Belagavi NewsBelgaum NewsKarnataka NewsLatestSports

*ಬೆಳಗಾವಿಯಿಂದಲೇ ಹಾಕಿಗೆ ರಾಷ್ಟ್ರೀಯ ಕ್ರೀಡೆ ಮಾನ್ಯತೆಗೆ ಕೂಗು ಆರಂಭವಾಗಲಿ: ಎಂ.ಕೆ.ಹೆಗಡೆ*

ಪ್ರಗತಿವಾಹಿನಿ ಸುದ್ದಿ: ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಅಧಿಕೃತವಾಗಿ ಘೋಷಿಸುವಂತೆ ಬೆಳಗಾವಿಯಿಂದಲೇ ಕೂಗು ಆರಂಭಿಸೋಣ ಎಂದು ಹಿರಿಯ ಪತ್ರಕರ್ತ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ ಕರೆ ನೀಡಿದ್ದಾರೆ.


ಬೆಳಗಾವಿಯ ಲೇಲೇ ಮೈದಾನದಲ್ಲಿ ಶುಕ್ರವಾರ, ಹಾಕಿ ಇಂಡಿಯಾ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಪಂದ್ಯಾವಳಿಯ ವಿಜೇತರಿಗೆ ಟ್ರೋಫಿ ವಿತರಿಸಿ ಅವರು ಮಾತನಾಡುತ್ತಿದ್ದರು. ಅತ್ಯಂತ ಪವಿತ್ರವಾದ ಲೇಲೇ ಮೈದಾನದಲ್ಲಿ ನಾವು ಹಾಕಿ ಇಂಡಿಯಾದ ಶತಮಾನೋತ್ಸವ ಆಚರಿಸುತ್ತಿದ್ದೇವೆ. ನೂರಾ ಒಂದು ವರ್ಷದ ಹಿಂದೆ ಇದೇ ಜಾಗದಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ನಡೆದಿತ್ತು. ಭಾರತ ಸ್ವಾತಂತ್ರ್ಯ ಚಳವಳಿಗೆ ಮಹತ್ವದ ತಿರುವು ಕೊಟ್ಟ ಜಾಗ ಇದು. ಈ ಸ್ಥಳದಿಂದಲೇ ಹಾಕಿಗೆ ರಾಷ್ಟ್ರೀಯ ಕ್ರೀಡೆ ಮಾನ್ಯತೆ ಕೂಗು ಆರಂಭವಾಗಲಿ ಎಂದು ಅವರು ಹೇಳಿದರು.


ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಎಂದು ಬಹಳಷ್ಟು ಜನರು ತಿಳಿದಿದ್ದಾರೆ. ಆದರೆ ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾಲಯವೇ ಮಾಹಿತಿ ಹಕ್ಕು ಅಡಿಯಲ್ಲಿ ಸ್ಪಷ್ಟನೆ ನೀಡಿದೆ. ಈಗ ಶತಮಾನೋತ್ಸವದ ಸಂದರ್ಭದಲ್ಲಿ ನಾವು ಅಂತಹ ಬೇಡಿಕೆಯನ್ನು ಮುಂದಿಡಬೇಕು. ಬೆಳಗಾವಿಯ ಈ ನೆಲದಿಂದ ಕೂಗು ಆರಂಭಿಸಿದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ಎಂ.ಕೆ.ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

Home add -Advt


ಐಆರ್ ಎಸ್ ಅಧಿಕಾರಿ ಸಾಗರ್ ದೇಶಪಾಂಡೆ, ಹಿರಿಯ ಸಾಮಾಜಿಕ ಕಾರ್ಯಕರ್ತೆ ಶೈಲಜಾ ಭಿಂಗೆ, ಹಾಕಿ ಬೆಳಗಾವಿ ಅಧ್ಯಕ್ಷ ಗೂಳಪ್ಪ ಹೊಸಮನಿ, ಕಾರ್ಯದರ್ಶಿ ಪ್ರಕಾಶ ಕಾಲಕುದ್ರೀಕರ್, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಮಲ್ಲೇಶ ಚೌಗಲೆ, ನವೀನಾ ಶೆಟ್ಟಿಗಾರ, ವಿಕಾಸ ಕಲಘಟಗಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. 2 ದಿನಗಳ ಕಾಲ ನಡೆದ ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ 7 ಶಾಲೆ- ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಅಮೋಧ ರಾಜ್ ಭಿಂಗೆ ಪ್ರಾಯೋಜಕತ್ವ ವಹಿಸಿದ್ದರು.

Related Articles

Back to top button