ಪ್ರಗತಿವಾಹಿನಿ ಸುದ್ದಿ; ಹಾವೇರಿ: ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಸಜೀವ ದಹನಗೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿಯ ಸಾತೇನಹಳ್ಳಿ ಬಳಿ ಕುಮಾರ್ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಈ ದುರಂತ ಸಂಭವಿಸಿದೆ. ಪಟಾಕಿ ಗೋದಾಮಿನ ಪಕ್ಕದಲ್ಲಿಯೇ ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು. ವೆಲ್ಡಿಂಗ್ ವೇಳೆ ಬೆಂಕಿಯ ಕಿಡಿಯೊಂದು ಪಟಾಕಿ ಗೋದಾಮಿಗೆ ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಪಟಾಕಿ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಇಂದು ಮಧ್ಯಾಹ್ನ ಈ ದುರಂತ ಸಂಭವಿಸಿದ್ದು, ಬೆಂಕಿ ಅವಘಡದ ವೇಳೆ ಮೂವರು ಕಾರ್ಮಿಕರು ನಾಪತ್ತೆಯಾಗಿದ್ದರು. ಇದೀಗ ಮೂವರ ಮೃತದೇಹ ಪತ್ತೆಯಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ.
8 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದು, ಪಟಾಕಿ ಗೋದಾಮಿನಲ್ಲಿ ಅಪಾರ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಿದ್ದರಿಂದ ಬೆಂಕಿಯ ಕೆನ್ನಾಲಿಗೆಗೆ ಪಟಾಕಿಗಳು ನಿರಂತರವಾಗಿ ಸಿಡಿಯುತ್ತಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಇನ್ನು ಘಟನೆಯಲ್ಲಿ ನಾಪತ್ತೆಯಾಗಿದ್ದ ಮೂವರು ಕಾರ್ಮಿಕರ ಮೃತದೇಹ ಪತ್ತೆಯಾಗಿದ್ದು, ದ್ಯಾಮಪ್ಪ ಓಲೆಕಾರ, ರಮೇಶ ಬರ್ಕಿ, ಶಿವಲಿಂಗ ಅಕ್ಕಿ ಮೃತರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ರಘುನಂದಮೂರ್ತಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ