Kannada NewsKarnataka News

ವಿಶಿಷ್ಟ ರೀತಿಯಲ್ಲಿ ಯುಗಾದಿ ಶುಭಾಶಯ ಕೋರಿದ ಹುಕ್ಕೇರಿ ಶ್ರೀಗಳು

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈ ವರ್ಷ ಕೊರೋನಾ ವೈರಸ್ ಪರಿಣಾಮವಾಗಿ ಎಲ್ಲೆಡೆ ಯುಗಾದಿ ಸಂಭ್ರಮ ಇಲ್ಲವಾಗಿದೆ. ಜನರು ಮನೆಯಿಂದಲೇ ಹೊರಗೆ ಬಾರದಂತಹ ಸ್ಥಿತಿ ಇರುವುದರಿಂದ ಹಬ್ಬ ಕಳಾಹೀನವಾಗಿದೆ.
ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ  ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು  ಜನರಿಗೆ ವಿಶೇಷ ರೀತಿಯಲ್ಲಿ ಹಬ್ಬದ ಶುಭಾಷಯ ಕೋರಿದ್ದಾರೆ.
ಓದಿ –
     ಮನಸ್ಸು ತುಂಬ ಭಾರವಾಗಿದೆ. ಏಕೆಂದರೆ ಸಾಕಷ್ಟು ಭಕ್ತರು ಫೋನ್ ಮಾಡಿ, ಮಠಕ್ಕೆ ಬರುತ್ತೇವೆ ಅಂದಾಗ ಬನ್ನಿರಿ ನಾನು ಇರುತ್ತೇನೆ, ಬಂದು ಪ್ರಸಾದವನ್ನು ತೆಗೆದುಕೊಂಡು ಹೋಗಿ ಅಂತ ಹೇಳುವ ಬಾಯಲ್ಲಿ ಇವತ್ತು  ಯಾರೂ ಬರಬೇಡಿ ಎಂದು ಹೇಳುವ ಒಂದು ಕೆಟ್ಟ ಗಳಿಗೆಯಲ್ಲಿ  ಭಗವಂತ ತಂದು ನೀಲ್ಲಿಸಿದ್ದಾನೆ.
 ಬಹುಶಃ ಕಲಿಯುಗದ ಪ್ರಭಾವದಿಂದಾಗಿ ಇಂತಹ ಒಂದು ಸಂದಿಗ್ಧ ವಾತಾವರಣ   ನಿರ್ಮಾಣವಾಗಿದೆ. ಕೊರೋನ ಅನ್ನುವ ಮಹಾಮಾರಿ ಎಲ್ಲರನ್ನು ತೃಪ್ತಿಯಿಂದ ಇಡುತ್ತಿಲ್ಲ. ಅದಕ್ಕಾಗಿ ಈ ಸೋಂಕು ಭಯಾನಕ ರೋಗ ಹೇಗೆ ಬರುತ್ತದೆ ಗೊತ್ತಿಲ್ಲ, ಅದಕ್ಕಾಗಿ ನನ್ನ ಪ್ರೀತಿಯ ಶಿಷ್ಯರೇ ದಯವಿಟ್ಟು ಮನೆ ಬಿಟ್ಟು ಯಾರೂ ಬರಬೇಡಿ. ಯಾರೂ ಹೊರಗೆ ಹೋಗಬೇಡಿ. ಈ ಯುಗಾದಿಯ ದಿನ ಈ ಒಂದು ಒಳ್ಳೆಯ ಕೆಲಸವನ್ನು ಮಾಡಬಹುದು, ನಿಮ್ಮಲ್ಲಿ ಮೊಬೈಲ್ ಗಳು ಇದ್ದೆ ಇರುತ್ತವೆ. ಅದನ್ನು ಕೈಗೆ ತೆಗೆದುಕೊಳ್ಳಿ. ಸ್ವಚ್ಛವಾಗಿ ನೀರು ಹಚ್ಚಿ ಡೆಟಾಲ್ ಸ್ವಲ್ಪ ಹಾಕಿ ಸ್ವಚ್ಛವಾಗಿ ಒರೆಸಿ. ನಿಮ್ಮ ಆತ್ಮೀಯರಿಗೆ ಪೋನ್ ಮಾಡಿ ಅವರಿಗೆ ಹೇಳಿ, ಇಲ್ಲಿಂದಲೇ ಯುಗಾದಿ ಹಬ್ಬದ ಶುಭಾಶಯಗಳು ಅಂತ. ಬೇವು ಬೆಲ್ಲ ತಿಂದು ನಾವೆಲ್ಲರೂ ಕೂಡ ಕಷ್ಟ ಸುಖದಲ್ಲಿ ಒಂದಾಗಿರುವಂತೆ ಕೇಳಿಕೊಳ್ಳಿ, ಅವರ ಆರೋಗ್ಯದ ಕಡೆ ಗಮನ ಹರಿಸಲಿಕ್ಕೆ ಹೇಳಿ, ಇಂತ ರೋಗ ಬಂದಿದೆ. ನಾವು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೊರಗೆ ಹೋಗಬಾರದು, ನೀವು ಹೋಗಬೇಡಿ, ಮಕ್ಕಳನ್ನು ಹೊರಗೆ ಬಿಡಬೇಡಿ. ವಯಸ್ಕಾದವರ ಬಗ್ಗೆ ಗಮನ ಇಡಿ , ಅಂತ ಹೇಳಿ    ಎಲ್ಲರಿಗೂ ಫೋನ್ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರ ಮಾಡಿ, ತುಂಬಾ ಖುಷಿ ಪಡುತ್ತಾರೆ.
ನಾವು ಕಾಟಾಚಾರಕ್ಕೆ ಹೋಗಿ ಬೇವು ಬೆಲ್ಲಕೊಟ್ಟು ಬರುತ್ತಿದ್ವಿ. ಈ ವರ್ಷ,  ಪ್ರೀತಿಯನ್ನು ಕೊಡಿ,  ಪ್ರೀತಿಯ ಬೇವು ಬೆಲ್ಲವನ್ನು ಕೊಡಿ. ಎಲ್ಲರೂ ಸಂತೃಪ್ತಿಯಿಂದ ಇರೋಣ.
     ಎಷ್ಟು ಸಾಧ್ಯವೋ ಅಷ್ಟು ಆರೋಗ್ಯದ ಕಡೆ ಗಮನ ಕೊಡೋಣ. ಸ್ಛತೆಯ ಬಗ್ಗೆ ಮಹತ್ವ ಕೊಡೋಣ. ನನಗೆ ಏನು ಹೇಳಬೇಕು ಅಂತ ಗೊತ್ತಾಗುತಿಲ್ಲ! ದಯವಿಟ್ಟು  ಪಾಲಿಸಲೇಬೇಕು. ಪೊಲೀಸರು ಹೊರಗೆ ಹೋದರೆ ಹೊಡಿತಾರೆ, ಅಂತಂದರೆ ಬಹುಶಃ ಪೊಲೀಸರು, ವೈದ್ಯರು  ಈಗ  ನಮಗೆ ತಂದೆ ತಾಯಿ ಇದ್ದ ಹಾಗೆ. ಅವರ ಮಾತುಗಳನ್ನು ಅನುಸರಿಸಬೇಕು. ಪೋಲೀಸರು ಯಾಕೆ ಹೊರಗೆ ಹೋದರೆ ಹೊಡಿತಾರೆ ಅಂದರೆ ನಿಮಗೆ ತೊಂದರೆ ಆಗಬಾರದು, ನೀವು ಮನೆಯಲ್ಲಿ ಇರಿ ಅಂತ. ಅವರ ಮಾತುಗಳನ್ನು ಅನುಸರಿಸಬೇಕು. ಪೊಲೀಸರು  ಗದರಿಸುತ್ತಾರೆ, ವೈದ್ಯರು ಚಿಕಿತ್ಸೆ ಕೊಡುತ್ತಾರೆ, ನಮ್ಮೂರು ಸ್ವಚ್ಛವಾಗಿರಬೇಕು  ಅಂತ ಕಾರ್ಮಿಕರು ನಿತ್ಯ ಪ್ರಯತ್ನಿಸುತ್ತಾರೆ. ಆಮೇಲೆ ಎಷ್ಟೇ ಕಷ್ಟ ಆದ್ರೂ ಕೂಡ ಮಾಧ್ಯಮದವರು ಸುದ್ಧಿಗಳನ್ನು ಬಿತ್ತರಿಸುತಿರುತ್ತಾರೆ. ಅವರ ಶ್ರಮವೂ ಇದೆ.
        ಪೊಲೀಸರಿಗೆ ಹೇಳಿ, ಆಮೇಲೆ ಪೌರಕಾರ್ಮಿಕರಿಗೆ ಹೇಳಿ, ಪತ್ರಕರ್ತರಿಗೆ ಹೇಳಿ,  ಸರಕಾರದವರು ಎಲ್ಲರೂ ಕೂಡ  ಕಷ್ಟಪಡುತ್ತಿರುತ್ತಾರೆ. ಕೃತಜ್ಞತೆ ಅನ್ನೋದು  ಎಲ್ಲರನ್ನೂ ಕೂಡ ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಹೇಳ್ಬೇಕಂದ್ರೆ ಅರ್ಥ ಆಗ್ತಾಯಿಲ್ಲ, ಆದರೆ ಯುಗಾದಿ ದಿನ ಮಠಕ್ಕೆ ಬನ್ನಿ ಬನ್ನಿ ಅಂತ ಕರೆಯುವ ಮನಸ್ಸು ಈ ವರ್ಷ ಬರಬೇಡಿ, ಆರಾಮವಾಗಿ ಮನೆಯಲ್ಲಿ ಇರಿ, ನಾನಂತೂ ಮನಸ್ಸು ತುಂಬಿ  ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಎಲ್ಲ ಜನರಿಗೆ ಒಳ್ಳೆದಾಗಲಿ, ಈ ಮಹಾಮಾರಿ ಹೋಗಲಿ ಎಂದು ನಾನು ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತೇನೆ.
          ಮನೆಯಲ್ಲಿ ಕುಳಿತುಕೊಳ್ಳಿ, ಬೆಳಗ್ಗೆ ಸಾಯಂಕಾಲ ದೂರ ದೂರ ಕುಳಿತು ಮನೆಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ, ಪುರಂದರದಾಸರು ಹೇಳಿದರಲ್ಲ “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕು” ಅನ್ನುವ ಹಾಗೆ ನೋಡು ತಿರುಪತಿ ತಿಮ್ಮಪ್ಪ ನಾನು ಬರದೆ ಇದ್ದರೆ ನಿನ್ನ ನಾಮಸ್ಮರಣೆ ಮಾಡುತ್ತೇನೆ. ಶ್ರೀಶೈಲ ಮಲ್ಲಿಕಾರ್ಜುನ ನಾನು ಅಲ್ಲಿಗೆ ಬರದೆ ಇದ್ದರೇನು ಇಲ್ಲಿಯೇ ಕುಳಿತು ನಿನ್ನ ನಾಮಸ್ಮರಣೆ ಮಾಡುತ್ತೇನೆ. ಬಾಳೆಹೊನ್ನೂರಿನ ರೇಣುಕಾಚಾರ್ಯ ಜಗದ್ಗುರು ರೇಣುಕಾಚಾರ್ಯ ನಾನು ಅಲ್ಲಿಗೆ ಬರಲಿಕ್ಕಾಗುತ್ತಿಲ್ಲ, ಇಲ್ಲೇ ಕುಳಿತು ನಾಮಸ್ಮರಣೆ ಮಾಡಿಕೊಳ್ಳುತ್ತೇನೆ. ಯಡೂರಿನ  ಈರಣ್ಣ ನಾನು ಇಲ್ಲಿಯೇ ಕುಳಿತು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಹುಕ್ಕೇರಿಯ ಗುರುಶಾಂತೇಶ್ವರ ನಾನು ಇಲ್ಲಿಯೇ ಕುಳಿತು ಪ್ರಾರ್ಥನೆ  ಮಾಡಿಕೊಳ್ಳುತ್ತೇನೆ, ಎಂ ಚಂದರಗಿಯ ಗಡದೇಶ್ವರ ನಾನು ಇಲ್ಲಿಯೇ ಕುಳಿತು ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತೇನೆ.  ನಿಮ್ಮ ನಿಮ್ಮ ದೇವರ ಸ್ಮರಣೆ ಮಾಡಿ ಅವರನ್ನು ಇಲ್ಲಿಯೇ ಕುಳಿತು ಪ್ರಾರ್ಥನೆ ಮಾಡಿ, ನಿನ್ನ  ನಾಮದ ಬಲವೊಂದಿದ್ದರೆ ಸಾಕೊ ಅನ್ನೊ ಪುರಂದರದಾಸರ ಈ ಮಾತನ್ನು ಸತ್ಯವಾಗಿಸಿಕೊಳ್ಳಿ. ಪ್ರಾರ್ಥನೆ ಮಾಡಿ ನೀವು ಇದ್ದಲ್ಲೇ ಬೇಡಿಕೊಳ್ಳಿ, ದಯವಿಟ್ಟು ಬಂಧುಗಳೇ ಹೊರಗೆ ಬರಬೇಡಿ, ಅಲ್ಲಿಯೇ ಇರಿ. ನಿಮಗೆ  ಯುಗಾದಿ ಸಂತೋಷವನ್ನೇ ಕೊಡುತ್ತದೆ. ಆದರೆ ನೀವು ಮನೆ ಬಿಟ್ಟು ಹೊರಗೆ ಬರದೆ ಇದ್ದಾಗ ಮಾತ್ರ. ಆದಷ್ಟು ಕೈ ತೊಳೆಯಿರಿ,  ಸ್ವಚ್ಛವಾಗಿರಿ, ನಿಮಗೆ ಒಳ್ಳೆಯದಾಗಲಿ, ನಿಮಗೆ ಒಳ್ಳೆಯದಾಗಲಿ ಒಳ್ಳೆಯದಾಗಲಿ,  ನಿಮ್ಮ ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಿ.. ನಿಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button