*ಸ್ವಸ್ಥ ಭಾರತ, ಸ್ವಚ್ಛ ಭಾರತ ಇಂದಿನ ಅಗತ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸ್ವಯಂ ಸೇವಾ ಸಂಸ್ಥೆ ಆರ್ ಸಿಎಂ ಸ್ವಸ್ಥ ಭಾರತ ಮತ್ತು ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಕಳೆದ 25 ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ. ಇದು ಇಂದಿನ ಅಗತ್ಯ ಕೂಡ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮರಾಠಾ ಮಂಗಲ ಕಾರ್ಯಾಲಯದಲ್ಲಿ ಶನಿವಾರ ನಡೆದ ಆರ್ ಸಿಎಂ ಸಂಸ್ಥೆಯ 25ನೇ ವರ್ಷದ ಸಂಭ್ರಮಾಚರಣೆ ಹಾಗೂ ಜಾಗೃತಿ ರ‍್ಯಾಲಿಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 25 ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಆರೋಗ್ಯ ಕಾಳಜಿ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಹಾಗೂ ಶಿಕ್ಷಣದ ಮೂಲಕ ಅನೇಕ ಜನರ ಜೀವನದಲ್ಲಿ ಬದಲಾವಣೆಯನ್ನು ತರುತ್ತಿದೆ. ರಕ್ತದಾನ ಶಿಬಿರ, ವ್ಯಸನಮುಕ್ತ ಅಭಿಯಾನ, ಸ್ಯಾನಿಟರಿ ಹೈಜಿನ್ ಜಾಗೃತಿ ಶಿಬಿರಗಳಂತಹ ಕಾರ್ಯಗಳು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನಷ್ಟು ಜನ ಜೀವನಕ್ಕೆ ಬೆಳಕು ನೀಡಲಿ ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಜಯ ದೊರೆನ್ನವರ್, ಮುಖೇಶ್ ಕೊಟಾರಿ, ಪರಶುರಾಮ ಪಾಟೀಲ, ಕಟಾವಕರ್, ರಾಹುಲ್ ಕಾಂಬಳೆ, ಜ್ಯೋತಿಬಾ ಕಡೋಲ್ಕರ್, ಅಂಜಲಿ ಕೊಟಾದಿ, ಶ್ರೇಯಾ ದೊರೆನ್ನವರ್, ಶಿವಾಜಿ ಕಾಂಬಳೆ ಹಾಗೂ ಅನೇಕರು ಉಪಸ್ಥಿತರಿದ್ದರು.