*ಹೆಸ್ಕಾಂಗೆ ಉದ್ಯಮಿಗಳಿಂದ ದೂರುಗಳ ಸುರಿಮಳೆ: ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ಉದ್ಯಮಿಗಳು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತಂತೆ ಬೆಳಗಾವಿ ವಾಣಿಜ್ಯೋದ್ಯಮ ಸಂಘ ಹೆಸ್ಕಾಂ ಅಧಿಕಾರಿಗಳ ಜೊತೆ ಮುಖಾ ಮುಖಿ ಕಾರ್ಯಕ್ರಮವನ್ನು ಈಚೆಗೆ ಆಯೋಜಿಸಿತ್ತು.
ಅನಿಯಂತ್ರಿತ ವಿದ್ಯುತ್ ನಿಲುಗಡೆ, ಸಿಂಗಲ್ ಫೇಸ್ ಸಮಸ್ಯೆ, ಕೇಬಲ್ ಗಳ ಅಸಮರ್ಪಕ ನಿರ್ವಹಣೆ, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳ ಬದಲಾವಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಉದ್ಯಮಿಗಳು ಅಧಿಕಾರಿಗಳ ಎದುರು ತೆರೆದಿಟ್ಟರು. ಗುಣಮಟ್ಟದ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದೇ ರೀತಿ ಆದರೆ ಯುವ ಉದ್ಯಮಿಗಳು ಉದ್ಯಮ ಆರಂಭಿಸಲು ಹಿಂದೇಟು ಹಾಕುತ್ತಾರೆ ಎಂದು ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಪ್ರಭಾಕರ ನಾಗರ ಮುನ್ನೋಳಿ ಹೇಳಿದರು.
ಉದ್ಯಮಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಕಾಲದಲ್ಲಿ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲವಾದಲ್ಲಿ ಉದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೆಸ್ಕಾಂ ಸಮಿತಿ ಚೇರಮನ್ ಆನಂದ ದೇಸಾಯಿ ಹೇಳಿದರು.
ಸೂಕ್ತ ರೀತಿಯಲ್ಲಿ ಅಧಿಕಾರಿಗಳು ಸ್ಪಂದಿಸದಿದ್ದರೆ ಈ ರೀತಿಯ ಕಾರ್ಯಕ್ರಮ ಮಾಡಿಯೂ ಪ್ರಯೋಜನವಿಲ್ಲ. ಹಾಗಾಗಿ ಇಲ್ಲಿನ ಚರ್ಚೆಯ ಫಲಿತಾಂಶದ ಮೇಲೆ ನಿರಂತರ ನಿಗಾವಹಿಸಲಾಗುವುದು, ಅಧಿಕಾರಿಗಳಿಗೆ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತಂದರೆ ನಾವು ಸರಕಾರದ ಹಾಗೂ ಉನ್ನತ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದು ಅವರು ತಿಲಿಸಿದರು.
ಎಲ್ಲವನ್ನೂ ತಾಳ್ಮೆಯಿಂದ ಕೇಳಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ ಕರೂರ್ ಹಾಗೂ ಮೋಹನ್ ಸುತಾರ, ಈಗಾಗಲೆ ಕೇಬಲ್ ಬದಲಾಯಿಸಲಾಗುತ್ತಿದೆ. ಲೋಡ್ ಜಾಸ್ತಿ ಆಗಬಾರದೆಂದು ಹೆಚ್ಚುವರಿ ಫೀಡರ್ ಹಾಕಲಾಗುತ್ತಿದೆ. ನವೆಂಬರ್ ಅಂತ್ಯದೊಳಗಾಗಿ ಎಲ್ಲ ಪ್ರಮುಖ ಸಮಸ್ಯೆಗಳನ್ನೂ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಪ್ರತಿ ದಿನದ ಪ್ರಗತಿಯ ಮೇಲೆ ನಿಗಾವಹಿಸಲಾಗುತ್ತಿದೆ. ಹೊಸ ಸಿಬ್ಬಂದಿ ನೇಮಕಾತಿ ಸಹ ನಡೆಯುತ್ತಿದೆ. ಈ ಬಾರಿ ಅಗತ್ಯ ಸಿಬ್ಬಂದಿ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ವಾಣಿಜ್ಯೋದ್ಯಮ ಸಂಘದ ಇಂಡಸ್ಟ್ರಿ ಕಮಿಟಿ ಚೇರಮನ್ ಸಂದೀಪ ಬಾಗೇವಾಡಿ, ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ, ಉದ್ಯಮಿಗಳು ಇದ್ದರು.