Kannada NewsKarnataka News

ಹಿರಣ್ಯಕೇಶಿ ಪ್ರವಾಹದ ನೀರನ್ನು ಸದ್ಬಳಕೆ ಮಾಡಬೇಕು: ಸಂಗಮೇಶ ನಿರಾಣಿ

ಪ್ರಗತಿವಾಹಿನಿ ಸುದ್ದಿ, ಮುಧೋಳ – ಘಟಪ್ರಭಾ ನದಿಯ ಉಪನದಿಯಾದ ಹಿರಣ್ಯಕೇಶಿ ನದಿಗೆ ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ. ಈ ನೀರನ್ನು ಹಿಡಕಲ್ ಜಲಾಶಯದಲ್ಲಿ ಸಂಗ್ರಹಿಸಿ ಕೃಷಿಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ ಅಧ್ಯಕ್ಷ ಸಂಗಮೇಶ ಆರ್. ನಿರಾಣಿ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಡನೆ ಮಾತನಾಡಿದ ಅವರು ಹಿರಣ್ಯಕೇಶಿ ನದಿ ಹಿಡಕಲ್ ಜಲಾಶಯದ ಕೆಳಭಾಗದಲ್ಲಿ ಘಟಪ್ರಭಾ ನದಿ ಸೇರುತ್ತದೆ. ಘಟಪ್ರಭಾ ಬಲದಂಡೆ ಕಾಲುವೆಗೆ ಲಿಫ್ಟ್ ಮೂಲಕ ೭೦೦ ಕ್ಯೂಸೆಕ್ಸ್, ದೂಪದಾಳ ಡ್ಯಾಂ ಮೂಲಕ ಎಡದಂಡೆ ಕಾಲುವೆಗೆ ೨೫೦೦ ಕ್ಯೂಸೆಕ್ಸ್, ಧೂಪಧಾಳ ಡ್ಯಾಂ ಕೆಳಭಾಗದಲ್ಲಿ ರಾಮೇಶ್ವರ ಹಾಗೂ ವೀರಭದ್ರೇಶ್ವರ ಲಿಫ್ಟ್ ಇರಿಗೇಶನ್, ರೈತರ ಬಳಕೆ, ಕುಡಿಯುವ ನೀರು ಸೇರಿ ೫೦೦ ಕ್ಯೂಸೆಕ್ಸ್ ಹಿರಣ್ಯಕೇಶಿ ನೀರನ್ನು ಹರಿಸುತ್ತಾರೆ. ಈ ಎಲ್ಲ ಬಳಕೆ ನಂತರವೂ ಪ್ರತಿನಿತ್ಯ ೨ ರಿಂದ ೩ ಸಾವಿರ ಕ್ಯೂಸೆಕ್ಸ್ ನೀರು ಘಟಪ್ರಭಾ ನದಿ ಮೂಲಕ ಹರಿದು ಕೃಷ್ಣಾ ನದಿ ಸೇರುತ್ತದೆ. ಮಳೆಗಾಲದಲ್ಲಿ ಕೃಷ್ಣೆಗೂ ಪ್ರವಾಹವಿರುವುದರಿಂದ ಹಿರಣ್ಯಕೇಶಿ ನೀರು ಆಲಮಟ್ಟಿ, ನಾರಾಯಣಪೂರ ಜಲಾಶಯ ಮೂಲಕ ಹರಿದು ಬೇರೆ ರಾಜ್ಯ ಸೇರುತ್ತ್ತದೆ. ಹೀಗಾಗಿ ಮಳೆಗಾಲದ ೪ ತಿಂಗಳಲ್ಲಿ ಸರಾಸರಿ ೧೫ ಟಿಎಂಸಿ ನೀರು ಸದ್ಬಳಕೆಯಾಗದೇ ಪ್ರವಾಹದ ರೂಪದಲ್ಲಿ ವ್ಯರ್ಥವಾಗುತ್ತಿದೆ.

ಘಟಪ್ರಭಾ ನದಿ ಈಗ ತುಂಬಿ ಹರಿಯುತ್ತಿದೆ. ಆದರೆ ಹಿಡಕಲ್ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಅದ್ದರಿಂದ ಹಿರಣ್ಯಕೇಶಿಯ ಪ್ರವಾಹದ ನೀರನ್ನು ಸರಳ ಮಾರ್ಗದಲ್ಲಿ ಹಿಡಕಲ್ ಜಲಾಶಯದಲ್ಲಿ ಸಂಗ್ರಹಿಸಬಹುದು. ಈ ಕುರಿತು ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ ಮೂಲಕ ಯೋಜನಾ ವರದಿ ಸಿದ್ದಪಡಿಸಲಾಗಿದ್ದು, ಹುಕ್ಕೇರಿಯ ಯರನಾಳ ಬಳಿ ನೀರನ್ನು ಲೀಫ್ಟ್ ಮಾಡಿದರೆ ೨.೫ ಕಿಮೀ ಅಂತರದಲ್ಲಿ ಹಿಡಕಲ್ ಜಲಾಶಯದಲ್ಲಿ ಸಂಗ್ರಹಿಸಬಹುದು. ೧೮೦ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡು ೧ ವರ್ಷದಲ್ಲಿ ಪೂರ್ಣಗೊಳಿಸಬಹುದು. ಆ ಮೂಲಕ ಹಿಡಕಲ್ ಡ್ಯಾಂ ನೀರಿನ ಕೊರತೆ ನೀಗಿಸಬಹುದು ಡ್ಯಾಂ ಕೂಡ ಪ್ರತಿವರ್ಷ ಬೇಗನೆ ಭರ್ತಿಯಾಗುತ್ತದೆ. ಹೆಚ್ಚುವರಿ ನೀರನ್ನು ೮೦ ಕಿ.ಮೀ. ಉದ್ದದ ಗ್ರ್ಯಾವಿಟಿ ಕೆನಾಲ್ ಮೂಲಕ ನವಿಲುತೀರ್ಥ ಜಲಾಶಯಕ್ಕೂ ಸೇರಿಸಬಹುದು. ಇದರಿಂದ ವಾರ್ಷಿಕ ೧೫ ಟಿ.ಎಂ.ಸಿ ನೀರನ್ನು ಸಂಗ್ರಹಿಸಿ ಘಟಪ್ರಭಾ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಬೆಳಗಾವಿ, ಬಾಗಲಕೋಟ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು. ಈ ಕಾರ್ಯಕ್ಕೆ ಸರ್ಕಾರ ತಕ್ಷಣ ಮುಂದಾಗಬೇಕು ಎಂದು ಸಂಗಮೇಶ ನಿರಾಣಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button