Politics

*ಎಚ್.ಎಂ.ಟಿ ಭೂಮಿ ಡಿನೋಟಿಫಿಕೇಷನ್ ಐಎ ಸಲ್ಲಿಕೆಯೇ ನಿಯಮ ಬಾಹಿರ: ಸಚಿವ ಈಶ್ವರ ಖಂಡ್ರೆ*

ಪ್ರಗತಿವಾಹಿನಿ ಸುದ್ದಿ: ಪ್ರಸ್ತುತ ಎಚ್.ಎಂ.ಟಿ. ವಶದಲ್ಲಿರುವ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರಲ್ಲಿರುವ ಅರಣ್ಯ ಭೂಮಿ ಡಿ ನೋಟಿಫಿಕೇಷನ್ ಗೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಗೆ ಅಧಿಕಾರಿಗಳು ಐ.ಎ. ಸಲ್ಲಿಸಿರುವುದೇ ನಿಯಮ ಬಾಹಿರ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.


ತಾವು ಕಳೆದ ಸೆಪ್ಟೆಂಬರ್ 25ರಂದು ಸ್ಥಳ ಪರಿಶೀಲನೆ ನಡೆಸಿದಾಗ ನೂರಾರು ಎಕರೆ ಪ್ರದೇಶ ದಟ್ಟ ಅರಣ್ಯದಂತೆ ಇರುವುದನ್ನು ಪ್ರತ್ಯಕ್ಷ ಕಂಡಿದ್ದೇನೆ. ಆದರೆ, ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ವರದಿ ತಯಾರಿಸಿ, ಡಿನೋಟಿಫಿಕೇಷನ್ ಗೆ ಕೆಲವು ಉನ್ನತ ಅಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳು 2020ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಇಡೀ ಪ್ರಕ್ರಿಯೆಯೇ ಕಾನೂನು ಬಾಹೀರವಾಗಿದೆ. ಹೀಗಾಗಿ ಐ.ಎ. ಹಿಂಪಡೆಯಲು ಸೂಚಿಸಲಾಗಿದೆ ಎಂದು ಖಂಡ್ರೆ ಸ್ಪಷ್ಟೀಕರಣ ನೀಡಿದ್ದಾರೆ.


ವಿವಿಧ ಇಲಾಖೆ, ಸರ್ಕಾರಿ ಸ್ವಾಮ್ಯದ ಕಂಪನಿಗಳ ವಶದಲ್ಲಿರುವ ಮತ್ತು ಡಿನೋಟಿಫಿಕೇಷನ್ ಆಗದ ಅರಣ್ಯ ಭೂಮಿಯ ಕುರಿತಂತೆ 2015ರಲ್ಲಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಲಾದ ಉನ್ನತ ಮಟ್ಟದ ಸಮಿತಿಯ ಅನೇಕ ಸಭೆಗಳಲ್ಲಿ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯ ಬಗ್ಗೆ ಚರ್ಚೆಯಾಗಿದೆ. 2018ರ ಜುಲೈ 17 ರಂದು ನಡೆದ ಸಭೆಯಲ್ಲಿ ಎಚ್.ಎಂ.ಟಿ. ಅನಧಿಕೃತವಾಗಿ ತನ್ನ ಬಳಿ ಇರುವ ಅರಣ್ಯ ಭೂಮಿಯ ಹರಾಜು ಮಾಡುತ್ತಿದೆ, ಮಾರಾಟ ಮಾಡುತ್ತಿದೆ ಮತ್ತು ಇಲ್ಲಿ ಇನ್ನೂ ಹಸಿರು ಹೊದಿಕೆ ಉಳಿದಿದ್ದು, ಇದು ಬೆಂಗಳೂರಿಗೆ ಜೀವರಕ್ಷಕ ಮತ್ತು ಅತ್ಯಗತ್ಯವಾದ ಶ್ವಾಸತಾಣ (much needed lung space in Bangalore) ವಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.


ಜೊತೆಗೆ ದಿ.15.07.2020ರಲ್ಲಿ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 1980ರ ಪೂರ್ವದಲ್ಲಿ ವಿವಿಧ /ಸರ್ಕಾರಿ ಸಂಸ್ಥೆಗಳಿಗೆ ಆದ ಪ್ರದೇಶಗಳ ಮಂಜೂರಾತಿಗಳ ಬಗ್ಗೆ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯಪಡೆದು ಅಂತಹ ಅರಣ್ಯಪ್ರದೇಶಗಳ ಡಿನೋಟಿಫಿಕೇಶನ್ ನ ಪ್ರಸ್ತಾವನೆಯನ್ನು ಸಚಿವ ಸಂಪುಟದ ನಿರ್ಧಾರಕ್ಕಾಗಿ ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆರವರಿಗೆ ಸೂಚಿಸಿದೆ.


ಆದರೂ, ಡಿ ನೋಟಿಫಿಕೇಷನ್ ಅನುಮತಿ ಕೋರಿ ಸುಪ್ರೀಂಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಸಚಿವ ಸಂಪುಟದ ಗಮನಕ್ಕೆ ತಾರದೆ, ಹೈ ಲೆವೆಲ್ ಕಮಿಟಿಯ ಸಭೆಯಲ್ಲಿ ಸ್ಥಿರೀಕರಣವನ್ನೂ ಪಡೆಯದಿರುವುದು ಕಾನೂನು ಬಾಹಿರವಾಗುತ್ತದೆ ಈ ಹಿನ್ನೆಲೆಯಲ್ಲಿ ಐಎ ಹಿಂಪಡೆಯಲು ಸೂಚಿಸಿದೆ. ಇದರ ಹಿಂದೆ ಯಾವುದೇ ರಾಜಕೀಯ ಕಾರಣವೂ ಇಲ್ಲ, ರಾಜಕೀಯ ದ್ವೇಷವೂ ಇಲ್ಲ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.


ಮಿಗಿಲಾಗಿ 2015ರಲ್ಲಿ ಅಂದಿನ ಅರಣ್ಯ ಇಲಾಖೆಯ ಉನ್ನತಾಧಿಕಾರಿ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64ಎ ಮತ್ತು 76 ಹಾಗೂ 99ರಡಿಯಲ್ಲಿ ಮತ್ತು ನಿಯಮ 69ರ ರೀತ್ಯ ಪ್ರಕ್ರಿಯೆ ನಡೆಸಿದ್ದಾರೆ. ಆದರೂ ಎಚ್.ಎಂ.ಟಿ. ಅರಣ್ಯ ಭೂಮಿ ವಿಚಾರದಲ್ಲಿ ಸಂಪುಟದ ಅನುಮೋದನೆಯನ್ನೇ ಪಡೆಯದೆ ಐಎ ಸಲ್ಲಿಸಲಾಗಿದೆ. ಇಲ್ಲಿ ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರ ಉಲ್ಲಂಘನೆಯೂ ಆಗಿದೆ. ಈ ಕರ್ತವ್ಯ ಲೋಪಕ್ಕೆ ಕಾರಣ ಕೇಳಿ ಸಂಬಂಧಿತ ಎಲ್ಲ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.


165 ಎಕರೆ ಅಕ್ರಮ ಪರಭಾರೆ:
ಎಚ್.ಎಂ.ಟಿ. ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ 14300 ಕೋಟಿ ಬೆಲೆ ಬಾಳುವ ಜಮೀನು ಎಂದು ಹೇಳಿಕೊಂಡಿದೆ. ಆದರೆ ಈಗಾಗಲೇ 165 ಎಕರೆ ಅರಣ್ಯ ಭೂಮಿಯನ್ನು 300 ಕೋಟಿ ರೂಪಾಯಿಗಳಿಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಡಿನೋಟಿಫಿಕೇಷನ್ ಆಗದ ಅರಣ್ಯ ಭೂಮಿ ಮಾರಾಟ ಮಾಡಿರುವುದೂ ಅಕ್ರಮ ಮತ್ತು ಕಾನೂನು ಬಾಹೀರ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.


ಎಚ್.ಎಂ.ಟಿ. ವಶದಲ್ಲಿರುವ ಭೂಮಿ 7 ಕೋಟಿ ಕನ್ನಡಿಗರ ಆಸ್ತಿ:
ಎಚ್.ಎಂ.ಟಿ.ಗೆ ಭೂಮಿಯನ್ನು ದಾನದ ಮೂಲಕ ಮಂಜೂರು ಮಾಡುವ ಮೂಲಕ ನೀಡಲಾಗಿದೆ. ಆದರೆ ಅರಣ್ಯ ಭೂಮಿಯನ್ನು ದಾನ ನೀಡಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿರುವ ಈಶ್ವರ ಖಂಡ್ರೆ, ಪ್ರಸ್ತುತ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿ 7 ಕೋಟಿ ಕನ್ನಡಿಗರ ಆಸ್ತಿ ಎಂದು ಪುನರುಚ್ಚರಿಸಿದ್ದಾರೆ.


ಈ ಜಮೀನಿನಲ್ಲಿ ಲಾಲಾಬಾಗ್ ಮಾದರಿಯಲ್ಲಿ ಒಂದು ಬೃಹತ್ ಸಸ್ಯೋದ್ಯಾನ ಮಾಡಿ ಹಸಿರು ಹೊದಿಕೆ ಹೆಚ್ಚಳ ಮಾಡುವುದು ತಮ್ಮ ಗುರಿಯಾಗಿದೆ. ಕನ್ನಡಿಗರ ಭೂಮಿ ಉದ್ಯಾನ ಆಗಿ ಬೆಂಗಳೂರಿಗರಿಗೆ ಆಮ್ಲಜನಕ ನೀಡಬೇಕೋ ಅಥವಾ ರಿಯಲ್ ಎಸ್ಟೇಟ್ ಪಾಲಾಗಿ ಕಾಂಕ್ರೀಟ್ ಕಾಡಾಗಬೇಕೋ ಎಂದು ಪ್ರಶ್ನಿಸಿದ್ದಾರೆ.


ಗೆಜೆಟ್ ಅಧಿಸೂಚನೆಯೇ ಇಲ್ಲ:
ಎಚ್.ಎಂ.ಟಿ.ಗೆ ಬಿಡುಗಡೆ ಮಾಡಿ ಕೊಟ್ಟಿರುವ 2 ಎಕರೆ 3 ಎಕರೆ ಭೂಮಿಗೆ ಸಂಬಂಧಿಸಿದಂತೆ 1960ರ ದಶಕದಲ್ಲಿ ಗೆಜೆಟ್ ಅಧಿಸೂಚನೆ ಆಗಿದೆ. ಆದರೆ 400ಕ್ಕೂ ಹೆಚ್ಚು ಎಕರೆ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಗೆಜೆಟ್ ಆಗಿಲ್ಲ. ಮಿಗಿಲಾಗಿ 64 ಎ ಪ್ರಕ್ರಿಯೆಯ ಆದೇಶಕ್ಕೆ ಅರಣ್ಯಾಧಿಕಾರಿ ಅಲ್ಲದ ಐ.ಎ.ಎಸ್. ಅಧಿಕಾರಿ ತಡೆ ನೀಡುತ್ತಾರೆ. ಇದೂ ಕೂಡ ಕಾನೂನು ಬಾಹೀರ. ಹೀಗಾಗಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದ ಎಚ್.ಎಂ.ಟಿ. ವಶದಲ್ಲಿರುವ ಜಮೀನು ಅರಣ್ಯವೇ ಆಗಿದೆ ಎಂದೂ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button