ಗಿರೀಶ್ ಭಟ್
ವಿಶ್ವದಲ್ಲಿ ಭಾರತವನ್ನು ಎತ್ತರಿಸಿದ ಭಾರತದ ಪ್ರಧಾನಿ ಮೋದಿಯವರಿಗೀಗ ಎಪ್ಪತ್ತರ ಹರುಷ
ಸೆಪ್ಟೆಂಬರ್ ೧೭ ರಂದು ನಮ್ಮ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿಯವರು ೭೦ ನೇ ಜನ್ಮದಿನಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಭಾರತವನ್ನು ವಿಶ್ವದೆಲ್ಲೆಡೆ ಎತ್ತರಿಸಿದ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಈ ಲೇಖನ.
ಎಪ್ಪತ್ತರ ವಯಸ್ಸಿನಲ್ಲೂ ನರೇಂದ್ರ ಮೋದಿಯವರ ಹುಮ್ಮಸ್ಸು, ಅವರ ಕಾರ್ಯ ವೈಖರಿ ದೇಶದ ಜನರಿಗೆಲ್ಲ ಸ್ಪೂರ್ತಿಯಾಗಿದೆ. ಅವರು ಭಾರತವನ್ನು ಇನ್ನಷ್ಟು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಇನ್ನೂ ಬಹಳಷ್ಟು ವರ್ಷಗಳ ಕಾಲ ಪ್ರಧಾನಿಯಾಗೇ ಇರಲಿ ಮತ್ತು ಅವರಿಗೆ ದೇವರು ದೇಶವನ್ನಾಳಲು ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸೋಣ. ಏಕೆಂದರೆ ನಾವು ಕ್ರಿಕೆಟ್ ಆಟಗಾರರನ್ನು, ಸಿನಿಮಾ ನಾಯಕ-ನಾಯಕಿಯರನ್ನು ಇಷ್ಟಪಡುತ್ತೇವೆ. ಕ್ರಿಕಟ್ ಪಂದ್ಯವನ್ನು ದಿನಗಟ್ಟಲೆ ನಮ್ಮ ಅಮೂಲ್ಯ ಸಮಯ ವ್ಯರ್ಥಮಾಡಿಕೊಂಡು ನೋಡುತ್ತೇವೆ. ಅವರೇನು ಪುಕ್ಕಟೆ ಆಡುವುದಿಲ್ಲ. ದೇಶಕ್ಕಾಗಿ ಆಡುತ್ತೇನೆ ಎಂದು ಹೇಳಿಕೆ ಕೊಳ್ಳುತ್ತಲೇ ಕೋಟ್ಯಂತರ ರೂ. ಗಳಿಸಿರುತ್ತಾರೆ. ಸಿನಿಮಾ ನಟ-ನಟಿಯರೂ ಹಾಗೆ. ಕೋಟ್ಯಾಂತರ ಸಂಭಾವನೆ ತೆಗೆದುಕೊಂಡೇ ಸಿನಿಮಾ ಮಾಡುತ್ತಾರೆ. ಕೇವಲ ೨-೩ ಗಂಟೆ ಸಮಯದಲ್ಲಿ ನಟಿಸಿ ಹಿರೋಗಳೆನಿಸಿಕೊಳ್ಳುತ್ತಾರೆ. ಜೀವನದಲ್ಲಿ ನಡೆಯದೇ ಇರುವುದನ್ನು ತೆರೆಯಮೇಲೆ ತೋರಿಸಿದರೂ ಅವರು ಹಿರೋಗಳು. ಇವೆಲ್ಲ ಒಂದು ತರಹದ ಉದ್ಯಮಗಳಷ್ಟೆ.
ತಮ್ಮ ನೆಚ್ಚಿನ ನಾಯಕ/ನಾಯಕಿಯ ಚಿತ್ರ ತೆರೆಗೆ ಬರುತ್ತದೆ ಎಂದರೆ ಅವರ ಅಭಿಮಾನಿ ವರ್ಗಕ್ಕೆ ಎಲ್ಲಿಲ್ಲದ ಕಾತರ. ನಾಳೆ ಶುಕ್ರವಾರ ತೆರೆಗೆ ತಮ್ಮ ನಾಯಕರ ಚಲನಚಿತ್ರ ಬಿಡುಗಡೆಗೊಳ್ಳುತ್ತದೆ ಎಂದರೆ ಮುಂಚಿನ ದಿನ ಅಂದರೆ ಗುರುವಾರ ರಾತ್ರಿಯೇ ಸಿನಿಮಾ ಹಾಲ್‌ಬಳಿ ತೆರಳಿ ನಿದ್ರೆಬಿಟ್ಟು ಮರುದಿನ ಮೊದಲ ಷೋ (ಆಟ) ವನ್ನು ನೋಡುತ್ತಾರೆ. ಅಷ್ಟೇ ಅಲ್ಲ ಜೀವನದಲ್ಲೂ ಅವರನ್ನು ಅನುಸರಿಸುತ್ತಾರೆ. ಅವರ ತರಹ ಕೇಶ ವಿನ್ಯಾಸ ಮಾಡಿಸಿಕೊಳ್ಳವುದು. ನಟಿಯರಾದರೆ ಅವರದೇ ತರಹದ ಉಡುಪು ಧರಿಸುವುದು. ಟಿಕ್-ಟಾಕ್‌ಗಳಲ್ಲಿ ತಮ್ಮ ನೆಚ್ಚಿನ ನಾಯಕ-ನಾಯಕಿಯ ಸಿನಿಮಾ ಹಾಡುಗಳಲ್ಲಿ ಅಭಿನಯಿಸುವುದು. ಮುಂಬೈ-ಬೆಂಗಳೂರಿಗೆ ತೆರಳಿ ನೆಚ್ಚಿನ ಸಿನಿಮಾ ತಾರೆಯರ ಮನೆಯ ಗೇಟ್ ನೋಡಿಕೊಂಡು ಬರುವುದು. ಹೀಗೆ ಒಂದೇ ಎರಡನೇ ಇವರ ಹುಚ್ಚುತನ. ತಾವು ಇಷ್ಟಪಟ್ಟ ನಟರ ಬಗ್ಗೆ ಯಾರಾದರೂ ಸ್ವಲ್ಪ ಟೀಕಿಸಿದರೂ ಇವರು ಸಹಿಸಿಕೊಳ್ಳುವುದಿಲ್ಲ, ಅಲ್ಲಿ ಜಗಳ ಶುರು.
ಆದರೆ ಭಾರತ ದೇಶಕ್ಕಾಗಿ ಕಳೆದ ೨೦ ವರ್ಷಗಳಿಂದ ಜೀವನವನ್ನೇ ಮುಡಿಪಾಗಿಟ್ಟ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರ ಅಭಿಮಾನಿಯಾಕಾಗಬಾರದು. ನಾನಂತೂ ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ನಾನು ಮಾತ್ರ ನಮ್ಮ ದೇಶದ ಮಹಾನ್ ನಾಯಕ ನರೇಂದ್ರ ಮೋದಿಯವರ ಅಭಿಮಾನಿ ಎಂದು. ನಾನು ಯಾವುದೇ ಪಕ್ಷ, ಧರ್ಮದ ದೃಷ್ಟಿಯಿಂದ ಯೋಚಿಸದೆ ಈ ದೇಶದ ಒಬ್ಬ ಸಾಮಾನ್ಯ ಪ್ರಜೆಯಾಗಿ ಅವರ ಅಭಿಮಾನಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.
೨೦೦೦-೨೦೨೦ ನೇ ಇಸ್ವಿಯವರೆಗೆ (೨೦೦೦-೨೦೧೪ ಗುಜರಾತ್ ಮುಖ್ಯಮಂತ್ರಿ) ೨೦ ವರ್ಷಗಳಿಂದ ದೇಶಕ್ಕಾಗಿ ಮುಡಿಪಾಗಿಟ್ಟ ಅವರ ಜೀವನವನ್ನು ನಾವೇಕೆ ಅಭಿಮಾನದಿಂದ ನೋಡಬಾರದು. ದಿನದ ೧೮ ಗಂಟೆಗೂ ಹೆಚ್ಚುಕಾಲ ತಮ್ಮ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಮೋದಿಯವರು ಒಂದು ದಿನವೂ ರಜೆ ತೆಗೆದುಕೊಳ್ಳದೇ ಅದೆಷ್ಟೋ ವರ್ಷಗಳಾದವು. ಮೋದಿಯವರಿಗೆ ತಲೆಮಾರಿಗಾಗುಷ್ಟು ಆಸ್ತಿ ಸಂಪಾದಿಸಿಡಬೇಕೆಂಬ ದುರಾಸೆಯಿಲ್ಲ. ನನ್ನ ಕುಟುಂಬದ ಸದಸ್ಯರನ್ನೇ ದೇಶದ ದೊಡ್ಡ ಹುದ್ದೆಯಲ್ಲಿ ಕೂರಿಸಬೇಕೆಂಬ ಸ್ವಾರ್ಥ ಇಲ್ಲ. ಅವರಿಗೆ ಸದಾ ದೇಶದ್ದೇ ಚಿಂತೆ. ತನ್ನ ಅಮೂಲ್ಯವಾದ ಜೀವನದ ಒಂದೊಂದು ಕ್ಷಣವನ್ನೂ ದೇಶಕ್ಕೆ ಸಮರ್ಪಿಸಬೇಕೆನ್ನುವ ಮಹದಾಸೆ ಇದೆ.
ನಮಗೆ ಹಾಂಗಲ್ಲ. ನಾನು ಸೋಮವಾರದಿಂದ ಕಚೇರಿಗೆ ತೆರಳುತ್ತೇನೆ. ಅಬ್ಬಬ್ಬ ಅಂದರೆ ಸೋಮವಾರದಿಂದ ಶನಿವಾರದವರೆಗೆ ಕೆಲಸ ಮಾಡುತ್ತೇನೆ. ನನಗೆ ಗುರುವಾರದಿಂದಲೇ ಭಾನುವಾರ ಯಾವಾಗ ಬರುತ್ತದಪ್ಪಾ ಎನ್ನುವ ಚಿಂತೆ ಶುರುವಾಗಿರುತ್ತದೆ. ಒಂದು ಭಾನುವಾರ ಕಚೇರಿಗೆ ಕೆಲಸದ ನಿಮಿತ್ತ ಬಾಸ್ ಬಾ ಎಂದು ಹೇಳಿದ್ದಾನೆ ಎಂದರೆ ನಮಗೆ ಉರಿಯಲು ಪ್ರಾರಂಭವಾಗುತ್ತದೆ. ಬಾಸನ್ನು ಮನಸ್ಸಿನ ತುಂಬ ಬೈದಿದ್ದೇ ಬೈದಿದ್ದು. ಅಯ್ಯೋ ಭಾನುವಾರವಾದರೂ ೧೧-೧೨ ಗಂಟೆ ತನಕ ನಿದ್ದೆ ಮಾಡ್ತ ನಿಧಾನವಾಗಿ ಏಳುತ್ತಿದ್ದೆ. ಹಾಳಾದ್ದು ಇವತ್ತೂ ಕಚೇರಿಗೆ ತೆರಳಬೇಕು ಬೇಗ ಏಳಬೇಕಲ್ಲ ಎಂದುಕೊಳ್ಳುತ್ತಲೇ ದಿನ ಕಳೆಯುತ್ತೇವೆ. ಆದರೆ ಮೋದಿಯವರು ಪ್ರತಿದಿನ ಮುಂಜಾನೆ ೩ ಗಂಟೆಗೆ ಏಳುತ್ತಾರಂತೆ. ಯಾವಾಗಲಾದರೂ ಒಮ್ಮೆ ಭಾನುವಾರದ ರಜೆ ಸಿಗದಿದದ್ದರೆ ಹೀಗಾಡುವ ನಾವು ೨೦ ವರ್ಷಗಳಿಂದ ರಜೆಯನ್ನೇ ತೆಗೆದುಕೊಳ್ಳದ ಮೋದಿಯವರು ಹೇಗೆ ಸಹಿಸಿರಬಹುದು. ನಮ್ಮ ಜೀವನದಲ್ಲಾದರೆ ನಾನೆಷ್ಟು ದುಡಿಯಬಲ್ಲೆ, ನಮ್ಮ ಹೆಂಡತಿ-ಮಕ್ಕಳನ್ನು ಹೇಗೆ ಸುಖವಾಗಿಡಬಲ್ಲೆ ಇತ್ಯಾದಿ ಇತ್ಯಾದಿ ಸ್ವಾರ್ಥಗಳೆ ಹೆಚ್ಚಾಗಿ ತುಂಬಿಕೊಂಡಿರುತ್ತವೆ. ಕೇವಲ ೬೦ ವರ್ಷಗಳಾದ ಮೇಲೆ ಅಯ್ಯೋ ನನಗೆ ವಯಸ್ಸಾಯಿತು ಎನ್ನೆಲ್ಲಿಯ ಕೆಲಸ ಎಂದು ವಿರಾಮ ದ ಜೀವನ ನಡೆಸುವ ನಾವೆಲ್ಲಿ ಮೋದಿಯವರೆಲ್ಲಿ?
ನಮ್ಮ ದೇಶದಲ್ಲಿ ಮೋದಿ ಮೋದಿ ಎಂದು ಉರಿದುಬೀಳುವ ಒಂದು ದೊಡ್ಡ ವರ್ಗವೇ ಇದೆ. ಮೊದಲ ಸಲ ಮೊದಿಯವರು ಆರಿಸಿ ಬಂದು ಪ್ರಧಾನಿಯಾದಾಗ (೨೦೧೪) ದೇಶ ಬಿಟ್ಟು ಹೋಗುತ್ತೇನೆ ಎಂದು ಬೊಬ್ಬರಿಸಿದ ಒಂದಷ್ಟು ಬುದ್ಧಿಜೀವಿಗಳು, ಚಿಂತಕರು, ಸಾಹಿತಿಗಳು, ಬಾಲಿವುಡ್ ನಟರ ದಂಡೇ ಇದ್ದಿತ್ತು. ಹೀಗೆ ಮತ್ತೆ ೨೦೧೯ ರ ಚುನಾವಣೆ ಬಂತು. ಚುನಾವಣೆ ಹತ್ತಿರ ಬಂದಂತೆಲ್ಲ ಅವರ ವಿರೋಧಿ ಬಣಗಳು ಮೋದಿ ಈ ಸಲ ಆರಿಸಿ ಬರುವುದಿಲ್ಲ. ಅವರು ಕೋಮುವಾದಿ. ಈಗ ದೇಶದಲ್ಲಿ ಕೂಮುಗಲಭೆಗಳು ಹೆಚ್ಚುತ್ತಿವೆ. ಹಾಗಾಗಿದೆ ಹೀಗಾಗಿದೆ ಎಂದು ಮೋದಿ ವಿರುದ್ಧ ಅಪಪ್ರಚಾರ ಮಾಡಿದ್ದೇ ಮಾಡಿದ್ದು. ಆದರೆ ಮತದಾರರು ಮಾತ್ರ ೨೦೧೯ ರ ಕೇಂದ್ರ ಚುನಾವಣೆಯಲ್ಲೂ ಮೋದಿ ಅವರನ್ನೆ ಮತ್ತೆ ಕೈಹಿಡಿದು ಪ್ರಧಾನಿ ಸ್ಥಾನದಲ್ಲಿ ಕೂರಿಸಿದಾಗ ಇವರುಗಳು ಒಲ್ಲದ ಮನಸ್ಸಿನಿಂದ ಸುಮ್ಮನೆ ಕೂರಬೇಕಾಯಿತು. ಅಷ್ಟಾದರೂ ಮೋದಿಯವರು ಏನೇ ಒಳಿತು ಮಾಡಿದರೂ ಈ ಮೇಲೆ ಹೇಳಿದ ಜನರಿಗೆ ಬೆಣ್ಣೆಯಲ್ಲಿ ಕಲ್ಲು ಬಂದಂತೆ ಏನಾದರೂ ಕಂಡೇ ಬಿಡುತ್ತದೆ. ಸರ್ಜಿಕಲ್ ಸ್ಟ್ರೈಕ್ ನಡೆಸಿದರೆ ಅದರ ಸಾಕ್ಷಿ ಕೇಳುವುದು ಇತ್ಯಾದಿ ಇತ್ಯಾದಿ.
೨೦೧೪ ರ ಮೊದಲು ನಮ್ಮ ನೆರೆಯ ದೇಶ. ಸದಾಕಾಲ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿತ್ತು. ಭಯೋತ್ಪಾದಕರನ್ನು ಗಡಿಭಾಗದಲ್ಲಿ ನಮ್ಮ ದೇಶಕ್ಕೆ ನುಸುಳಿಸುವುದು. ಭಯೋತ್ಪಾದಕರಿಂದ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡಿಸುವುದು. ಹೀಗೆ ಆ ದೇಶದ ಹಾವಳಿ ಒಂದೇ ಎರಡೆ. ಅದರಲ್ಲೂ ೨೦೦೮ ರ ಮುಂಬೈ ದಾಳಿಯಂತೂ ಭೀಕರ. ಆಗ ಕೇಂದ್ರದಲ್ಲಿದ್ದ ಯುಪಿಎ ಸರಕಾರ ಏನೂ ಆಗದ ರೀತಿಯಲ್ಲಿ ವರ್ತಿಸಿದ್ದು ನಿಮಗೆಲ್ಲ ತಿಳಿದೇ ಇದೆ. ಮತಗಳ ಆಸೆಗಾಗಿ ಹೇಡಿಯಂತೆ ಸುಮ್ಮನೇ ಕೂತಿದ್ದು ಈಗ ಇತಿಹಾಸ. ಇವರಿಗೆ ದೇಶಕ್ಕಿಂತ ತಮಗೆ ಮತವೇ ಮುಖ್ಯ ಎಂದು ಸಾಬೀತಾಪಡಿಸಿತ್ತು ೨೦೦೮ರ ಕೇಂದ್ರ ಸರ್ಕಾರ. ಇವೆಲ್ಲ ನೋಡಿದರೆ ಈಗ ನಮ್ಮ ದೇಶ ಮೋದಿಯವರ ಸುರಕ್ಷಿತ ಕೈಗಳಲ್ಲಿದೆ ಎಂದು ಎನಿಸುತ್ತಿದೆ. ಅಬ್ಬಾ ಎಷ್ಟೂ ವರ್ಷಗಳಿಂದ ನಿಜವಾದ ಭಾರತೀಯನ ಮನಸ್ಸಿನಲ್ಲಿದ್ದ ಪ್ರತಿಕಾರಕ್ಕೆ ಮೋದಿಯವರು ಒಂದಷ್ಟು ಉತ್ತರ ಕೊಟಿದ್ದಾರೆನೋ ಎನಿಸುತ್ತಿದೆ. ಅಲ್ಲದೆ ಚೀನಾಕ್ಕೂ ಇತ್ತೀಚೆಗೆ ಮೋದಿ ಆ ದೇಶದ ಆಪ್‌ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವ ಮೂಲಕ ಆ ದೇಶಕ್ಕೆ ಬುದ್ಧಿಕಲಿಸಿದ್ದಾರೆ. ಅಷ್ಟೇ ಅಲ್ಲದೆ ಮೊದಲು ಕೇಂದ್ರದಲ್ಲಿ ಯುಪಿಎ ಸರಕಾರ ವಿದ್ದಾಗ ರಾಫೇಲ್ ವಿಮಾನ ಖರೀದಿ ನೆನೆಗುದಿಗೆ ಬಿದ್ದಿತ್ತು. ಆದರೆ ಮೋದಿ ಈಗ ರಾಫೇಲ್ ಕೂಡ ಭಾರತದ ಸೈನ್ಯದ ಬತ್ತಳಿಕೆ ಸೇರುವಂತೆ ಮಾಡಿದ್ದಾರೆ. ಈ ಮೂಲಕ ಚೀನಾ-ಪಾಕ್ ಸೇರಿದಂತೆ ಮಗ್ಗಲು ಮುಳ್ಳಾಗಿರುವ ದೇಶಕ್ಕೆ ಮೋದಿ ಬಿಸಿ ಮುಟ್ಟಿಸಿದ್ದಾರೆ.
ಸ್ವಲ್ಪ ಹಿಂದಿನ ವರ್ಷಗಳಲ್ಲಿ ಭಾರತವೆಂದರೆ ಅಷ್ಟು ಪ್ರಾಮುಖ್ಯತೆ ಕೊಡದ ಅಂತಾರಾಷ್ಟ್ರೀಯ ಸಮೂದಾಯವೂ ಭಾರತವನ್ನು ಗುರುತಿಸತೊಡಗಿದೆ. ಪ್ರತಿಯೊಂದರಲ್ಲೂ ಭಾರತದ ಅಭಿಪ್ರಾಯ ಕೇಳ ತೊಡಗಿದೆ. ಇದಕ್ಕೆಲ್ಲ ದೇಶದ ಕೆಲವರು ಎಷ್ಟೇ ಟೀಕಿಸಿದರೂ ಬಿಡುವಿಲ್ಲದೆ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ವಿದೇಶ ಸುತ್ತಿ ಮೋದಿಯವರು ಮಾಡಿದ ಸಾಧನೆಯೇ ಇದು. ಈಗ ಅವರು ವಿದೇಶಕ್ಕೆ ಹೋಗುತ್ತಿಲ್ಲ. ಏಕೆಂದರೆ ಅವರು ತಾವಂದುಕೊಂಡದ್ದನ್ನು ತಮ್ಮ ಮೊದಲ ಅವಧಿಯಲ್ಲೇ ಸಾದಿಸಿದ್ದಾಗಿದೆ. ಅದ್ಕಕ್ಕೆ ಅವರು ಎಷ್ಟು ಟೀಕೆ ಎದುರಿಸಬೇಕಾಯಿತೆಂದು ನಾವೆಲ್ಲ ನೋಡಿದ್ದೇವೆ. ಅಯ್ಯೋ ಮೋದಿ ದೇಶದಲ್ಲಿ ಇರುವುದೇ ಇಲ್ಲ. ಕೇವಲ ವಿದೇಶ ಪ್ರವಾಸದಿಂದ ಬೊಕ್ಕಸ ಕೊಳ್ಳೆಹೊಡೆಯುತ್ತಿದ್ದಾರೆ. ಮೋದಿಯವರು ಧರಿಸುವ ಉಡುಪುಗಳ ಬಗ್ಗೂ ಅವರ ವಿರೋಧಿಗಳಿಂದ ಟೀಕೆ ಎದುರಿಸುವಂತಾಗಿದೆ. ಇಷ್ಟೇ ಅಲ್ಲ ಅವರು, ತಮ್ಮ ಆಹಾರದ ಬಗ್ಗೂ ಹಲವರಿಂದ ಪ್ರಶ್ನಿಸುವಂತಾಗಿತ್ತು ಒಟ್ಟಿನಲ್ಲಿ ಮೋದಿ ಕುಂತರೂ ತಪ್ಪು ನಿಂತರೂ ತಪ್ಪು ಎನ್ನುವಂತೆ ಆಡುವ ಅವರ ವಿರೋಧಿ ವರ್ಗದವರು. ಅಷ್ಟೊಂದು ಟೀಕೆ ಟಿಪ್ಪಣೆ ಮಾಡಲು ಅವರೇನು ದೇಶದ ಮತದಾರರು ಆರಿಸಿ ತಂದ ನಾಯಕರಲ್ಲವೇ? ಆದರೆ ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದ ಮೋದಿಯವರದ್ದು ಮಾತ್ರ ಅಭಿವೃದ್ಧಿ ಮಂತ್ರ, ತಮ್ಮ ಕಾರ್ಯಸಾಧನೆಯೆ ಅವಕ್ಕೆಲ್ಲ ಉತ್ತರ.
ಭಾರತೀಯರಾದ ನಮಗೆ ಈ ಯೋಗ ಎನ್ನುವುದು ಮರೆತೇ ಹೋಗಿತ್ತು. ಆದರೆ ಮೋದಿ ತಾವು ಪ್ರಧಾನಿಯಾದ ಮೇಲೆ ಯೋಗದ ಮಹತ್ವವನ್ನು ಕೇವಲ ಭಾರತಕ್ಕಲ್ಲದೆ ಜಗತ್ತಿಗೇ ತಿಳಿಸಿಕೊಟ್ಟಿದ್ದಾರೆ. ಜಗತ್ತಿನಾದ್ಯಂತ ಇಂದು ಅಂತರರಾಷ್ಟ್ರೀಯ ಯೋಗ ಒಕ್ಕೂಟ ದ ಪ್ರಕಾರ, ಸುಮಾರು ೩೦೦ ಮಿಲಿಯನ್ ಜನರು ಯೋಗಾಭ್ಯಾಸ ಮಾಡುತ್ತಾರೆ. ಒಂದು ನಿರ್ದಿಷ್ಟ ವರ್ಗದವರ ಕೈಯಲ್ಲಿ ಇತರೆ ಪ್ರತಿಭಟನೆ ನಡೆಸುವಾಗ ಇರದ ನಮ್ಮ ಭಾರತದ ರಾಷ್ಟ್ರಧ್ವಜ ಎನ್‌ಆರ್‌ಸಿ, ಸಿಎಎ ಪ್ರತಿಭಟನೆಯಲ್ಲಿ ಇಂದು ಕಾಣಸಿಗುತ್ತಿದೆ. ಭಾರತ ಸಂಸ್ಕೃತಿಯ ಮೇಲೆ ಪುರಾತನ ಕಾಲದಿಂದಲೂ ಆಕ್ರಮಣಗಳು ನಡೆದಾಗ ಇನ್ನೇನೂ ನಮ್ಮ ಭಾರತೀಯ ಸಂಸ್ಕೃತಿ ಅಳಿದೇ ಹೋಯಿತು ಎನ್ನುವಾಗ ಒಂದು ಯುಗಪುರುಷ ಉದಯಿಸಿಯೇ ಬಿಟ್ಟಿದ್ದಾನೆ. ಈಗ ಮೋದಿ ರೂಪದಲ್ಲಿ ಅವರನ್ನು ನೋಡಿದರೂ ತಪ್ಪೇನಿಲ್ಲ. ಹೀಗೆ ಉರಿದು ಬೀಳುವವರನ್ನು ಉರಿಸುತ್ತ, ತಮ್ಮ ಕೆಲಸ ತಾವು ಮಾಡುತ್ತಿರುವ ಮೋದಿಯವರು ನಮ್ಮ ಭಾರತದ ಹೆಮ್ಮೆ ಅಲ್ಲವೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ