*ಆಸ್ಪತ್ರೆ ಶೌಚಾಲಯದಲ್ಲೇ ಹೆರಿಗೆಯಾದ ಮಹಿಳೆ: ವೈದ್ಯರ ನಿರ್ಲಕ್ಷಕ್ಕೆ ನವಜಾತ ಶಿಶು ಸಾವು; ಬಾಣಂತಿ ಸ್ಥಿತಿ ಗಂಭೀರ*
ಪ್ರಗತಿವಾಹಿನಿ ಸುದ್ದಿ: ಹೆರಿಗೆ ನೋವಿಂದ ಜಿಲ್ಲಾಸ್ಪತ್ರೆಗೆ ಬಂದ ಮಹಿಳೆಯನ್ನು ಅಡ್ಮಿಟ್ ಮಾಡದೇ, ಪ್ರಥಮ ಚಿಕಿತ್ಸೆಯನ್ನೂ ನೀಡದೇ ವೈದ್ಯರು, ನರ್ಸ್ ಗಳು ಸತಾಯಿಸಿದ್ದು, ಹೆರಿಗೆಯಾದ ಮರುಕ್ಷಣವೇ ನವಜಾತ ಶಿಶು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ತುಂಬು ಗರ್ಭಿಣಿ ಹೆರಿಗೆ ನೋವಿಂದ ಬಳಲುತ್ತಿದ್ದರು. ಕುಟುಂಬದವರು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆತಂದರೆ ಬಡಮಹಿಳೆಯನ್ನು ಅಡ್ಮಿಟ್ ಮಾಡಿಕೊಳ್ಳುವುದು ಹಾಗಿರಲಿ, ಕನಿಷ್ಟ ಪ್ರಥಮ ಚಿಕಿತ್ಸೆಯನ್ನೂ ನೀಡದೇ ನಿರ್ಲಕ್ಷ ಮಾಡಿ ಆಸ್ಪತ್ರೆಯಲ್ಲಿ ನೆಲದಲ್ಲೇ ಕೂರಿಸಿದ್ದಾರೆ. ಒಂದು ಗಂಟೆಗಳ ಕಾಲ ನೆಲದ ಮೇಲೆಯೇ ಹೆರಿಗೆ ನೋವಲ್ಲ ಒದ್ದಾಡಿದ ಮಹಿಳೆ ಮೇಲೆ ವೈದ್ಯಕೀಯ ಸಿಬ್ಬಂದಿ ಕಿಂಚಿತ್ತೂ ಕರುಣೆ ತೋರಿಲ್ಲ. ವೈದ್ಯರು ಊಟಕ್ಕೆ ಹೋಗಿದ್ದಾರೆ, ನಾಷ್ಟಾಗೆ ಹೋಗಿದ್ದಾರೆ, ಎಂದು ನೆಪ ಹೇಳಿ ಕಾಲಹರಣ ಮಾಡಿದ್ದಾರೆ.
ಹೆರಿಗೆ ನೋವು ತಾಳಲಾರದೇ ಮಹಿಳೆ ಶೌಚಾಲಯಕ್ಕೆ ಹೋಗಿದ್ದಾಳೆ. ಆಸ್ಪತ್ರೆಯ ಶೌಚಾಲಯದಲ್ಲಿಯೇ ಮಹಿಳೆ ಹೆರಿಗೆಯಾಗಿದ್ದು, ಮಗು ಕೆಳಗೆ ಬೀಳುತ್ತಿದಂತೆ ಮಗುವಿಗೆ ಗಂಭೀರ ಪೆಟ್ಟಾಗಿ ಮಗು ಸಾವನ್ನಪ್ಪಿದೆ. ಬಾಣಂತಿ ಸ್ಥಿತಿ ಗಂಭೀರವಾಗಿದೆ.
ಜಿಲ್ಲಾಸ್ಪತ್ರೆಯ ವೈದ್ಯರು, ನರ್ಸ್ ಗಳ ನಿರ್ಲಕ್ಷಕ್ಕೆ ನವಜಾತ ಶಿಶು ಜನಿಸುತ್ತಿದ್ದಂತೆಯೇ ಸಾವನ್ನಪ್ಪಿದ್ದು, ವೈದ್ಯರ ವಿರುದ್ಧ ಕುಟುಂಬದಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕುಟುಂಬದವರು ಪ್ರತಿಭಟನೆ ನಡೆಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.



