ಪ್ರಗತಿವಾಹಿನಿ ಸುದ್ದಿ; ಮೈಸೂರು: ಹಿಮಾಚಲ ಪ್ರದೇಶದ ಕುಲು ಮನಾಲಿಗೆ ಪ್ರವಾಸಕ್ಕೆ ತೆರಳಿದ್ದ ಮೈಸೂರಿನ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹಿಮಾಚಲ ಪ್ರದೇಶಕ್ಕೆ ಪ್ಯಾಕೇಜ್ ಟೂರ್ ಹೋಗಿದ್ದ ಮೈಸೂರಿನ ನಾಲ್ವರು ಏಕಾಏಕಿ ನಾಪತ್ತೆಯಾಗಿದ್ದಾರೆ. ಶ್ರೀನಿಧಿ, ನವ್ಯ, ವೀರ್ ಹಾಗೂ ಅವರ ಪತ್ನಿ ಸೇರಿ ನಾಲ್ವರು ನಾಪತ್ತೆಯಾಗಿದ್ದಾರೆ.
ಕಳೆದ ಗುರುವಾರ ಮೈಸೂರಿನಿಂದ ನಾಲ್ವರು ಕುಲು ಮನಾಲಿಗೆ ಪ್ರವಾಸಕ್ಕೆ ತೆರಳಿದ್ದರು. ಭಾನುವಾರ ರಾತ್ರಿ ಸಂಪರ್ಕಕ್ಕೆ ಸಿಕ್ಕಿದವರು ಬಳಿಕ ಎಲ್ಲಿದ್ದಾರೆ ಎಂಬುದೂ ಗೊತ್ತಾಗುತ್ತಿಲ್ಲ. ಕುಟುಂಬ ಸದಸ್ಯರನ್ನು ಸುರಕ್ಷಿತವಾಗಿ ಕರೆ ತರುವಂತೆ ಮೈಸೂರಿನಲ್ಲಿರುವ ಅವರ ಕುಟುಂಬದ ಇತರ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಬಿಯಾಸ್ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಬಿಯಾಸ್ ನದಿ ಅಬ್ಬರಕ್ಕೆ ನಿನ್ನೆ ಮನೆ, ಹೋಟೆಲ್ ಗಳು, ಬೃಹತ್ ಕಟ್ಟಡಗಳು, ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಹಲವೆಡೆ ಭೂಕುಸಿತವಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ಪ್ರವಾಸಕ್ಕೆ ತೆರಳಿದ್ದ ರಾಜ್ಯದ ನಾಲ್ವರು ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ