Kannada NewsKarnataka NewsLatestPolitics

*ಹೈಕಮಾಂಡ್ ರಾಜ್ಯ ಸರ್ಕಾರದ ಜೊತೆಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ, *ನವದೆಹಲಿ :*“ನಾವು ನಿಮ್ಮ ಜೊತೆಗಿದ್ದೇವೆ ಧೈರ್ಯದಿಂದ ಹೋರಾಟ ಮಾಡಿ, ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ನಾಯಕರು ನಮಗೆ ಅಭಯ ಕೊಟ್ಟಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಜೊತೆಗೆ ಸಭೆ ನಡೆಸಿದ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಹಾಗೂ ಇತರ ಕಾಂಗ್ರೆಸ್ ನಾಯಕರು ಮಾಧ್ಯಮಗಳಿಗೆ ಸಭೆಯ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು”ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ಪರವಾಗಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಜೊತೆಯಾಗಿ ನಿಂತಿವೆ. ಕರ್ನಾಟಕದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಕಿರುಕುಳ ನೀಡುತ್ತಿರುವ ಬಗ್ಗೆ ನಮ್ಮ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರೂ ಸಹ ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ” ಎಂದರು.

“ಇಡೀ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ದೊಡ್ಡ ರಾಜ್ಯ ಕರ್ನಾಟಕ ಇದನ್ನು ಅಭದ್ರಗೊಳಿಸುವ ಪ್ರಯತ್ನಿಲಾಗುತ್ತಿದೆ. ಇಲ್ಲಿ ಕೇವಲ ಮುಖ್ಯಮಂತ್ರಿಗಳನ್ನ ಮಾತ್ರ ಗುರಿ ಮಾಡುತ್ತಿಲ್ಲ. ಬಡವರಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಗುರಿ ಮಾಡುತ್ತಿದ್ದಾರೆ” ಎಂದು ಹೇಳಿದರು.

ಆ. 29 ರ ನಂತರ ಪ್ರಾಸಿಕ್ಯೂಷನ್ ಗೆ ನೀಡಿರುವ ತಡೆಯಾಜ್ಞೆ ಕೊನೆಯಾಗಲಿದೆ. ಆನಂತರ ಸರ್ಕಾರದ ನಡೆ ಹೇಗಿರಲಿದೆ ಎಂದು ಕೇಳಿದಾಗ “ನಮಗೆ ಕಾನೂನಿನ ಮೇಲೆ ಗೌರವವಿದೆ. ಪ್ರಾಸಿಕ್ಯೂಷನ್ ಗೆ ನೀಡಿರುವುದು ಅಸಂವಿಧಾನಿಕ. ಇದನ್ನು ರಾಜ್ಯಪಾಲರೇ ಮನದಟ್ಟು ಮಾಡಿಕೊಂಡು ವಾಪಾಸ್ ಪಡೆಯುವ ಕಾಲ ಬರಲಿದೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button