗಿಲು ತೆರೆಯಲಾಗಿದ್ದು, ದೇವಾಲಯದ ಗರ್ಭಗುಡಿಯಲ್ಲಿ ನಂದಾಅದೀಪ ಒಂದು ವರ್ಷದಿಂದ ಉರಿಯುತ್ತಲೇ ಇರುವುದು ಕಂಡುಬಂದಿದೆ. ದೇವರಿಗೆ ಏರಿಸಿದ್ದ ಹೂಗಳು ಕೂಡ ಈಗತಾನೆ ಪೂಜೆ ಸಲ್ಲಿಸಿದಂತೆ ಬಾಡದೇ ಇರುವುದು ಅಚ್ಚರಿ ಉಂಟುಮಾಡುವಂತಿತ್ತು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಮುಜರಾಯಿ ಸಚಿವ ಬಸವಂತಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಗರುಡ ದರ್ಶನದೊಂದಿಗೆ ದೇವಾಲಯದ ವಾರ್ಷಿಕ ಆಚರಣೆಗಳಿಗೆ ಮತ್ತಷ್ಟು ಮಹತ್ವ ದೊರೆಯಲಿದ್ದು, ಕರ್ನಾಟಕದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿರುವ ಹಾಸನಾಂಬ ದೇವಿಯ ದರ್ಶನೋತ್ಸವವು ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರನ್ನು ಆಕರ್ಷಿಸುತ್ತಿದೆ. ಭಕ್ತರು ತಾಯಿಯ ದರ್ಶನ ಪಡೆದು ಆಶೀರ್ವಾದ ಪಡೆಯಲು ಉತ್ಸುಕರಾಗಿದ್ದಾರೆ.
ಇಂದಿನಿಂದ 11 ದಿನಗಳ ಕಾಲ ಹಾಸನಾಂಬಾ ದೇವಿ ದರ್ಶನೋತ್ಸವ ನಡೆಯಲಿದೆ. ಇಂದು ಪೂಜಾಕೈಖರ್ಯ ಹಿನ್ನೆಲೆಯಲ್ಲಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ನಾಳೆ ಬೆಳಿಗ್ಗೆ 6 ಗಂಟೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



