Latest

ಹವ್ಯಾಸಗಳು ಜೀವನದಲ್ಲಿ ಉತ್ಸಾಹವನ್ನು ತುಂಬುವ ಕೀಲಿ ಮಣೆಗಳು

ಲೇಖನ – ರವಿ ಕರಣಂ

ಬಹುತೇಕ ಜನರಲ್ಲಿ ಹಲವಾರು ಹವ್ಯಾಸಗಳು ಇರುತ್ತವೆ. ಕೆಲವರಿಗೆ ಓದುವುದು, ಆಟವಾಡುವುದು, ಮೊಬೈಲ್ ವಿಡಿಯೋ ನೋಡುವುದು, ಟಿ ವಿ ನೋಡುವುದು,ಸಾಹಿತ್ಯ ರಚನೆಯಲ್ಲಿ ತೊಡಗುವುದು, ಪ್ರವಾಸದಲ್ಲಿ ತೊಡಗುವುದು, ಹರಟೆ ಹೊಡೆಯುವುದು, ಉಪದೇಶ ಮಾಡುವುದು, ಹಲವು ಸಾಮಗ್ರಿಗಳ ಸಂಗ್ರಹ ಮಾಡುವುದು, ಹೂ ಗಿಡಗಳನ್ನು ಬೆಳೆಸುವುದು, ಹಾಡುವುದು ಅಥವಾ ಗಾಯನ, ಫೋಟೋಗ್ರಫಿ, ಮಕ್ಕಳಲ್ಲಿ ಆಟವಾಡುವುದು, ಮರವೇರುವುದು, ಸೈಕಲ್‌ ತುಳಿಯುವುದು, ಈಜುವುದು, ಚಿತ್ರ ಬಿಡಿಸುವುದು, ಶಾಲಾ ವಿಷಯಗಳ ಕಂಠಪಾಠ ಮಾಡುವುದು ಇತ್ಯಾದಿಯಾಗಿ ಹಲವಾರು ಬಗೆಯಲ್ಲಿ ಹವ್ಯಾಸಗಳು ಒಳಗೊಂಡಿರುತ್ತವೆ. ಇವುಗಳಲ್ಲಿ ಯಾವುದು ಹಿತಕರ? ಯಾವುದು ಅಹಿತಕರ?ಎಂಬುದನ್ನು ಚರ್ಚಿಸುವ ಅಗತ್ಯವೇ ಇಲ್ಲ. ಅದು ಅವರವರ ವ್ಯಕ್ತಿತ್ವಕ್ಕೆ, ಮನೋಭಾವಕ್ಕೆ, ಯೋಚನಾ ಲಹರಿಗೆ ತಕ್ಕಂತೆ ಇರುವಂತಹವು. ಇದನ್ನು ಸಾರ್ವತ್ರಿಕಗೊಳಿಸಲು ಸಾಧ್ಯವಿಲ್ಲ.

ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಇರುತ್ತದೆ. ಹಾಗಾಗಿ “ಲೋಕೋಭಿನ್ನ ರುಚಿ” ಎಂಬ ಮಾತನ್ನು ನಾವಿಲ್ಲಿ ಸ್ಮರಣೆ ಮಾಡಿಕೊಳ್ಳಬಹುದು. ಆದರೆ ಇವು ಯಾವುವೂ ಕೂಡ ಕೆಟ್ಟ ಹವ್ಯಾಸಗಳು ಎಂದು ಗಣನೆಗೆ ತೆಗೆದುಕೊಳ್ಳುವಂತವುಗಳಲ್ಲ. ಇವುಗಳನ್ನು ಕೆಲವರು “ಗೀಳು” ಎಂದು ಬಗೆಯುವುದಿದೆ. ಆದರೆ ಇದನ್ನು ಗೀಳು ಎನ್ನುವುದರ ಬದಲಾಗಿ ನಾನು “ಜೀವನದಲ್ಲಿ ಉತ್ಸಾಹ ತುಂಬುವ ಕೀಲಿ ಮಣೆಗಳು” ಎಂದು ಕರೆಯುತ್ತೇನೆ. ಇವುಗಳು ಬೇಸರದ ಸಮಯವನ್ನು, ಕೋಪದ ಸಮಯವನ್ನು, ಜಿಗುಪ್ಸೆಯ ಘಳಿಗೆಗಳನ್ನು, ಏಕತಾನತೆಯ ಗುಂಗನ್ನು, ಏಕಾಂಗಿತನದ ಕ್ರೌರ್ಯವನ್ನು ತಣ್ಣಗಾಗಿಸುವ ಹಿಮಗಡ್ಡೆಗಳು. ನಿಮಗೂ ಕೂಡ ಹಾಗೆಂದು ಎನ್ನಿಸಿದರೆ ನೀವು ಹವ್ಯಾಸಗಳ ಮಹತ್ವವನ್ನು ಅರ್ಥೈಸಿಕೊಂಡಿದ್ದೀರಿ ಎಂದೇ ತಿಳಿಯುತ್ತೇನೆ.

ಹವ್ಯಾಸಗಳು ನಾನಾ ಬಗೆಯ ಮುಖಗಳನ್ನು ಹೊಂದಿವೆ, ಅದು ವಯೋಮಾನ, ಕಾಲ-ಪರಿಸರ ,ಸಂದರ್ಭ, ಸನ್ನಿವೇಶಗಳಿಗೆ ಅನುಗುಣವಾಗಿ ಅದು ಮೇಳೈಸಿರುತ್ತದೆ ಎಂದು ಹೇಳಬಹುದೇನೋ! ಕೈಯಲ್ಲಿನ ಬೆರಳುಗಳು ಸಮವಾಗಿ ಇಲ್ಲದಿರುವಂತೆ ಹವ್ಯಾಸಗಳು ಸಮವಾಗಿ ಎಲ್ಲರಲ್ಲಿಯೂ ಇರಲಿಕ್ಕಿಲ್ಲ. ಒಬ್ಬರ ಹವ್ಯಾಸಗಳು ಮತ್ತೊಬ್ಬರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಅದು ಕೆಟ್ಟ ಹವ್ಯಾಸವೆಂದು ಬಗೆಯುವವರೇ ಹೆಚ್ಚು. ಹಾಗಾಗಿ ಎಲ್ಲಿಯೂ ಕೂಡ ಅವರವರ ಹವ್ಯಾಸಗಳು ಕೆಟ್ಟದ್ದಾಗಿ ಕಾಣುವುದಿಲ್ಲ ಎಂಬುದನ್ನು ಮನಗಾಣಬೇಕು. ಅದಕ್ಕೆ ಪ್ರೋತ್ಸಾಹ ಕೊಡುವ ಇಲ್ಲವೇ ಉತ್ತೇಜಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು.

ಮನೆಯಲ್ಲಿ ಮಕ್ಕಳ ಹವ್ಯಾಸಗಳಿಗೆ ಸರಿಯಾದ ಪ್ರೋತ್ಸಾಹ, ಮನ್ನಣೆ ಸಿಗದೇ ಆ ಹವ್ಯಾಸಗಳು ಕಮರಿ ಹೋಗುವುದನ್ನು ನಾವು ಕಂಡಿದ್ದೇವೆ ಮತ್ತು ಸ್ವತಃ ಅನುಭವಿಸಿರುತ್ತೇವೆ. ಇದನ್ನು ನೀವು ಒಮ್ಮೆ ಕಣ್ಣ ಮುಂದೆ ತಂದುಕೊಳ್ಳಬೇಕು. ಏಕೆಂದರೆ ಆ ಹವ್ಯಾಸಗಳು ಮನೆಯ ಹಿರಿಯರಿಗೆ ಇಷ್ಟವಿಲ್ಲ ಎಂಬ ಕಾರಣಕ್ಕಾಗಿ ಬಾಲ್ಯದಲ್ಲಿಯೇ ಅವುಗಳನ್ನು ಹಿಸುಕಿ ಹಾಕಿರುತ್ತಾರೆ. ಇದು ಅಕ್ಷಮ್ಯ ಅಪರಾಧ ಎಂದು ನಿಸ್ಸಂಶಯವಾಗಿ ಹೇಳಬಹುದು.

ವೃತ್ತಿ ಮತ್ತು ಪ್ರವೃತ್ತಿ ಎಂದೆಲ್ಲ ವಿಂಗಡಿಸಿ ಹೇಳುತ್ತಾರಲ್ಲ! ಆ ಪ್ರವೃತ್ತಿಗಳೆಲ್ಲ ಹವ್ಯಾಸಗಳ ಪರದೆಯೊಳಗೆ ಇರುವಂತಹವು. ಎಲ್ಲರೂ ವೈದ್ಯರು, ಸಿವಿಲ್ ಇಂಜಿನಿಯರ್ ಗಳು, ಸಾಫ್ಟ್ ವೇರ್ ಇಂಜಿನಿಯರ್ ಗಳು, ಐಎಎಸ್, ಕೆಎಎಸ್, ಐಪಿಎಸ್, ಶಿಕ್ಷಕ, ಉಪನ್ಯಾಸಕ, ವಕೀಲ,ಬ್ಯಾಂಕರ್, ವ್ಯಾಪಾರಿ, ರಾಜಕಾರಣಿ, ಕಾರ್ಮಿಕ, ಕೈಗಾರಿಕೋದ್ಯಮಿ ಇನ್ನೂ ಏನೇನೋ ಆಗಬೇಕೆಂದೇನೂ ಇಲ್ಲ. ಅದು ಅವರ ಜೀವನ ಕಟ್ಟಿಕೊಳ್ಳಲು ಬೇಕಾದ ಅರ್ಹತೆಯನ್ನವಲಂಬಿಸಿರುತ್ತದೆ. ಮತ್ತು ಅದರಲ್ಲಿ ಎಲ್ಲರೂ ತೃಪ್ತಿ ಹೊಂದಿರುವವರೆಂದಲ್ಲ. ವೃತ್ತಿ ಬದುಕಿಗಾಗಿ, ಪ್ರವೃತ್ತಿ ಸಂತೋಷಕ್ಕಾಗಿ.

ಆದರೆ ಪ್ರವೃತ್ತಿ ಸಂತೋಷವನ್ನು ನೀಡುತ್ತದೆ. ಅಂತೆಯೇ ಒಬ್ಬ ಸಂಗೀತ ತಜ್ಞ,ಸಂಗೀತವನ್ನೋ, ಚಿತ್ರ ಕಲಾವಿದ, ಚಿತ್ರಕಲೆಯನ್ನೋ ವೃತ್ತಿಯನ್ನಾಗಿಸಿಕೊಂಡು, ಅವನು ಜೀವಿಸಬಲ್ಲ. ಆದರೆ ವೃತ್ತಿ ಎಂದೂ ಪ್ರವೃತ್ತಿಯಾಗಲಾರದು. ಅದು ಒಂದು ನಿಯಮಗಳ ಚೌಕಟ್ಟಿನ್ನು ಹೊಂದಿರುತ್ತದೆ. ಮತ್ತು ಅದಕ್ಕೆ ನಿಯಂತ್ರಣವಿರುತ್ತದೆ. ಆದರೆ ಹವ್ಯಾಸಗಳಿಗೆ ಅಥವಾ ಪ್ರವೃತ್ತಿಗಳಿಗೆ ನಿಯಂತ್ರಣವೆಂಬದು ಇರುವುದಿಲ್ಲ. ಅದು ಸ್ವಚ್ಛಂದ ಬಾನಲ್ಲಿ ಹಾರಾಡುವ ಹಕ್ಕಿಯಂತೆ ಎಂಬುದು ಸಾರ್ವಕಾಲಿಕ ಸತ್ಯ. ಅನಿಸಿಲ್ಲವೇ? ಉದಾಹರಣೆಗೆ ಒಬ್ಬ ಕವಿ ಅದ್ಭುತ ಭಾವನೆಗಳನ್ನು, ಅನುಭವಗಳನ್ನು, ರಸವತ್ತಾಗಿ, ಅಲಂಕಾರಗಳ ಬಿಂದಿಗೆಯಲ್ಲಿ ಅದ್ದಿದ ಸುಂದರ ಸಾಲುಗಳನ್ನು ಒಡಮೂಡಿಸಿ, ಕಾವ್ಯ ರಚಿಸುತ್ತಾನೆ. ಅವುಗಳ ಸಂಗ್ರಹ ಮಾಡಿ, ಒಂದು ಪುಸ್ತಕವನ್ನು ಬಿಡುಗಡೆ ಮಾಡುತ್ತಾನೆ. ಬಿಡುಗಡೆ ಮಾಡಿದ ಪುಸ್ತಕವು ಹಣವನ್ನು ತಂದುಕೊಡುತ್ತದೆ. ಕಥೆ-ಕಾದಂಬರಿಕಾರನದ್ದು ಹಾಗೆಯೇ. ಈ ಮೂಲಕ ಪ್ರವೃತ್ತಿಯು ವೃತ್ತಿಯಾಗಿ ಬದಲಾಗುತ್ತದೆ. ಅದರಂತೆಯೇ ಒಬ್ಬ ಚಿತ್ರ ಕಲಾವಿದ, ಜಗತ್ತಿನ ನಾನಾ ಮೂಲೆಗಳಲ್ಲಿ ಸಂಚರಿಸಿ, ನಿಸರ್ಗವನ್ನು ನೋಡಿ ಕಣ್ಣಾರೆ ಕಂಡು, ಅನುಭವಿಸಿ, ಅದನ್ನು ಬಿಳಿ ಕಾಗದದ ಮೇಲೆ ಬಣ್ಣಗಳ ಮೂಲಕ ಒಡ ಮೂಡಿಸುತ್ತಾನೆ. ಅದನ್ನು ನೋಡಿದ ಜನ ಬೆರಗುಗೊಂಡು, ಸಂತೋಷದಿಂದ ಅದನ್ನು ಖರೀದಿಸುತ್ತಾರೆ. ಆ ಮೂಲಕ ಚಿತ್ರಕಲಾವಿದ ಹಣವನ್ನು ಸಂಪಾದಿಸುತ್ತಾನೆ. ಇದು ಎಡೆ ಇಲ್ಲದೆ ಯಾರ ಹಂಗಿನಲ್ಲಿಯೂ ಇರದೇ, ಇದು ಹಣವನ್ನು ಮಾಡಿಕೊಳ್ಳುವ ಒಂದು ಮಾಧ್ಯಮವಾಗಬಹುದು. ಆದರೆ ಒಬ್ಬ ಐಎಎಸ್ ಅಧಿಕಾರಿ ಹಾಗಾಗಲಾರ. ವೃತ್ತಿಯನ್ನು ಹವ್ಯಾಸವೆಂದು ಭಾವಿಸಿ, ತನ್ನ ಮನಸೋ ಇಚ್ಛೆ ಆಡಳಿತ ನಡೆಸಲು ಬರುವುದಿಲ್ಲ. ಕಾರಣ ವೃತ್ತಿ ಸಂವಿಧಾನದ ಅಡಿಯಲ್ಲಿ, ನೀತಿ ನಿಯಮಗಳನ್ನು ಪಾಲಿಸಿಕೊಂಡು, ಒಂದು ಜಿಲ್ಲೆಯನ್ನು ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಅಲ್ಲಿ ಸಂತೋಷಕ್ಕಿಂತ ಒತ್ತಡವೇ ಹೆಚ್ಚು. ಬಲೆಯೊಳಗೆ ಬಿದ್ದ ಹಕ್ಕಿಯಂತೆ ಅಲ್ಲವೇ?

ಮದ್ಯ ಸೇವನೆ, ತಂಬಾಕು ಅಗೆಯುವುದು, ಸಿಗರೇಟ್, ಬೀಡಿ ಸೇದುವುದು, ಸದಾಕಾಲ ಬಾಯಿ ತುಂಬಾ ತಾಂಬೂಲ ಅಗೆಯುವುದು ಇವೆಲ್ಲವುಗಳು ದುರಭ್ಯಾಸಗಳಾಗಿರುತ್ತವೆ. ಇವುಗಳನ್ನು ಕೆಟ್ಟ ಹವ್ಯಾಸಗಳು ಎಂದು ಕರೆಯಲು ಬರುವುದಿಲ್ಲ. ಹವ್ಯಾಸಗಳು ಕೆಟ್ಟ ಮುಖವನ್ನು ಎಂದಿಗೂ ಧರಿಸಲಿಕ್ಕಿಲ್ಲ. ಆದರೆ ಆಡು ನುಡಿಯಲ್ಲಿ ಅನಾದಿ ಕಾಲದಿಂದಲೂ ‘ಕೆಟ್ಟ ಹವ್ಯಾಸ’ ಎಂದು ಸಂಬೋಧಿಸುತ್ತಲೇ ಬಂದಿದ್ದೇವೆ. ಅದು ದೈನಂದಿನ ಅಭ್ಯಾಸಗಳಲ್ಲಿ ಬರುವಂತಹವುಗಳು. ಒಂದು ಅಭ್ಯಾಸ ಮತ್ತೊಂದು ದುರಭ್ಯಾಸ ಎಂದು ಎರಡು ಬಗೆಯಲ್ಲಿ ವಿಂಗಡಣೆಯಾಗಿದೆ.

ಅಭ್ಯಾಸದಲ್ಲಿ ಯೋಗ, ಧ್ಯಾನ, ಮನೆಗೆಲಸ ನಿರ್ವಹಣೆ, ಸಹಾಯ ಮಾಡುವುದು, ಉತ್ತಮ ಮಾತುಕತೆ, ಸಂಬಂಧಗಳಿಗೆ ಆದ್ಯತೆ ಕೊಡುವುದು ಮುಂತಾದವುಗಳು. ಅವೆಲ್ಲ ಸಭ್ಯತೆಯ ನೆರಳಲ್ಲಿ ಇರುವಂತಹವುಗಳು. ಸಹನೀಯವಾದವುಗಳು. ದುರಭ್ಯಾಸಗಳಲ್ಲಿ ಕಿವಿ, ಹಲ್ಲುಗಳಲ್ಲಿ ಕಡ್ಡಿ ಹಾಕುವುದು, ಮೂಗು, ಬಾಯಿಯಲ್ಲಿ ಬೆರಳು ಹಾಕುತ್ತಲೇ ಇರುವುದು, ಕೊಳಕು ಬಟ್ಟೆ ಧರಿಸುವುದು, ದೇಹದ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿರುವುದು ಇನ್ನೇನೆಲ್ಲ ಆಗಬಹುದೋ ಅವೆಲ್ಲ ದುರಭ್ಯಾಸಗಳು. ಅರ್ಥಾತ್ ಅಸಹ್ಯ ಹುಟ್ಟಿಸುವ ಸಂಗತಿಗಳಾಗಿರುತ್ತವೆ. ಅಥವಾ ಎಲ್ಲರಿಗೂ ಮುಜುಗರ ತರುವಂತಹವುಗಳಾಗಿರುತ್ತವೆ.

ಅಭ್ಯಾಸವೆಂದರೆ ನಿರಂತರತೆಯನ್ನು ಒಳಗೊಂಡಿರುತ್ತದೆ. ಅದಕ್ಕೆ ಪುರುಸೊತ್ತು ಎಂಬುದು ಇರುವುದಿಲ್ಲ. ಆದರೆ ಹವ್ಯಾಸ ಎಂಬುದು ನಿರಂತರತೆಯನ್ನು ಹೊಂದಿರುವುದಿಲ್ಲ ಅಥವಾ ಹೊಂದಿರಲು ಬಹುದು. ಅದಕ್ಕೆ ಕಟ್ಟುಪಾಡುಗಳಿಲ್ಲ. ಅದು ತನಗೆ ಬೇಕಾದಾಗ, ತನಗೆ ಬೇಡವೆನಿಸಿದಾಗ ರೂಪ ತಳೆಯುವ ಗುಣವನ್ನು ಹೊಂದಿರುತ್ತದೆ.
ಹವ್ಯಾಸಗಳನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು. ಅವರವರ ಹವ್ಯಾಸಗಳಿಗೆ ನೀರು ಎರೆದು ಪೋಷಿಸುವಂತೆ ಆಗಬೇಕು. ಇದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹವ್ಯಾಸಗಳಿಗೆ ಹೆಚ್ಚು ಬೆಲೆ ಇದೆ. ವೃತ್ತಿ ಒಂದು ಕಡೆ ತನ್ನ ಸ್ಥಾನಮಾನವನ್ನು ಗಳಿಸಿಕೊಂಡಿದ್ದರೆ, ಅದಕ್ಕಿಂತ ಹತ್ತು ಪಟ್ಟು ಹವ್ಯಾಸಗಳು ಸ್ಥಾನಮಾನಗಳನ್ನು ಪಡೆದುಕೊಂಡಿರುತ್ತವೆ.
ಸಂಗೀತ ಕಲಾವಿದರು, ಚಿತ್ರ ಕಲಾವಿದರು, ಕವಿಗಳು, ಸಾಹಿತಿಗಳು, ನಾಟಕಕಾರರೆಲ್ಲ ಇತಿಹಾಸದ ಪುಟಗಳಲ್ಲಿ ಉಳಿದುಕೊಂಡಿದ್ದಾರೆ. ಹಾಗೆಯೇ ನಮ್ಮಲ್ಲೂ ಕೂಡಾ. ಕಾಳಿದಾಸ, ಪಂಪ,ರನ್ನ, ಕುಮಾರವ್ಯಾಸ, ತಾನಸೇನ, ಪುರಂದರ ದಾಸ, ಬೀರಬಲ್, ತೆನಾಲಿ ರಾಮಕೃಷ್ಣ ಹೀಗೇ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ. ಇವರೆಲ್ಲ ಹವ್ಯಾಸವನ್ನು ಜೀವನದ ಉಸಿರಾಗಿಸಿಕೊಂಡವರು.

ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ಹವ್ಯಾಸವನ್ನು ಬೆಳೆಸಿಕೊಂಡಿರಲೇಬೇಕು. ಅವುಗಳಿಂದ ಸ್ವಲ್ಪಮಟ್ಟಿಗೆ ಮನಸಿಗೆ ನಿರಾಳತೆ ದೊರಕುತ್ತದೆ. ಅಂದಾಗ ಮಾತ್ರ ವ್ಯಕ್ತಿಯ ಜೀವನದಲ್ಲಿ ಉತ್ಸಾಹ ತುಂಬಿ ತುಳುಕುತ್ತಿರುತ್ತದೆ. ತನಗೆ ಬೇಡವಾದ ಸಂದರ್ಭಗಳಲ್ಲಿ ಹವ್ಯಾಸಗಳನ್ನೇ ಬಳಸಿಕೊಂಡು, ಜೀವನದ ಉತ್ಸುಕತೆಯನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ಮನೋವೈದ್ಯರು ಸಹ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತಾರೆ. ಅದರ ಮಹತ್ವವನ್ನು ತಿಳಿಸುತ್ತಾರೆ. ಇದೆಲ್ಲ ಆರೋಗ್ಯದ ಗುಟ್ಟು ಸಹ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button